ಬೆಂಗಳೂರಿನಲ್ಲಿ ಯುವತಿಯೊಬ್ಬಳು ₹10 ಕೋಟಿ ಮೌಲ್ಯದ 5 ಕೆಜಿಗೂ ಹೆಚ್ಚು ಎಂಡಿಎಂಎ ಮಾದಕ ದ್ರವ್ಯದೊಂದಿಗೆ ಬಂಧಿತಳಾಗಿದ್ದಾಳೆ. ಈಕೆ 3 ವರ್ಷಗಳ ಹಿಂದೆ ಭಾರತಕ್ಕೆ ಬಂದಿದ್ದು, ಡ್ರಗ್ ಪೆಡ್ಲಿಂಗ್‌ನಲ್ಲಿ ತೊಡಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.

ಬೆಂಗಳೂರು (ಜೂ. 13): ಮಾದಕ ದಂಧೆಗೆ ತಕ್ಷಣದ ತಡೆ ನೀಡುವ ನಿಟ್ಟಿನಲ್ಲಿ ಬೆಂಗಳೂರು ನಗರ ಸಿಸಿಬಿ ಹಾಗೂ ಚಿಕ್ಕಜಾಲ ಠಾಣಾ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಮಹತ್ವದ ಹೆಗ್ಗಳಿಕೆ ಸಿಕ್ಕಿದೆ. ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದ ವಿದೇಶಿ ಮಹಿಳೆಯನ್ನು ಬಂಧಿಸಿದ್ದಾರೆ. ಬಂಧಿತ ಮಹಿಳೆಯ ಬಳಿ ₹10 ಕೋಟಿ ಮೌಲ್ಯದ 5 ಕೆಜಿ 325 ಗ್ರಾಂ ಎಂಡಿಎಂಎ ಮಾದಕ ದ್ರವ್ಯ ಪತ್ತೆಯಾಗಿದೆ.

ಬಂಧಿತಳನ್ನು ಪ್ರಿನ್ಸೆಸ್ ಎಂಬ ವಿದೇಶಿ ಮೂಲದ ಮಹಿಳೆ ಎಂದು ಗುರುತಿಸಲಾಗಿದೆ. ಈಕೆ 3 ವರ್ಷಗಳ ಹಿಂದೆ ಭಾರತಕ್ಕೆ ಬಿಸಿನೆಸ್ ವೀಸಾದೊಂದಿಗೆ ಪ್ರವೇಶ ಪಡೆದಿದ್ದಳು. ಆರಂಭದಲ್ಲಿ ನವದೆಹಲಿಯಲ್ಲಿ ವಾಸವಿದ್ದ ಈಕೆ ನಂತರ ಶಿಕ್ಷಣ ಪಡೆಯುವುದಾಗಿ ತೆಲಂಗಾಣದ ಯೂನಿವರ್ಸಿಟಿಯಲ್ಲಿ ಎಜುಕೇಷನ್ ವೀಸಾ ಪಡೆದು ಸ್ಥಳಾಂತರವಾಗಿದ್ದಳು. ಆದರೆ, ಕಾಲೇಜಿಗೆ ಸೇರದೇ ನೇರವಾಗಿ ಡ್ರಗ್ ಪೆಡ್ಲಿಂಗ್ ದಂಧೆಗೆ ಇಳಿದ ಈಕೆ, ತೆಲಂಗಾಣದಿಂದ ಬೆಂಗಳೂರಿಗೆ ಬಸ್ ಮುಖಾಂತರ ಬಂದು ಎಂಡಿಎಂಎ ಸಾಗಾಟ ಮಾಡುತ್ತಿದ್ದಳು. ಸದ್ಯ ಈಕೆ ಚಿಕ್ಕಜಾಲ ಠಾಣಾ ವ್ಯಾಪ್ತಿಯ ರಾಜಾನುಕುಂಟೆ ಪ್ರದೇಶದಲ್ಲಿ ಹೊಸ ಚೂಡಿದಾರ್ ಡ್ರೆಸ್ ಪೀಸ್‌ಗಳ ನಡುವೆ ಡ್ರಗ್‌ಗಳನ್ನು ಅಡಗಿಸಿ ಮಾರಾಟ ಮಾಡುತ್ತಿದ್ದ ವೇಳೆ ಬಂಧನಕ್ಕೊಳಗಾಗಿದ್ದಾಳೆ.

ಕಾರ್ಯಾಚರಣೆ ವೇಳೆ ಸಿಸಿಬಿ ಹಾಗೂ ಚಿಕ್ಕಜಾಲ ಪೊಲೀಸರು 5.3 ಕೆಜಿ ಎಂಡಿಎಂಎ ಜೊತೆಗೆ 10 ಡ್ರೆಸ್ ಪೀಸ್ ಮತ್ತು ಒಂದು ಆ್ಯಪಲ್ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ. ಈ ಕುರಿತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದು, ಈ ಪ್ರಕರಣದ ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ. ಘಟನೆಯ ಕುರಿತು ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ Narcotic Drugs and Psychotropic Substances Act ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತ ಮಹಿಳೆಯ ಹಿಂದಿನ ಹಿನ್ನೆಲೆ, ಡ್ರಗ್ ನೆಟ್‌ವರ್ಕ್ ಮತ್ತು ಇತರ ಸಹಭಾಗಿಗಳ ಬಗ್ಗೆ ತನಿಖೆ ನಡೆಯುತ್ತಿದೆ.