ಯಾದಗಿರಿಯ ಮಲ್ಲಿಕಾರ್ಜುನ ಮುತ್ಯಾ ಅವರು ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದೆ. ಈ ಘಟನೆಯು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ.

ಯಾದಗಿರಿ (ಫೆ.25): ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಹಿನ್ನೆಲೆ ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನ ಮಹಲ್ ರೋಜಾ ಗ್ರಾಮದ ಪ್ರಖ್ಯಾತ ಯಮನೂರಪ್ಪ ಮುತ್ಯಾ ಮಠದ ಮಲ್ಲಿಕಾರ್ಜುನ ಮುತ್ಯಾ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತ ವಿಡಿಯೋಗಳು ವ್ಯಾಪಕವಾಗಿ ಹರಿದಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ವಿಡಿಯೋ ವೈರಲ್ ಆಗಿರುವ ಹಿನ್ನೆಲೆ ಇದರ ಗಂಭೀರತೆ ಅರಿತ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಇದೀಗ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಲ್ಲಿಕಾರ್ಜುನ ಮುತ್ಯಾ ವಿಡಿಯೋದಲ್ಲೇನಿದೆ?

ವೈರಲ್ ಆಗಿರುವ ವಿಡಿಯೋದಲ್ಲಿ ಮಲ್ಲಿಕಾರ್ಜುನ ಮುತ್ಯಾ ಬೆಡ್ ಮೇಲೆ ಕುಳಿತು ಅಪ್ರಾಪ್ತ ಬಾಲಕಿಯನ್ನು ಮಲಗಿಸಿಕೊಂಡಿರುವ ದೃಶ್ಯವಿದೆ. ಈ ವೇಳೆ ಬಾಲಕಿಗೆ ಮುತ್ತು ಕೊಡುತ್ತಾ ಅನುಚಿತವಾಗಿ ವರ್ತಿಸಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಅಷ್ಟೇ ಅಲ್ಲದೆ, ಮತ್ತೊಂದು ವಿಡಿಯೋದಲ್ಲಿ ಅದೇ ಬಾಲಕಿಯೊಂದಿಗೆ ಬಲವಂತವಾಗಿ ನೃತ್ಯ ಮಾಡುತ್ತಾ, ಬಾಲಕಿಯ ಜಡೆ ಎಳೆಯುವುದು, ಮುದ್ದಾಡುವುದು ಬಾಲಕಿಯೊಂದಿಗೆ ವಿಕೃತವಾಗಿ ವರ್ತಿಸಿರುವ ದೃಶ್ಯಗಳು ಕಂಡುಬಂದಿವೆ. ಈ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಅಂತರರಾಜ್ಯ ಭಕ್ತರನ್ನು ಹೊಂದಿರುವ ಮುತ್ಯಾ

ಮಲ್ಲಿಕಾರ್ಜುನ ಮುತ್ಯಾ ಅವರು ಕೇವಲ ಕರ್ನಾಟಕ ಮಾತ್ರವಲ್ಲದೆ ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲೂ ಅಪಾರ ಸಂಖ್ಯೆಯ ಭಕ್ತರನ್ನು ಹೊಂದಿದ್ದಾರೆ. ಆದರೆ ಈ ವಿಡಿಯೋ ಬಹಿರಂಗವಾದ ನಂತರ ಭಕ್ತ ವರ್ಗದಲ್ಲಿ ಭಿನ್ನಾಭಿಪ್ರಾಯ ಮೂಡಿದೆ. 'ಇವನು ದೇವರಲ್ಲ, ಜನರ ನಂಬಿಕೆಯೊಂದಿಗೆ ಆಟವಾಡುತ್ತಾ ಮಕ್ಕಳೊಂದಿಗೆ ವಿಕೃತವಾಗಿ ವರ್ತಿಸುತ್ತಿದ್ದಾನೆ. ತಕ್ಷಣ ಎಫ್‌ಐಆರ್ ದಾಖಲಿಸಿ ಕಠಿಣ ಕ್ರಮ ಜರುಗಿಸಬೇಕು' ಎಂದು ನೆಟ್ಟಿಗರು ಹಾಗೂ ಪ್ರಜ್ಞಾವಂತ ನಾಗರಿಕರು ಒತ್ತಾಯಿಸುತ್ತಿದ್ದಾರೆ.

ಪರ-ವಿರೋಧದ ನಡುವೆ ಮಕ್ಕಳ ಆಯೋಗ ಎಂಟ್ರಿ

ಈ ವಿವಾದದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ. ಕೆಲವರು 'ಉತ್ತರ ಕರ್ನಾಟಕ ಭಾಗದಲ್ಲಿ ಸಣ್ಣ ಮಕ್ಕಳನ್ನು ಈ ರೀತಿ ಮುದ್ದು ಮಾಡುವುದು ಸಾಮಾನ್ಯ, ಬಾಲಕಿ ಮಠದ ಆಪ್ತರ ಮಗಳಿರಬಹುದು' ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ, ವಿಡಿಯೋದಲ್ಲಿನ ವರ್ತನೆ ಅಸಭ್ಯವಾಗಿದೆ ಎಂದು ಬಹುತೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಮಕ್ಕಳ ಹಕ್ಕುಗಳ ಆಯೋಗವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಸಮಗ್ರ ವಿಚಾರಣೆಗೆ ಮುಂದಾಗಿದೆ.

YouTube video player