Asianet Suvarna News Asianet Suvarna News

ಮೆಡಿಕಲ್‌ ಸೀಟು ವಂಚನೆ: ಒಕ್ಕಲಿಗರ ಸಂಘದ ನಿರ್ದೇಶಕನ ವಿರುದ್ಧ ಕೇಸ್‌

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಮಂಜೇಗೌಡ ವಿರುದ್ಧ ವಂಚನೆ ಕೇಸ್‌, ವೈದ್ಯಕೀಯ ಸೀಟು ಕೊಡುವುದಾಗಿ 35 ಲಕ್ಷ ಪಡೆದು ವಂಚನೆ ಆರೋಪ

Case Against the Director of Okkaligara Sangh For Medical Seat Fraud in Bengaluru grg
Author
First Published Nov 27, 2022, 9:30 AM IST

ಬೆಂಗಳೂರು(ನ.27):  ಕೆಂಪೇಗೌಡ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಕಾಲೇಜ್‌ನಲ್ಲಿ (ಕಿಮ್ಸ್‌) ವೈದ್ಯಕೀಯ ಸೀಟು ಕೊಡಿಸುವುದಾಗಿ .35 ಲಕ್ಷ ಪಡೆದು ವಂಚನೆ ಮಾಡಿದ್ದಾರೆಂದು ಆರೋಪಿಸಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಎಂ.ಬಿ.ಮಂಜೇಗೌಡ ವಿರುದ್ಧ ಗುತ್ತಿಗೆದಾರರೊಬ್ಬರು ಹೈಗ್ರೌಂಡ್ಸ್‌  ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಗುತ್ತಿಗೆದಾರ ಕೆ.ಆರ್‌.ಶ್ರೀನಿವಾಸ ಎಂಬುವವರು ನೀಡಿದ ದೂರಿನ ಮೇರೆಗೆ ಎಂ.ಬಿ.ಮಂಜೇಗೌಡ ಹಾಗೂ ಅವರ ಪತ್ನಿ ಮೀನಾ ವಿರುದ್ಧ ಎಫ್‌ಐಆರ್‌ ದಾಖಲಿಸಿರುವ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುತ್ತಿಗೆದಾರರ ಕೆ.ಆರ್‌.ಶ್ರೀನಿವಾಸ್‌ ಸಂಬಂಧಿಕರ ಮಗನಿಗೆ ನೀಟ್‌ ಪರೀಕ್ಷೆಯಲ್ಲಿ ವೈದ್ಯಕೀಯ ಸೀಟು ಸಿಕ್ಕಿರಲಿಲ್ಲ. ಹೀಗಾಗಿ ಕೆಂಪೇಗೌಡ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಪಡೆದುಕೊಳ್ಳುವ ಸಂಬಂಧ ಪರಿಚಯವಿದ್ದ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಎಂ.ಬಿ.ಮಂಜೇಗೌಡರನ್ನು ಭೇಟಿಯಾಗಿ ವಿಷಯ ತಿಳಿಸಿದ್ದರು. ಈ ವೇಳೆ ಮಂಜೇಗೌಡ, ‘ತಾವು ನರ್ಸಿಂಗ್‌ ಕಾಲೇಜಿನ ಅಧ್ಯಕ್ಷನಾಗಿದ್ದು, ನಮ್ಮ ಗುಂಪಿನವರೇ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿದ್ದಾರೆ. ಅವರಿಗೆ ಹೇಳಿ ಸಂಬಂಧಿಕರ ಮಗನಿಗೆ ವೈದ್ಯಕೀಯ ಸೀಟು ಕೊಡಿಸುತ್ತೇನೆ. ಸೀಟಿಗೆ .35 ಲಕ್ಷ ಕೊಡಬೇಕು’ ಎಂದು ಬೇಡಿಕೆ ಇರಿಸಿದ್ದರು.

Cyber Crimes: ಕ್ರಿಸ್ಮಸ್, ಹೊಸ ವರ್ಷದ ರಜಾ ಅವಧಿಯಲ್ಲಿ ಸೈಬರ್ ವಂಚಕರು ಸಕ್ರಿಯ, ಹುಷಾರ್

ಖಾಸಗಿ ಹೋಟೆಲ್‌ನಲ್ಲಿ ಹಣ ಸ್ವೀಕಾರ

ಅದರಂತೆ ಕೆ.ಆರ್‌.ಶ್ರೀನಿವಾಸ್‌, ಕಳೆದ ಮಾಚ್‌ರ್‍ 7ರಂದು ನಗರದ ಶಾಂಘ್ರೀಲಾ ಹೋಟೆಲ್‌ನಲ್ಲಿ ಮಂಜೇಗೌಡ ಮತ್ತು ಅವರ ಪತ್ನಿ ಮೀನಾ ಅವರನ್ನು ಭೇಟಿಯಾಗಿ .35 ಲಕ್ಷ ನೀಡಿದ್ದರು. ಈ ವೇಳೆ ಮೂರು ದಿನಗಳ ಬಳಿಕ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರ ಕೊಠಡಿ ಬಳಿ ಬಂದು ತನ್ನನ್ನು ಕಾಣುವಂತೆ ಮಂಜೇಗೌಡ ಹೇಳಿದ್ದರು. ಅದರಂತೆ ಕೆ.ಆರ್‌.ಶ್ರೀನಿವಾಸ್‌ ಅವರು ಒಕ್ಕಲಿಗರ ಸಂಘದ ಕಚೇರಿ ಬಳಿ ಮಂಜೇಗೌಡ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಮಂಜೇಗೌಡ ಸೀಟು ಕೊಡಿಸುವ ಸಂಬಂಧವೇ ಇಲ್ಲಿಗೆ ಬಂದಿದ್ದೇನೆ. ಒಂದು ವಾರದ ಬಳಿಕ ಇಲ್ಲಿಗೆ ಬರುವಂತೆ ಶ್ರೀನಿವಾಸ್‌ಗೆ ಹೇಳಿ ಕಳುಹಿಸಿದ್ದರು.

ಹಣ ವಾಪಸ್‌ ಕೇಳಿದ್ದಕ್ಕೆ ದಂಪತಿಯಿಂದ ಬೆದರಿಕೆ

ಈ ನಡುವೆ ಕೆಂಪೇಗೌಡ ವೈದ್ಯಕೀಯ ಕಾಲೇಜಿನಲ್ಲಿ ದಾಖಲಾತಿ ಮುಗಿದಿರುವ ಬಗ್ಗೆ ಶ್ರೀನಿವಾಸ್‌ಗೆ ಮಾಹಿತಿ ಸಿಕ್ಕಿದೆ. ಈ ವೇಳೆ ಮಂಜೇಗೌಡನನ್ನು ಸಂಪರ್ಕಿಸಲು ಪ್ರಯತ್ನಿಸಿದ್ದು, ಸಾಧ್ಯವಾಗಿಲ್ಲ. ಬಳಿಕ ಮೈಸೂರಿನ ನಿವಾಸದಲ್ಲಿ ಮಂಜೇಗೌಡರನ್ನು ಭೇಟಿಯಾಗಿರುವ ಶ್ರೀನಿವಾಸ್‌, ‘ಕಾಲೇಜಿನಲ್ಲಿ ದಾಖಲಾತಿ ಮುಗಿದಿದೆ. ನೀವು ಸೀಟು ಕೊಡಿಸಲಿಲ್ಲ. ಹಣವನ್ನೂ ಹಿಂದಿರುಗಿಸಿಲ್ಲ’ ಎಂದಿದ್ದಾರೆ. ಇದಕ್ಕೆ ಮಂಜೇಗೌಡ ಮತ್ತು ಆತನ ಪತ್ನಿ ‘ನಿನಗೆ ಯಾವ ಹಣವನ್ನೂ ಕೊಡುವುದಿಲ್ಲ’ ಎಂದು ಶ್ರೀನಿವಾಸ್‌ ಅವರನ್ನು ಅವಾಚ್ಯ ಶಬ್ಧಗಳಿಂದ ಬೈದು ಜೀವ ಬೆದರಿಕೆ ಹಾಕಿದರು’ ಎಂದು ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

Follow Us:
Download App:
  • android
  • ios