ಮಾಜಿ ಸಂಸದ ಡಿ.ಕೆ. ಸುರೇಶ್ ಹೆಸರಲ್ಲಿ ಮತ್ತೊಂದು ವಂಚನೆ: ಐಶ್ವರ್ಯ ವಿರುದ್ಧ ಕೇಸ್
ತಾನು ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ತಂಗಿ ಎಂದು ಹೇಳಿಕೊಂಡು ಮಹಿಳೆಯ ಸ್ನೇಹ ಬೆಳೆಸಿ ಬಳಿಕ ಆಕೆಯಿಂದ 3.25 ಕೋಟಿ ರು. ಹಣ ಹಾಗೂ 450 ಗ್ರಾಂ ಚಿನ್ನಾಭರಣ ಪಡೆದು ವಂಚಿಸಿದ ಆರೋಪದಡಿ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು(ಜ.01): ಚಿನ್ನದಂಗಡಿ ಮಾಲಕಿಯಿಂದ 8.41 ಕೋಟಿ ರು. ಮೌಲ್ಯದ 14.6 ಕೆ.ಜಿ.ಚಿನ್ನ ಸಾಲ ಪಡೆದು ವಂಚನೆ ಆರೋಪ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಐಶ್ವರ್ಯಾ ಗೌಡ ದಂಪತಿಯ ಮತ್ತೊಂದು ವಂಚನೆ ಬೆಳಕಿಗೆ ಬಂದಿದೆ.
ತಾನು ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ತಂಗಿ ಎಂದು ಹೇಳಿಕೊಂಡು ಮಹಿಳೆಯ ಸ್ನೇಹ ಬೆಳೆಸಿ ಬಳಿಕ ಆಕೆಯಿಂದ 3.25 ಕೋಟಿ ರು. ಹಣ ಹಾಗೂ 450 ಗ್ರಾಂ ಚಿನ್ನಾಭರಣ ಪಡೆದು ವಂಚಿಸಿದ ಆರೋಪದಡಿ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು 14 ಕೆಜಿ ಚಿನ್ನ ವಂಚನೆ ಕೇಸ್: ಐಶ್ವರ್ಯಾ ಗೌಡ ವಿರುದ್ಧ ಡಿ.ಕೆ. ಸುರೇಶ್ ದೂರು
ರಾಜರಾಜೇಶರಿನಗರ ನಿವಾಸಿ ಶಿಲ್ಪಾ ಗೌಡ ಎಂಬುವವರು ನೀಡಿದ ದೂರಿನ ಮೇರೆಗೆ ಐಶ್ವರ್ಯ ಗೌಡ, ಆಕೆಯ ಪತಿ ಹರೀಶ್ ಮತ್ತು ಬೌನರ್ ಗಜ ಎಂಬುವವರ ವಿರುದ ವಂಚನೆ, ಮೋಸ, ಐಶ್ವರ್ಯ ಗೌಡ ನಂಬಿಕೆ ದ್ರೋಹ, ಜೀವ ಬೆದರಿಕೆ ಸೇರಿ ವಿವಿಧ ಆರೋಪಗಳಡಿ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ದೂರು?:
ಶಿಲ್ಪಾ ಗೌಡ ನೀಡಿದ ದೂರಿನ ಅನ್ವಯ, ನಮ್ಮ ಮನೆಯ ಪಕ್ಕದ ರಸ್ತೆಯ ನಿವಾಸಿಯಾದ ಐಶ್ವರ್ಯ ಗೌಡ ಎರಡು ವರ್ಷದ ಹಿಂದೆ ನನಗೆ ಪರಿಚಯವಾಗಿದ್ದರು. ಈ ವೇಳೆ ನಾನು ಡಿ.ಕೆ.ಸುರೇಶ್ ಅವರ ತಂಗಿ ಎಂದು ಹೇಳಿಕೊಂಡಿದ್ದ ಐಶ್ವರ್ಯ ಗೌಡ, ನಾನು ಗೋಲ್ಡ್ ಬಿಜಿನೆಸ್, ಚಿಟ್ ಫಂಡ್ ವ್ಯವಹಾರ, ವಿಲ್ಲಾ ನಿರ್ಮಾಣ, ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದೇನೆ. ಎಲ್ಲಾ ವ್ಯವಹಾರಗಳು ಲಾಭದಾಯಕವಾಗಿದ್ದು, ನೀವು ಹಣ ಹೂಡಿಕೆ ಮಾಡಿದರೆ ಅಧಿಕ ಲಾಭ ಪಡೆಯಬಹುದು ಹೇಳಿದ್ದರು. ಹೀಗಾಗಿ ಅವರ ಮಾತನ್ನು ನಾನು ನಂಬಿದ್ದೆ. 3.25 ಕೋಟಿ ರು. ಹಣ ವರ್ಗಾವಣೆ: ಕೆಲ ದಿನಗಳ ಬಳಿಕ ಐಶ್ವರ್ಯಾ ಗೌಡ ತನ್ನ ಬಳಿ ಚಿನ್ನ ಖರೀದಿ ಮಾಡಿದರೆ ಮಾರುಕಟ್ಟೆ ದರಕ್ಕಿಂತ ಕಡಿಮೆ ದರಕ್ಕೆ ಕೊಡಿಸುವುದಾಗಿ ಹೇಳಿದರು.
ಆಕೆಯ ಮಾತು ನಂಬಿ ಸಂಬಂಧಿಕರು ಹಾಗೂ ಸ್ನೇಹಿತರಿಂದ ಹಣ ಪಡೆದು ಸುಮಾರು 65 ಲಕ ರು. ನಗದು ಹಾಗೂ 2.60 ಕೋಟಿ ರು. ಹಣವನ್ನು ಶ್ವೇತಾ ಗೌಡ ನೀಡಿದ್ದ ಸಾಯಿದಾ ಬಾಬು, ಧನು, ಶೀತಲ್, ಚೇತನ್, ಲಕ್ಷ್ಮಿ, ಪ್ರವೀಣ್, ಮಹೇಶ್, ಹರೀಶ್ ಹಾಗೂ ಇತರರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದೆ. ಅಂದರೆ, 2022ರ ಜನವರಿಂದ ಈವರೆಗೆ ಐಶ್ವರ್ಯಾ ಗೌಡಗೆ ಒಟ್ಟು 3.25 ಕೋಟಿ ರು. ಹಣ ನೀಡಿದ್ದೇನೆ ಎಂದು ಶಿಲ್ಪಾ ಗೌಡ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ತುರ್ತು ಹಣದ ನೆಪದಲ್ಲಿ ಚಿನ್ನ ಪಡೆದರು:
ಈ ನಡುವೆ 2023ರ ಜೂನ್‌ನಲ್ಲಿ ಐಶ್ವರ್ಯಾ ಗೌಡ ತನ್ನ ವ್ಯವಹಾರಕ್ಕೆ ತುರ್ತಾಗಿ ಹಣ ಬೇಕಿದೆ. ನಿನ್ನ ಬಳಿ ಇರುವ ಚಿನ್ನಾಭರಣ ಕೊಟ್ಟರೆ, ಅಡಮಾನವರಿಸಿ ಅವ್ಯವಹಾರಕ್ಕೆ ಬಳಸಿಕೊಂಡು ಬಳಿಕ ವಾಪಾಸ್ ನೀಡುವುದಾಗಿ ಹೇಳಿದ್ದರು. ಅದರಂತೆ ಆಕೆಯ ಮನೆಯ ಬೌನ್ಸರ್ ಗಜ ನನ್ನ ಮನೆಗೆ ಬಂದು 430 ಗ್ರಾಂ ಚಿನ್ನಾಭರಣ ಪಡೆದುಕೊಂಡು ಹೋಗಿದ್ದರು. ಇದಾದ ಬಳಿಕ ಐಶ್ವರ್ಯಾ ಗೌಡ ನನ್ನ ಜತೆಗೆ ಸರಿಯಾಗಿ ಮಾತನಾಡದೆ ಅಂತರ ಕಾಯ್ದುಕೊಂಡಿದ್ದರು. ಹೀಗಾಗಿ ನನ್ನ ಹಣ ಹಾಗೂ ಚಿನ್ನಾಭರಣ ವಾಪಾಸ್ ನೀಡುವಂತೆ ಕೇಳಿದಾಗ ಸಬೂಬು ಹೇಳಿದರು.
ಡಿ.ಕೆ.ಸುರೇಶ್ ಸಹೋದರಿ ಎಂದು ನಂಬಿಸಿ ಕೋಟ್ಯಂತರ ರೂ. ವಂಚನೆ: ಬಂಗಾರಿ ದಂಪತಿ ಬಂಧನ
ಪೊಲೀಸರ ವಿಚಾರಣೆ
ವಾರಾಹಿ ವಲ್ಡ್ ಆಫ್ ಗೋಲ್ಡ್ ಚಿನ್ನದಂಡಗಿ ಮಾಲಕಿ ವನಿತಾ ಐತಾಳ್ ಅವರಿಂದ 8.41 ಕೋಟಿ ರು. ಮೌಲ್ಯದ 14.6 ಕೆ.ಜಿ. ಚಿನ್ನಾ ಭರಣ ಪಡೆದು ವಂಚನೆ ಪ್ರಕರಣ ಸಂಬಂಧ ಈಗಾಗಲೇ ಚಂದ್ರಾಲೇಔಟ್ ಪೊಲೀಸರು ಐಶ್ವರ್ಯ ದಂಪತಿಯನ್ನು ಬಂಧಿಸಿ 8 ದಿನ ಕಸ್ಟಡಿಗೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಇದರ ಬೆನ್ನಲ್ಲೇ ಐಶ್ವರ್ಯ ದಂಪತಿ ವಿರುದ್ದ ಒಂದೊಂದು ವಂಚನೆ ಪ್ರಕರಣ ಬೆಳಕಿಗೆ ಬರುತ್ತಿವೆ.
ಹಣ, ಚಿನ್ನ ವಾಪಸ್ ಕೇಳಿದ್ದಕ್ಕೆ ಜೀವ ಬೆದರಿಕೆ
ಇತ್ತೀಚೆಗೆ ಐಶ್ವರ್ಯ ಗೌಡಗೆ ಕರೆ ಮಾಡಿ ಹಣ ಮತ್ತು ಚಿನ್ನಾಭರಣ ವಾಪಾಸ್ ನೀಡು ವಂತೆ ಕೇಳಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ ದ್ದಾರೆ. ನನಗ ದೊಡ್ಡ ರಾಜಕಾರಣಿಗಳ ಬೆಂಬಲವಿದೆ. ನಿನಗೆ ಒಂದು ಗತಿ ಕಾಣಿಸುತ್ತೇನೆ. ಚಾರಿತ್ಯದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿ ಮಾನ-ಮರ್ಯಾದೆ ತೆಗೆಯುತ್ತೇನೆ. ನಿನ್ನಿಂದ ನನಗೆ ಏನು ಮಾಡಲು ಸಾಧ್ಯವಿಲ್ಲ. ನೀನು ಮತ್ತೆ ನನ್ನ ವಿಚಾರಕ್ಕೆ ಬಂದರೆ, ಒಂದು ಗತಿ ಕಾಣಿಸುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಾರೆ. ಹಣ, ಚಿನ್ನಾಭರಣ ಪಡೆದು ವಂಚಿಸಿ, ಜೀವ ಬೆದರಿಕೆ ಹಾಕಿರುವ ಐಶ್ವರ್ಯಾ ಗೌಡ ದಂಪತಿ, ಬೌನ್ಸರ್ ಗಜನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಶಿಲ್ಪಾ ಗೌಡ ದೂರಿನಲ್ಲಿ ಮನವಿ ಮಾಡಿದ್ದಾರೆ.