8 ಮಂದಿ ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ. ವಿದ್ಯಾರ್ಥಿನಿಯಿಂದ ಮಾಹಿತಿ ಪಡೆಯಲಾಗಿದೆ.

ಮಂಗಳೂರು(ಜು.22): ನಗರದ ಅಪಾರ್ಟ್‌ಮೆಂಟ್‌ವೊಂದರಲ್ಲಿ ನಗರದ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳ ಅಶ್ಲೀಲ ವರ್ತನೆಯ ವಿಡಿಯೊ ಇದೀಗ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಬಗ್ಗೆ 8 ಮಂದಿ ವಿದ್ಯಾರ್ಥಿಗಳ ಮೇಲೆ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ. ಕಳೆದ ಜನವರಿಯಲ್ಲೇ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಬಳಿಕ ಈ ವಿಡಿಯೊ ಕಾಲೇಜಿನ ಆಡಳಿತ ಮಂಡಳಿ ಗಮನಕ್ಕೆ ಬಂದು ಕಾಲೇಜಿನ ಶಿಸ್ತುಪಾಲನಾ ಸಮಿತಿಯ ಆಂತರಿಕ ತನಿಖೆಯ ಬಳಿಕ ವಿಡಿಯೊದಲ್ಲಿದ್ದ ವಿದ್ಯಾರ್ಥಿಗಳನ್ನು ಸಸ್ಪೆಂಡ್‌ ಮಾಡಲಾಗಿತ್ತು. ಆದರೆ ಜಾಲತಾಣದಲ್ಲಿ ವಿಡಿಯೊ ಲೀಕ್‌ ಆದ ಬಳಿಕ ಇದೀಗ ವಿಚಾರ ಬಹಿರಂಗವಾಗಿದೆ.

ಪ್ರತಿಷ್ಠಿತ ಕಾಲೇಜೊಂದರ ಇಬ್ಬರು ವಿದ್ಯಾರ್ಥಿಗಳಿಗೆ ನಗರದ ಬಾವುಟಗುಡ್ಡೆ ಬಳಿಯ ಅಪಾರ್ಚ್‌ಮೆಂಟ್‌ನಲ್ಲಿ 2 ತಿಂಗಳ ಅವಧಿಗೆ ಬಾಡಿಗೆಗೆ ರೂಮ್‌ ನೀಡಲಾಗಿತ್ತು. ಆ ರೂಮ್‌ಗೆ ಕೆಲವು ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಕರೆದುಕೊಂಡು ಬಂದು ಅಶ್ಲೀಲವಾಗಿ ನಡೆದುಕೊಂಡಿದ್ದಾರೆ. ಮಾತ್ರವಲ್ಲದೆ, ಮೊಬೈಲ್‌ನಲ್ಲಿ ವಿಡಿಯೊ ಚಿತ್ರೀಕರಣವನ್ನೂ ಮಾಡಿದ್ದಾರೆ. ಈ ವೇಳೆ ವಿದ್ಯಾರ್ಥಿನಿಯರು ಕಾಲೇಜು ಸಮವಸ್ತ್ರದಲ್ಲೇ ಇದ್ದರು. ವಿಡಿಯೊದಲ್ಲಿದ್ದ ಓರ್ವ ವಿದ್ಯಾರ್ಥಿ ಇದನ್ನು ತನ್ನ ತರಗತಿಯ ವಾಟ್ಸಪ್‌ ಗುಂಪಿಗೆ ಶೇರ್‌ ಮಾಡಿದ್ದ ಎನ್ನಲಾಗಿದೆ. ಇದು ತರಗತಿಯ ಸಂಯೋಜಕರ ಗಮನಕ್ಕೆ ಬಂದು ಅವರು ಪ್ರಾಂಶುಪಾಲರಿಗೆ ಮಾಹಿತಿ ನೀಡಿ, ಪೋಷಕರನ್ನು ಕರೆಸಿ ಈ ಬಗ್ಗೆ ಆಂತರಿಕ ವಿಚಾರಣೆಗೊಳಪಡಿಸಿದ್ದಾರೆ. ಬಳಿಕ ವಿಡಿಯೊದಲ್ಲಿದ್ದ ವಿದ್ಯಾರ್ಥಿಗಳನ್ನು ಸಸ್ಪೆಂಡ್‌ ಮಾಡಲಾಗಿತ್ತು. ಅತ್ತ, ಅಪಾರ್ಚ್‌ಮೆಂಟ್‌ನಲ್ಲಿದ್ದ ಹುಡುಗರು ಅಲ್ಲಿ ಮದ್ಯಪಾನ ಮತ್ತು ಯಾರನ್ನೋ ಕರೆದುಕೊಂಡು ಬರುತ್ತಾರೆ ಎಂದು ಅದರ ಮಾಲೀಕರು ಕೂಡ ರೂಮ್‌ ಖಾಲಿ ಮಾಡಿಸಿದ್ದರು.

Mangaluru: ಕಿಸ್ಸಿಂಗ್ ವೀಡಿಯೋ ಜಾಡು ಹಿಡಿದ ಪೊಲೀಸರಿಗೆ ವಿದ್ಯಾರ್ಥಿಗಳ ಬೆತ್ತಲು ವೀಡಿಯೋ ಲಭ್ಯ!

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ನಗರ ಪೊಲೀಸ್‌ ಆಯುಕ್ತ ಶಶಿಕುಮಾರ್‌, 8 ಮಂದಿ ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ. ವಿದ್ಯಾರ್ಥಿನಿಯಿಂದ ಮಾಹಿತಿ ಪಡೆಯಲಾಗಿದೆ. ಕೆಲವರು ಫೇಕ್‌ ಐಡಿ ಮಾಡಿ ಈ ವಿಡಿಯೊ ಅಪ್‌ಲೋಡ್‌ ಮಾಡಿದ್ದಾರೆ. ವಿದ್ಯಾರ್ಥಿಗಳು ‘ಟ್ರುತ್‌ ಆಂಡ್‌ ಡೇಲ್‌’ ಆಟ ಆಡುವಾಗ ಇದೆಲ್ಲ ನಡೆದಿದೆ ಎಂದು ಹೇಳಿಕೊಂಡಿದ್ದಾರೆ ಎಂದಿದ್ದಾರೆ.

ಶಿಕ್ಷಣ ಸಂಸ್ಥೆಗಳು ತಮ್ಮ ಸಂಸ್ಥೆಗಳಲ್ಲಿ ಅಧ್ಯಯನ ನಡೆಸುವ ವಿದ್ಯಾರ್ಥಿಗಳ ನಡವಳಿಕೆ, ಚಟುವಟಿಕೆ ಬಗ್ಗೆ ಗಮನ ಹರಿಸಬೇಕು. ರಾರ‍ಯಗಿಂಗ್‌ ಮಾತ್ರವಲ್ಲ, ಇಂತಹ ಘಟನೆಗಳು ನಡೆದಾಗ ಪೊಲೀಸರ ಗಮನಕ್ಕೆ ತರುವ ಮೂಲಕ ಸೂಕ್ತ ವಿಚಾರಣೆಗೆ ಅವಕಾಶ ನೀಡಿದರೆ ಜಾಗೃತಿ ಮೂಡಿಸಲು ಸಾಧ್ಯವಾಗುತ್ತದೆ ಎಂದು ಶಶಿಕುಮಾರ್‌ ಹೇಳಿದರು. ಡಿಸಿಪಿ ಅನ್ಶು ಕುಮಾರ್‌ ಇದ್ದರು.