ಬೃಹತ್ ನಕಲಿ ಪ್ಯಾನ್, ಆಧಾರ್ ದಂಧೆ ಬಯಲು!
ಬೃಹತ್ ನಕಲಿ ಪ್ಯಾನ್, ಆಧಾರ್ ದಂಧೆ ಬಯಲು| ಸರ್ಕಾರದ ಯಾವ ದಾಖಲೆ ಬೇಕಿದ್ರೂ ಇವರು ಮಾಡಿಕೊಡ್ತಾರೆ!| ಬೆಂಗಳೂರು ಖತರ್ನಾಕ್ ಗ್ಯಾಂಗ್ ಪತ್ತೆ| ಹೆಸರಿಲ್ಲದ ವೋಟರ್ ಐಡಿ, ಆರ್‌ಸಿ ಕಾರ್ಡ್‌ಗಳೂ ಜಪ್ತಿ
ಬೆಂಗಳೂರು(ಜ.05): ನಕಲಿ ಚುನಾವಣಾ ಗುರುತಿನ ಚೀಟಿ, ಆಧಾರ್ ಕಾರ್ಡ್ ಹಾಗೂ ಆರ್‌ಸಿ (ವಾಹನ ನೋಂದಣಿ) ಕಾರ್ಡ್ ಸೇರಿದಂತೆ ಸರ್ಕಾರಿ ದಾಖಲೆಗಳನ್ನು ಸಿದ್ಧಪಡಿಸುತ್ತಿದ್ದ 10 ಮಂದಿಯ ಜಾಲವೊಂದು ಬೆಂಗಳೂರು ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದೆ.
ಆರೋಪಿಗಳಿಂದ ಹೆಸರು ಮುದ್ರಿಸದೆ ಇರುವ 28 ಸಾವಿರ ಚುನಾವಣಾ ಗುರುತಿನ ಚೀಟಿ, 9 ಸಾವಿರ ಆಧಾರ್ ಕಾರ್ಡ್, 9 ಸಾವಿರ ಪಾನ್‌ಕಾರ್ಡ್, 12,200 ಆರ್.ಸಿ.ಕಾರ್ಡ್ ಹಾಗೂ ಹೆಸರು ವಿಳಾಸ ಮುದ್ರಿಸಿರುವ ವಾಹನಗಳ 250 ನಕಲಿ ಆರ್‌ಸಿ ಕಾರ್ಡ್, 6240 ನಕಲಿ ಚುನಾವಣಾ ಗುರುತಿನ ಚೀಟಿ ಮತ್ತು ಕೃತ್ಯಕ್ಕೆ ಬಳಸುತ್ತಿದ್ದ ಮೂರು ಲ್ಯಾಪ್‌ಟಾಪ್, ಮೂರು ಪ್ರಿಂಟರ್, .67 ಸಾವಿರ ನಗದು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ಪ್ರಮುಖ ಆರೋಪಿ ಕನಕಪುರ ರಸ್ತೆಯ ಗುಬ್ಬಲಾಳ ಗ್ರಾಮದ ಕಮಲೇಶ್ ಕುಮಾರ್ ಭವಾಲಿಯಾ (33), ಪುಟ್ಟೇನಹಳ್ಳಿಯ ಎಸ್.ಲೋಕೇಶ್ (37), ಶಾಂತಿನಗರದ ಸುದರ್ಶನ್ (50), ನಿರ್ಮಲ್‌ಕುಮಾರ್ (56), ದರ್ಶನ್ (25), ಹಾಸನದ ಶ್ರೀಧರ್ (31), ಚಂದ್ರಪ್ಪ (28), ಮಾರೇನಹಳ್ಳಿಯ ಅಭಿಲಾಶ್ (27), ಬಸವೇಶ್ವರ ನಗರದ ತೇಜಸ್ (27) ಹಾಗೂ ಶ್ರೀಧರ ದೇಶಪಾಂಡೆ (35) ಬಂಧಿತರು.
ಸರ್ಕಾರ ಕೆಲ ಇಲಾಖೆಗಳ ದಾಖಲೆ ತಯಾರಿಸುವ ಕೆಲಸವನ್ನು ‘ರೋಸ್ ಮಾರ್ಟ್’ ಎಂಬ ಕಂಪನಿಗೆ ಗುತ್ತಿಗೆ ನೀಡಿದೆ. ಅದೇ ಕಂಪನಿಯಲ್ಲೇ ಆರೋಪಿಗಳಾದ ಎಸ್. ಲೋಕೇಶ್ ಹಾಗೂ ಇತರರು ಕೆಲಸ ಮಾಡುತ್ತಿದ್ದರು. ಕಂಪನಿ ವತಿಯಿಂದ ಮುದ್ರಿಸುತ್ತಿದ್ದ ಕಾರ್ಡ್‌ಗಳ ಬಗ್ಗೆ ಆರೋಪಿಗಳಿಗೆ ಪೂರ್ಣ ಮಾಹಿತಿ ಇತ್ತು. ಆರೋಪಿಗಳು ಕಂಪ್ಯೂಟರ್‌ನಲ್ಲಿದ್ದ ದಾಖಲೆಗಳನ್ನು ಕದ್ದು, ಇತರೆ ಆರೋಪಿಗಳಿಗೆ ಕೊಡುತ್ತಿದ್ದರು. ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳ ಮುದ್ರೆಯುಳ್ಳ ಮೋನೋಗ್ರಾಮ್‌ಗಳು ಆರೋಪಿಗಳ ಮನೆಗಳಲ್ಲಿ ಸಿಕ್ಕಿವೆ. ಅವುಗಳನ್ನು ಬಳಸಿ ಆರೋಪಿಗಳು ಕಾರ್ಡ್ ತಯಾರಿಸುತ್ತಿದ್ದರು ಎಂದು ಆಯುಕ್ತರು ವಿವರಿಸಿದರು.
ಪ್ರಿಂಟಿಂಗ್ ಪ್ರೆಸ್‌ನಲ್ಲಿ ಮುದ್ರಣ:
ಶಾಂತಿಗರದಲ್ಲಿರುವ ಬ್ರಿಗೇಡ್ ಪ್ರಿಂಟ್ಸ್ ಮಳಿಗೆಯಲ್ಲಿ ಸುದರ್ಶನ್ ಮತ್ತು ನಿರ್ಮಲ್ ಕುಮಾರ್ ಕೆಲಸ ಮಾಡುತ್ತಿದ್ದರು. ಇಲ್ಲಿಯೇ ನಕಲಿ ಕಾರ್ಡ್‌ಗಳನ್ನು ಆರೋಪಿಗಳು ಮುದ್ರಿಸುತ್ತಿದ್ದರು. ಅದೇ ಕಾರ್ಡ್‌ಗಳನ್ನು ಆರೋಪಿ ಕಮಲೇಶ್ ಕುಮಾರ್ ತನ್ನ ಮನೆಯಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತಿದ್ದ. ನಂತರ, ಮಧ್ಯವರ್ತಿಗಳ ಮೂಲಕ ಮಾರಾಟ ಮಾಡುತ್ತಿದ್ದರು. ಪ್ರಕರಣದಲ್ಲಿ ಪ್ರಿಂಟಿಂಗ್ ಮಳಿಗೆಯ ಮಾಲಿಕನ ಪಾತ್ರದ ತನಿಖೆ ನಡೆಸಲಾಗುತ್ತಿದೆ.
ಆರೋಪಿಗಳು ಎರಡು ವರ್ಷಗಳಿಂದ ಕೃತ್ಯ ಎಸಗುತ್ತಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಆರೋಪಿಗಳು ತಯಾರಿಸಿದ್ದ ಕಾರ್ಡ್‌ಗಳ ಮೇಲೆ ಹಲವು ಸಾರ್ವಜನಿಕರ ಹೆಸರುಗಳಿವೆ. ಅವರೆಲ್ಲರನ್ನೂ ವಿಚಾರಣೆಗೆ ಒಳಪಡಿಸಬೇಕಿದೆ. ನಂತರವೇ ಜಾಲದ ಬಗ್ಗೆ ಮತ್ತಷ್ಟುಮಾಹಿತಿ ಲಭ್ಯವಾಗಲಿದೆ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಜಸ್ಥಾನ ಮೂಲದ ಕಿಂಗ್‌ಪಿನ್:
ಕಮಲೇಶ್ ಕುಮಾರ್ ಭವಾಲಿಯಾ ಪ್ರಕರಣದ ಕಿಂಗ್‌ಪಿನ್ ಆಗಿದ್ದು, ಮೂಲತಃ ರಾಜಸ್ಥಾನ ರಾಜ್ಯದವನಾಗಿದ್ದಾನೆ. ಕೆಲ ವರ್ಷಗಳ ಹಿಂದೆ ಬೆಂಗಳೂರು ನಗರಕ್ಕೆ ಬಂದಿರುವ ಆರೋಪಿ ಸವೀರ್‍ಸ್ ಎಂಜಿನಿಯರ್ ಆಗಿದ್ದ. ತಾನು ಸವೀರ್‍ಸ್ ಮಾಡಲು ಹೋಗುತ್ತಿದ್ದ ಕಂಪನಿಗಳ ಸ್ಥಳದಲ್ಲಿ ಇತರ ಆರೋಪಿಗಳನ್ನು ಪರಿಚಯ ಮಾಡಿಕೊಂಡಿದ್ದ. ಹಣದ ಆಮಿಷಕ್ಕೆ ಒಳಗಾದ ಆರೋಪಿಗಳು ಈತನೊಂದಿಗೆ ಶಾಮೀಲಾಗಿದ್ದರು.
ತೇಜಸ್ ರಾಜಾಜಿನಗರದಲ್ಲಿರುವ ಆರ್‌ಟಿಓದಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ. ಈತ ಅಗತ್ಯವಿರುವವರಿಗೆ ಸುಲಭವಾಗಿ ಆರ್.ಸಿ.ಕಾರ್ಡ್ ಮಾಡಿಸಿಕೊಡುತ್ತಿದ್ದ. ಈ ವೇಳೆ ಸಂಪರ್ಕವಾದವರಿಗೆ ಇನ್ನಿತರ ದಾಖಲೆಗಳಾದ ಆಧಾರ್ ಕಾರ್ಡ್, ಗುರುತಿನ ಚೀಟಿಯನ್ನು ಆರೋಪಿಗಳು ಮಾಡಿಕೊಡುತ್ತಿದ್ದರು ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ದಂಧೆ ಹೇಗೆ?
- ಕೆಲ ಸರ್ಕಾರಿ ದಾಖಲೆ ತಯಾರಿಸುವ ಗುತ್ತಿಗೆಯನ್ನು ರೋಸ್‌ಮಾರ್ಟ್ ಕಂಪನಿ ಹೊಂದಿದೆ
- ಅದೇ ಕಂಪನಿಯಲ್ಲಿ ಆರೋಪಿಗಳು ನೌಕರರಾಗಿದ್ದರು. ವ್ಯವಹಾರದ ಪೂರ್ಣ ಮಾಹಿತಿ ಗಳಿಸಿದ್ದರು
- ಕಂಪನಿಯ ಕಂಪ್ಯೂಟರ್‌ನಲ್ಲಿ ದಾಖಲೆಗಳನ್ನು ಕದ್ದು ಸಹ ಆರೋಪಿಗಳಿಗೆ ವರ್ಗಾಯಿಸಿದ್ದರು
- ರಾಜ್ಯ, ಕೇಂದ್ರ ಸರ್ಕಾರದ ಮುದ್ರೆಯುಳ್ಳ ಮೋನೋಗ್ರಾಮ್‌ಗಳನ್ನು ಕೂಡ ಸಂಗ್ರಹಿಸಿದ್ದರು
- ಅವನ್ನೆಲ್ಲಾ ಬಳಸಿ ಆರೋಪಿಗಳು ನಕಲಿ ಕಾರ್ಡ್‌ಗಳನ್ನು ತಯಾರಿಸುತ್ತಿದ್ದರು
ಗ್ರಾಪಂ ಚುನಾವಣೆಗೆ ನಕಲಿ ವೋಟರ್ ಐಡಿ?
ಆರೋಪಿಗಳ ಬಳಿ ಅಪಾರ ಪ್ರಮಾಣದ ಚುನಾವಣಾ ಗುರುತಿನ ಚೀಟಿಗಳು ಪತ್ತೆಯಾಗಿದ್ದು, ಮುಂಬರುವ ಚುನಾವಣೆಯಲ್ಲಿ ಗುರುತಿನ ಚೀಟಿ ಬಳಸುವ ಉದ್ದೇಶ ಹೊಂದಿರುವ ಶಂಕೆ ಇದೆ. ಈ ಬಗ್ಗೆ ಚುನಾವಣೆ ಆಯೋಗಕ್ಕೂ ಪತ್ರ ಬರೆಯಲಾಗಿದೆ. ಅಲ್ಲದೆ, ಇತ್ತೀಚೆಗೆ ನಡೆದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಗುರುತಿನ ಚೀಟಿಗಳು ಬಳಕೆಯಾಗಿರುವ ಬಗ್ಗೆ ತನಿಖಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದು, ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಕದ್ದ ವಾಹನಗಳಿಗೆ ನಕಲಿ ಆರ್‌ಸಿ ಕಾರ್ಡ್ ಕೊಟ್ಟಿದ್ದರು!
ಇನ್ನು ಆರೋಪಿತರು ಬೆಂಗಳೂರು ನಗರದಲ್ಲಿ ಕಳ್ಳತನವಾಗಿದ್ದ ವಾಹನಗಳಿಗೂ ಆರ್.ಸಿ.ಕಾರ್ಡ್ ಮಾಡಿ ಕೊಟ್ಟಿರುವುದು ತನಿಖೆ ವೇಳೆ ಪತ್ತೆಯಾಗಿದೆ. ಸಾವಿರಾರು ಮಂದಿಗೆ ಈ ರೀತಿ ಆರ್.ಸಿ.ಕಾರ್ಡ್ ಮಾಡಿಕೊಟ್ಟಿದ್ದಾರೆ. ಈ ಬಗ್ಗೆ ಸಾರಿಗೆ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ. ಅಲ್ಲದೆ, ಈಗಾಗಲೇ ಯಾರಿಗೆಲ್ಲಾ ದಾಖಲೆಗಳನ್ನು ಮಾಡಿಕೊಟ್ಟಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ವಿವರಿಸಿದ್ದಾರೆ.