ಮದುವೆಯಾಗುವುದಕ್ಕಾಗಿ ಬಂಟಿ ಔರ್ ಬಬ್ಲಿ ಸ್ಟೈಲಲ್ಲಿ ದರೋಡೆಗಿಳಿದ ಯುವ ಜೋಡಿಯ ಬಂಧನ
ಮದುವೆಯಾಗುವುದಕ್ಕಾಗಿ ದರೋಡೆಗಿಳಿದಿದ್ದ ಯುವ ಜೋಡಿ ಹಾಗೂ ಅವರ ಸಹಾಯಕರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಶಿವಂ ರಾಯ್, ಹಿಮಾಂಶ್ ಯಾದವ್ ಹಾಗೂ ಖುಷಿ ಎಂದು ಗುರುತಿಸಲಾಗಿದೆ.
ಲಕ್ನೋ: ಮದುವೆಯಾಗುವುದಕ್ಕಾಗಿ ದರೋಡೆಗಿಳಿದಿದ್ದ ಯುವ ಜೋಡಿ ಹಾಗೂ ಅವರ ಸಹಾಯಕರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಶಿವಂ ರಾಯ್, ಹಿಮಾಂಶ್ ಯಾದವ್ ಹಾಗೂ ಖುಷಿ ಎಂದು ಗುರುತಿಸಲಾಗಿದೆ. ಎಲ್ಲರೂ 19 ವರ್ಷ ಪ್ರಾಯದವರಾಗಿದ್ದಾರೆ. ಈ ಮೂವರು ಸೇರಿ ತಮ್ಮ ಮದುವೆಗೆ ಹಣ ಸಂಗ್ರಹಿಸಲು ಲಕ್ನೋದಲ್ಲಿ ದರೋಡೆಗಿಳಿದಿದ್ದರು. ಬ್ಯಾಗ್, ಫೋನ್, ಇತರ ಅಮೂಲ್ಯ ವಸ್ತುಗಳನ್ನು ದೋಚುತ್ತಿದ್ದರು.
ಜನರ ದೋಚುತ್ತಿದ್ದಿದ್ದು ಹೇಗೆ?
ಆರೋಪಿ ಶಿವಂ ಮೋಟಾರ್ ಸೈಕಲ್ ಓಡಿಸುತ್ತಿದ್ದರೆ ಹಿಂಬದಿ ಖುಷಿ ಕುಳಿತಿರುತ್ತಿದ್ದಳು. ವೇಗವಾಗಿ ಬಂದು ದಾರಿಯಲ್ಲಿ ಒಂಟಿಯಾಗಿ ಸಾಗುತ್ತಿದ್ದವರ ಮೊಬೈಲ್ ಫೋನ್, ಬ್ಯಾಗ್ ಕಸಿದುಕೊಂಡು ಪರಾರಿಯಾಗುತ್ತಿದ್ದರು. ಹಿಮಾಂಶು ಎಂಬಾಂತ ಇವರಿಗೆ ಪೊಲೀಸ್ ವೇಷದಲ್ಲಿ ಕಾವಲಿನಂತೆ ಕಾಯುತ್ತಿದ್ದು, ಈ ಕಳ್ಳತನದ ಸಮಯದಲ್ಲಿ ಈ ಜೋಡಿ ಸಿಕ್ಕಿಬಿದ್ದರೆ ಅವರಿಗೆ ಸಹಾಯ ಮಾಡಿ ಅವರು ತಪ್ಪಿಸಿಕೊಳ್ಳಲು ನೆರವಾಗುತ್ತಿದ್ದ. ಈ ಬಗ್ಗೆ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಕಾರ್ಯಾಚರಣೆಗಿಳಿದ ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸಿದಾಗ ಈ ಖತರ್ನಾಕ್ ಗ್ಯಾಂಗ್ ಪೊಲೀಸರಿಗೆ ಸಿಕ್ಕಿಬಿದ್ದಿದೆ.
ಸಕ್ಕರೆ ನಾಡು ಮಂಡ್ಯದಲ್ಲೊಬ್ಬ ಐನಾತಿ ಕಳ್ಳ; ಸಾವಿನ ಮನೆಗಳೇ ಇವನ ಟಾರ್ಗೆಟ್!
ಮೊದಲಿಗೆ ಈ ಜೋಡಿ ಓಡಾಡುತ್ತಿದ್ದ ಬೈಕ್ ಪತ್ತೆ ಮಾಡಿದ ಪೊಲೀಸರು ಬಳಿಕ ಈ ಗ್ಯಾಂಗ್‌ನ್ನು ಸೆರೆ ಹಿಡಿದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎಡಿಸಿಪಿ ಸೈಯದ್ ಅಲಿ ಅಬ್ಬಾಸ್ ಮಾತನಾಡಿದ್ದು, ಈ ಗ್ಯಾಂಗ್ ಕೇವಲ ಒಂದು ವಾರದಲ್ಲಿ ಒಟ್ಟು ಮೂರು ಇಂತಹ ಕೃತ್ಯಗಳನ್ನು ಎಸಗಿದೆ. ಮೊದಲಿಗೆ ಖುಷಿ ಹಾಗೂ ಶಿವಂ ರಾಯ್ ಅವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಅವರು ತಪ್ಪೊಪ್ಪಿಕೊಂಡಿದ್ದು, ಬಳಿಕ ಇವರು ನೀಡಿದ ಸೂಚನೆ ಮೇರೆಗೆ ಹಿಮಾಂಶು ಯಾದವ್‌ನನ್ನು ಬಂಧಿಸಲಾಗಿದೆ ಎಂದಿದ್ದಾರೆ.
ತನಿಖೆ ಮುಂದುವರಿಸಿದಾಗ ಶಿವಂ ರಾಯ್ ವಿರುದ್ಧ ಈಗಾಗಲೇ 7 ಕ್ರಿಮಿನಲ್ ಪ್ರಕರಣಗಳು ಇದ್ದು, ಹಾಗೆಯೇ ಖುಷಿ ಹಾಗೂ ಹಿಮಾಮಶು ವಿರುದ್ಧ ತಲಾ ಮೂರು ಪ್ರಕರಣಗಳು ದಾಖಲಾಗಿವೆ. ಅರ್ಧದಲ್ಲೇ ಶಾಲೆ ಬಿಟ್ಟಿದ್ದ ಹಿಮಾಂಶು ಯಾದವ್ ಹಾಗೂ ಶಿವಂ ರಾಯ್ ಕೆಲಸವಿಲ್ಲದೇ ಅಲೆದಾಡುತ್ತಿದ್ದು, ಬಳಿಕ ದರೋಡೆಗಿಳಿದಿದ್ದರು. ಈ ಮಧ್ಯೆ ಶಿವಂ ಖುಷಿಯನ್ನು ಮದ್ವೆಯಾಗಲು ಬಯಸಿದ್ದ ಆದರೆ ಇವರಿಬ್ಬರ ಆರ್ಥಿಕ ಸ್ಥಿತಿ ಹಿನ್ನೆಲೆಯಲ್ಲಿ ಇವರ ಪ್ರೇಮ ಪ್ರಸಂಗಕ್ಕೆ ಶಿವಂ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಇದಾದ ನಂತರ ಮೂವರು ಶ್ರೀಮಂತರಾಗುವ ಬಯಕೆಯೊಂದಿಗೆ ಗಾಜಿಪುರದಿಂದ ಲಕ್ನೋಗೆ ಹೊರಟಿದ್ದರು. ಮೂವರು ಪ್ರತ್ಯೇಕ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದರು. ಅಲ್ಲದೇ ತಮ್ಮ ಕೃತ್ಯದ ಬಗ್ಗೆ ಸಂವಹನ ನಡೆಸಲು ಫೋನ್ ಬಳಸುವುದನ್ನು ಕೈ ಬಿಟ್ಟಿದ್ದರು. ಪ್ರಾರಂಭದಲ್ಲಿ ಗೋಮತಿನಗರದ ಹಲವು ಭಾಗಗಳಲ್ಲಿ ಬರೀ ಮಹಿಳೆಯರನ್ನೇ ಟಾರ್ಗೆಟ್ ಮಾಡಿದ್ದರು.
ಒಟ್ಟಿನಲ್ಲಿ ಹಿಂದಿಯ ಬಂಟಿ ಔರ್ ಬಬ್ಲಿ ಸಿನಿಮಾ ಸ್ಟೈಲ್‌ನಲ್ಲಿ ದರೋಡೆಗಿಳಿದ ಈ ಜೋಡಿ ಕೊನೆಗೂ ಕಂಬಿ ಹಿಂದೆ ಕೂತ್ತಿದ್ದಾರೆ.
ಬೆಂಗಳೂರು: ಮೊಬೈಲ್ ಕಳ್ಳನನ್ನು ಬೆನ್ನಟಿ ಹಿಡಿದ ಟ್ರಾಫಿಕ್ ಪೊಲೀಸರು!