ಕಲಬುರಗಿಯಲ್ಲಿ ಅಣ್ಣನ ಪ್ರೀತಿಯ ವಿವಾದ: ತಮ್ಮನ ಕೊಲೆಯಲ್ಲಿ ಅಂತ್ಯ
ಅಣ್ಣನ ಪ್ರೀತಿಯ ವಿವಾದದಲ್ಲಿ ತಮ್ಮನ ಕೊಲೆಯಾಗಿರುವ ಘಟನೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯ ನಾಗನಹಳ್ಳಿಯಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.
ಕಲಬುರಗಿ (ಸೆ.22): ಅಣ್ಣನ ಪ್ರೀತಿಯ ವಿವಾದದಲ್ಲಿ ತಮ್ಮನ ಕೊಲೆಯಾಗಿರುವ ಘಟನೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯ ನಾಗನಹಳ್ಳಿಯಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ. ನಾಗನಹಳ್ಳಿ ನಿವಾಸಿ ಸುಮೀತ್ ಮಲ್ಲಾಬಾದಿ (18) ಕೊಲೆಯಾದ ಯುವಕ. ಸುಮೀತ್ ಅವರ ಅಣ್ಣ ಸಚಿನ್ ನೆರೆ ಮನೆಯ ಯುವತಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದ್ದು, ಇದನ್ನು ಸಹಿಸದ ಯುವತಿಯ ಸಹೋದರರು ಸುಮೀತ್ ಮನೆಗೆ ಬಂದು ಜಗಳ ತೆಗೆದಿದ್ದಾರೆ.
ಜಗಳ ವಿಕೋಪಕ್ಕೆ ಹೋಗಿ ಚಾಕುವಿನಿಂದ ಇರಿದು ಸುಮೀತ್‍ನನ್ನು ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಮುಂಬೈನಲ್ಲಿ ಇದ್ದ ಸುಮೀತ್ ಶುಕ್ರವಾರವಷ್ಟೇ ಕಲಬುರಗಿಗೆ ಬಂದಿದ್ದ ಎಂದು ತಿಳಿದು ಬಂದಿದೆ. ಸುದ್ದಿ ತಿಳಿದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ., ವಿಶ್ವವಿದ್ಯಾಲಯ ಪೊಲೀಸ್ ಠಾಣೆ ಪಿಐ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಕ್ತರ, ಜನರ ಭಾವನೆಗಳ ಜೊತೆ ಆಟ ಸರಿಯಲ್ಲ: ಸಚಿವ ಎಂ.ಬಿ.ಪಾಟೀಲ್
ಸಹೋದರನ ಕೊಂದ ಅಣ್ಣನಿಗೆ ಜೀವಾವಧಿ ಶಿಕ್ಷೆ: ಸಹೋದರನನ್ನು ಕೊಂದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಆರೋಪಿ ಅಣ್ಣನಿಗೆ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರುಪಾಯಿ ದಂಡ ವಿಧಿಸಿದ ಬಗ್ಗೆ ವರದಿಯಾಗಿದೆ. ಕನ್ಯಾನ ಗ್ರಾಮದ ನಂದರಬೆಟ್ಟು ನಿವಾಸಿ ಐತ್ತಪ್ಪ ನಾಯ್ಕ ಜೀವಾವಧಿ ಶಿಕ್ಷೆಗೊಳಗಾದ ವ್ಯಕ್ತಿ. 2022 ಮೇ 10ರಂದು ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ನಂದರಬೆಟ್ಟು ಎಂಬಲ್ಲಿ ಬಾಳಪ್ಪ ನಾಯ್ಕ ಹಾಗೂ ಐತ್ತಪ್ಪ ನಾಯ್ಕ ಅವರ ಮಧ್ಯೆ ಯಾವುದೇ ವಿಷಯಕ್ಕೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ತ್ತಪ್ಪ ನಾಯ್ಕ ಅವರು ತಮ್ಮನಾದ ಬಾಳಪ್ಪ ನಾಯ್ಕಗೆ ಮರದ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದ.
ಈ ಪ್ರಕರಣ ತನಿಖಾಧಿಕಾರಿಯಾಗಿ ವಿಟ್ಲ ಪೋಲೀಸ್ ಠಾಣೆಯಲ್ಲಿ ಕರ್ತವ್ಯ ಮಾಡುತ್ತಿದ್ದ ನಾಗರಾಜ್ ಎಚ್.ಇ. ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿ ಸಾಕ್ಷಾಧ್ಯಾರಗಳ ಜೊತೆ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ನೀಡಿದ್ದರು. ಸೆ.20 ರಂದು ಮಂಗಳೂರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸುನೀತಾ ಎಸ್.ಜಿ. ಅವರು ಪ್ರಕರಣದ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರುಪಾಯಿ ದಂಡ ವಿಧಿಸಿದ್ದಾರೆ.