ಪರೀಕ್ಷೆ ಬರೆಯಲು ತಂಗಿಗೆ ಚೀಟಿ ತಂದ ಅಣ್ಣ, ಬಿಡದ್ದಕ್ಕೆ ಪೊಲೀಸ್ ವಿರುದ್ಧ ಹಿಗ್ಗಾಮುಗ್ಗಾ ಥಳಿತ!
ಪರೀಕ್ಷೆಯಲ್ಲಿ ಚೀಟಿ ಕೊಡಲು ಬಂದವನನ್ನು ಪ್ರಶ್ನಿಸಿದ್ದಕ್ಕೆ ಹೆಡ್ ಕಾನ್ಸಟೇಬಲ್ ಮೇಲೆಯೇ ಹಲ್ಲೆ ನಡೆಸಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಕಲಬುರಗಿ (ಮಾ.22): ಪರೀಕ್ಷೆಯಲ್ಲಿ ಚೀಟಿ ಕೊಡಲು ಬಂದವನನ್ನು ಪ್ರಶ್ನಿಸಿದ್ದಕ್ಕೆ ಹೆಡ್ ಕಾನ್ಸಟೇಬಲ್ ಮೇಲೆಯೇ ಹಲ್ಲೆ ನಡೆಸಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಕರಜಗಿ ಪಿಯು ಪರೀಕ್ಷಾ ಕೇಂದ್ರದಲ್ಲಿ ಎರಡು ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಯುವಕನೊಬ್ಬ ಪರೀಕ್ಷೆ ಬರೆಯುತ್ತಿರುವ ತಂಗಿಗೆ ಚೀಟಿ ಕೊಡಲು ಮುನ್ನುಗ್ಗುತ್ತಿದ್ದ ಈ ವೇಳೆ ಪೋಲೀಸ್ ಹೆಡ್ ಕಾನ್ಸಟೇಬಲ್ ಪಂಡಿತ ಪಾಂಡ್ರೆ ಆತನನ್ನು ತಡೆದು ಮರಳಿ ಹೋಗಲು ಸೂಚಿಸಿದ. ಆದರೆ ಇಷ್ಟಕ್ಕೆ ರೊಚ್ಚಿಗೆದ್ದ ಯುವಕನಿಂದ ಕರ್ತವ್ಯದಲ್ಲಿದ್ದ ಹೆಡ್ ಕಾನ್ಟೇಬಲ್ ಮೇಲೆಯೇ ಹಲ್ಲೆ ನಡೆದಿದೆ.
ಕೈಯಿಂದ ಮುಖಕ್ಕೆ ಹೊಡೆದಿದ್ದಲ್ಲದೇ ಕಲ್ಲು ಎತ್ತಿಕೊಂಡು ಪೊಲೀಸ್ ಮೇಲೆ ಹಲ್ಲೆ ಮಾಡಿದ್ದಾನೆ. ಹೆಡ್ ಕಾನ್ಸಟೇಬಲ್ ಪಂಡಿತ ಮೇಲೆ ನಡೆದ ಹಲ್ಲೆಯ ವಿಡಿಯೋ ವೈರಲ್ ಆಗಿದೆ.
ಅಫಜಲಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಹಲ್ಲೆಗೈದ ಆರೋಪಿ ಕೈಲಾಸ್ ಸಕ್ಕರಕಿ ಮತ್ತು ಆತನಿಗೆ ಸಪೋರ್ಟ ಮಾಡಿದ ಸಮೀರ ನಡುವಿನ ಕೇರಿ ಎಂಬಾತನನ್ನು ಬಂಧಿಸಲಾಗಿದೆ.
ಮೂವರು ವಿದ್ಯಾರ್ಥಿಗಳಿಗೆ 20 ಸಿಬ್ಬಂದಿ!:
ಕೊಪ್ಪಳ: ನಗರದ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ನಡೆದ ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಕೇವಲ ಮೂರು ವಿದ್ಯಾರ್ಥಿಗಳಿಗಾಗಿ 20ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸಿದರು.
ಉರ್ದು ವಿಷಯದ ಇಬ್ಬರು ಹಾಗೂ ಸಂಸ್ಕೃತ ವಿಷಯದ ಓರ್ವ ವಿದ್ಯಾರ್ಥಿ ಸೇರಿ ಮೂವರು ವಿದ್ಯಾರ್ಥಿಗಳು ಮಾತ್ರ ಪರೀಕ್ಷೆ ಬರೆದರು.
ಅವರಿಗೆ ವ್ಯವಸ್ಥೆ ಮಾಡಲು ಅಧಿಕಾರಿಗಳು, ಸಿಬ್ಬಂದಿ, ಪೊಲೀಸ್ ಬಂದೋಬಸ್ತ್ ಸೇರಿದಂತೆ 20ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸಿದರು.