Hassan: ನಿರಂತರ ಮಳೆಯ ಎಫೆಕ್ಟ್: ಮನೆ ಗೋಡೆ ಕುಸಿದು ಬಾಲಕ ಸಾವು
ಜಿಲ್ಲೆಯ ವಿವಿಧೆಡೆ ಮಳೆ ಅಬ್ಬರ ಮುಂದುವರಿದಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಮನೆ ಗೋಡೆ ಕುಸಿದು ಬಿದ್ದು ಮಲಗಿದ್ದ ಬಾಲಕ ಹಾಗೆಯೇ ಹೆಣವಾಗಿದ್ದಾನೆ.
ವರದಿ: ಕೆ.ಎಂ.ಹರೀಶ್, ಏಷ್ಯಾನೆಟ್ ಸುವರ್ಣ ನ್ಯೂಸ್, ಹಾಸನ
ಹಾಸನ (ಆ.05): ಜಿಲ್ಲೆಯ ವಿವಿಧೆಡೆ ಮಳೆ ಅಬ್ಬರ ಮುಂದುವರಿದಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಮನೆ ಗೋಡೆ ಕುಸಿದು ಬಿದ್ದು ಮಲಗಿದ್ದ ಬಾಲಕ ಹಾಗೆಯೇ ಹೆಣವಾಗಿದ್ದಾನೆ. ಚನ್ನರಾಯಪಟ್ಟಣ ತಾಲೂಕು ನುಗ್ಗೇಹಳ್ಳಿ ಹೋಬಳಿ, ಭೂವನಹಳ್ಳಿ (ವಡ್ಡರಹಟ್ಟಿ) ಗ್ರಾಮದ ವಿಜಯಕುಮಾರ್-ಚೈತ್ರ ದಂಪತಿ ಪುತ್ರ ಪ್ರಜ್ವಲ್ (13) ಮೃತಪಟ್ಟ ಬಾಲಕ. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು, ಪ್ರಜ್ವಲ್ ಮೂರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿದ್ದ. ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ಮೂರು ದಿನ ಹಾಸ್ಟೆಲ್‌ಗೆ ರಜೆ ನೀಡಿದ್ದರಿಂದ ಗುರುವಾರ ಸಂಜೆ ತಂದೆ ವಿಜಯಕುಮಾರ್ ಮಗನನ್ನು ಮನೆಗೆ ಕರೆದುಕೊಂಡು ಬಂದಿದ್ದರು.
ಸ್ನೇಹಿತರೊಂದಿಗೆ ಆಟವಾಡಿದ ಪ್ರಜ್ವಲ್, ಮನೆಗೆ ಬಂದು ಊಟ ಮಾಡಿ ರಾತ್ರಿ ಹತ್ತು ಗಂಟೆವರೆಗೂ ಟಿವಿ ನೋಡಿ ಅಜ್ಜಿ ತಾಯಮ್ಮ, ಅಣ್ಣ ಮನು ಜೊತೆ ಮಂಚದ ಮೇಲೆ ಮಲಗಿದ್ದ. ಮಲಗುವ ವಿಚಾರಕ್ಕೆ ಅಣ್ಣನೊಂದಿಗೆ ಸಣ್ಣ ಜಗಳ ನಡೆದು ನಂತರ ನೆಲದ ಮೇಲೆ ಮಲಗಿದ್ದ. ಅಜ್ಜಿ ಮಂಚದ ಮೇಲೆಯೇ ಮಲಗು ಎಂದರೂ, ಇಲ್ಲ ನನಗೆ ಸೆಕೆ ಆಗುತ್ತಿದೆ ಎಂದು ನೆಲದ ಮೇಲೆ ಪ್ರತ್ಯೇಕವಾಗಿ ನಿದ್ರೆಗೆ ಜಾರಿದ್ದ. ನಿರಂತರ ಮಳೆಯಿಂದ ಮನೆ ಗೋಡೆ ಶೀತಗೊಂಡಿದ್ದರಿಂದ ಮುಂಜಾನೆ ೪ ಗಂಟೆ ಸುಮಾರಿಗೆ ಏಕಾಏಕಿ ಕುಸಿದು ಪ್ರಜ್ವಲ್ ತಲೆ ಬಿದ್ದಿದೆ.
ಅಕ್ರಮ ಲೇಔಟ್ ನಿರ್ಮಾಣಕ್ಕೆ ಕಡಿವಾಣ ಹಾಕಿ: ಶಾಸಕ ಬಾಲಕೃಷ್ಣ
ಇದರ ಅರಿವಿಲ್ಲದೆ ಗಾಢ ನಿದ್ರೆಗೆ ಜಾರಿದ್ದ ನತದೃಷ್ಟ ಬಾಲಕ ಮಲಗಿದ ಸ್ಥಿತಿಯಲ್ಲಿಯೇ ಸಾವನ್ನಪ್ಪಿದ್ದಾನೆ. ಅಜ್ಜಿ ತಾಯಮ್ಮಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಕೂದಲೆಳೆ ಅಂತರದಲ್ಲಿ ತಾಯಮ್ಮ ಹಾಗೂ ಮೃತನ ಅಣ್ಣ ಮನು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದರಿಂದ ವರ ಮಹಾಲಕ್ಷ್ಮಿ ಹಬ್ಬದ ದಿನದಂದು ಮನೆಯಲ್ಲಿರಬೇಕಾದ ಸಂಭ್ರಮ ಇಲ್ಲವಾಗಿ ಗಾಢ ಸೂತಕ ಮನೆ ಮಾಡಿದೆ. ಮಗನನ್ನು ಕಳೆದುಕೊಂಡ ಪೋಷಕರು ಒಂದೇ ಸಮನೆ ಕಣ್ಣೀರು ಹಾಕುತ್ತಿದ್ದಾರೆ. ನುಗ್ಗೇಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ತಹಸೀಲ್ದಾರ್‌ರಿಂದ ಸಾಂತ್ವನ: ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ತಹಸೀಲ್ದಾರ್ ಗೋವಿಂದರಾಜು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಹೆತ್ತವರಿಗೆ ತಹಸೀಲ್ದಾರ್ ಸಾಂತ್ವನ ಹೇಳಿದರು. ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಿಸುವಂತೆ ಸ್ಥಳೀಯರು ತಹಸೀಲ್ದಾರ್ ಅವರಲ್ಲಿ ಮನವಿ ಮಾಡಿದರು.
ಮತ್ತಷ್ಟು ಮನೆ ಕುಸಿಯೋ ಭೀತಿ: ಆತಂಕಕಾರಿ ಸಂಗತಿ ಎಂದರೆ ಕಳೆದ ನಾಲ್ಕು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಇಡೀ ಗ್ರಾಮದ ಸುಮಾರು 40ಕ್ಕೂ ಹೆಚ್ಚಿ ಮನೆಗಳು ಕುಸಿದು ಬೀಳುವ ಹಂತ ತಲುಪಿವೆ. ಇದರಿಂದ ಇಷ್ಟೂ ಮನೆಗಳ ನಿವಾಸಿಗಳಲ್ಲಿ ಮುಂದೇನು ಎಂಬ ಆತಂಕ ಮನೆ ಮಾಡಿದೆ. 40 ವರ್ಷ ಹಳೆಯದಾದ ಮಣ್ಣಿನ ಗೋಡೆಗಳ ಮನೆಗಳನ್ನು ರಕ್ಷಣೆ ಮಾಡಿಕೊಳ್ಳಲು ಬಡ ಜನರು ಪರದಾಡುವಂತಾಗಿದೆ. ಸ್ಥಳಕ್ಕೆ ಭೇಟಿ ನೀಡಿದವರ ಎದುರು, ನಮ್ಮ ಜೀವ ಉಳಿಸಿ ಎಂದು ಜನರು ಕಣ್ಣೀರಿಡುತ್ತಿದ್ದಾರೆ. ಕೆಲವರು ಮುನ್ನೆಚ್ಚರಿಕೆಯಾಗಿ ಇಡೀ ಮನೆ ಮೇಲ್ಛಾವಣಿಗೆ ಪ್ಲಾಸ್ಟಿಕ್ ಹೊದಿಸಿ ರಕ್ಷಣೆ ಮಾಡಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಕೆ.ವಡ್ಡರಹಳ್ಳಿ ಗ್ರಾಮಸ್ಥರಿಗೆ ಜಲದಿಗ್ಬಂಧನ: ಮತ್ತೊಂದೆಡೆ ಚನ್ನರಾಯಪಟ್ಟಣ ತಾಲೂಕಿನ ಕಸಬಾ ಹೋಬಳಿ ಕೆ.ವಡ್ಡರಹಳ್ಳಿ ಗ್ರಾಮಸ್ಥರು ಧಾರಾಕಾರ ಮಳೆಯಿಂದ ಜಲದಿಗ್ಬಂಧನಕ್ಕೆ ಒಳಗಾಗಿ ಪರದಾಡುವಂತಾಗಿದೆ. ಬ್ಯಾಲದಕೆರೆಯಿಂದ ವಡ್ಡರಹಳ್ಳಿಗೆ ತೆರಳುವ ರಸ್ತೆ ಸಂಪೂರ್ಣ ಜಲಾವೃತ್ತವಾಗಿದ್ದು ಗ್ರಾಮಸ್ಥರು ತಮ್ಮ ಕೃಷಿ ಭೂಮಿಗೆ ತೆರಳಲೂ ಸಾಧ್ಯವಾಗುತ್ತಿಲ್ಲ. ಇನ್ನು ಮಕ್ಕಳು ಶಾಲಾ-ಕಾಲೇಜಿಗೆ ತೆರಳು ತೊಂದರೆ ಆಗುತ್ತಿದೆ. ಗ್ರಾಮದಿಂದ ಚನ್ನರಾಯಪಟ್ಟಣ ಹಾಗೂ ಅಕ್ಕ ಪಕ್ಕದ ಊರುಗಳಿಗೂ ತೆರಳಲಾಗದ ಸನ್ನಿವೇಶ ನಿರ್ಮಾಣವಾಗಿದೆ. ಬಾಗೂರು, ಕುರುವಂಕ, ದಿಡ್ಡಿಹಳ್ಳಿ, ಗೊಲ್ಲರ ಹೊಸಹಳ್ಳಿ ಸೇರಿದಂತೆ ವಿವಿಧ ಕೆರೆಗಳ ನೀರು ವಡ್ಡರಹಳ್ಳಿ ಗ್ರಾಮದ ಬಳಿಯ ಹಳ್ಳದಲ್ಲಿ ಹರಿಯುತ್ತಿದೆ. ಇದರಿಂದ ಗ್ರಾಮ ಒಂದು ದ್ವೀಪದಂತಾಗಿದ್ದು, ಜಾನುವಾರುಗಳಿಗೆ ಮೇವು ತರುವುದಕ್ಕೂ ಆಗುತ್ತಿಲ್ಲ ಎಂದು ರೈತರು ನೋವು ತೋಡಿಕೊಳ್ಳುತ್ತಿದ್ದಾರೆ.
ರಾಜಕೀಯ, ಪ್ರಕೃತಿ ವಿಕೋಪದ ಬಗ್ಗೆ ಭಯಾನಕ ಭವಿಷ್ಯ ನುಡಿದ ಕೋಡಿಮಠ ಶ್ರೀ
ಬಿರುಕು ಬಿಟ್ಟ ರಸ್ತೆ: ಅರಕಲಗೂಡು ತಾಲೂಕು ಕೊಣನೂರು ಕೆರೆ ಏರಿ ರಸ್ತೆ ಜೋರು ಮಳೆಯಿಂದ ಬಿರುಕು ಬಿಟ್ಟಿದೆ. ಈ ಮೂಲಕ ಮಲ್ಲಿಪಟ್ಟಣ, ಬೆಮ್ಮತ್ತಿ, ಹಂಡ್ರಂಗಿ, ಆಲದಮರ ಸೇರಿದಂತೆ ಸುಮಾರು 20 ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ಜನರು ಜೀವ ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ. ಅಷ್ಟೇ ಸ್ಥಳೀಯ ಶಾಸಕ ಎ.ಟಿ.ರಾಮಸ್ವಾಮಿ ಅವರೂ ತಮ್ಮ ಸ್ವಗ್ರಾಮ ಕೆ.ಅಬ್ಬೂರಿಗೆ ತೆರಳಲು ಈ ಮಾರ್ಗದಲ್ಲೇ ಹೋಗಬೇಕಿದೆ. ಸುಮಾರು 187 ಎಕರೆ ವಿಸ್ತೀರ್ಣದಲ್ಲಿರುವ ಕೆರೆ ಏರಿ ರಸ್ತೆಯಲ್ಲಿ ಸುಮಾರು 100 ಮೀಟರ್ ಉದ್ದ ಬಿರುಕು ಕಾಣಿಸಿಕೊಂಡಿದೆ. 15 ದಿನಗಳ ಹಿಂದೆ ಬಿರುಕು ಸಣ್ಣ ಪ್ರಮಾಣದಲ್ಲಿತ್ತು. ಈಗ ವಿಸ್ತರಿಸಿದ್ದು, ಯಾವಾಗ ಬೇಕಾದರೂ ರಸ್ತೆ ಕುಸಿಯುವ ಸಾಧ್ಯತೆ ಇದ್ದು, ಈ ಮಾರ್ಗದಲ್ಲಿ ವಾಹನ ಸಂಚಾರ ಬಂದ್ ಮಾಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಅಕಸ್ಮಾತ್ ಕೆರೆ ಒಡೆದರೆ ನೂರಾರು ಎಕರೆ ಜಮೀನು ಜಲಾವೃತವಾಗುವ ಆತಂಕ ಎದುರಾಗಿದೆ.