ಡಿಕೆಶಿ ಒಡೆತನದ ಬೆಂಗಳೂರು ಶಾಲೆಗೆ ಬಾಂಬ್ ಬೆದರಿಕೆ!
ಬೆಂಗಳೂರಿನ ಆರ್.ಆರ್.ನಗರದಲ್ಲಿರುವ ನ್ಯಾಷನಲ್ ಹಿಲ್ ವ್ಯೂ ಶಾಲೆಗೆ ಈ ಮೇಲ್ ಮೂಲಕ ಬೆದರಿಕೆ ಬಂದಿದೆ. ಇದು ಕೈ ನಾಯಕ ಡಿಕೆ ಶಿವಕುಮಾರ್ ಒಡೆತನದ ಶಾಲೆಯಾಗಿದೆ.
ಬೆಂಗಳೂರು (ಜು.18): ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಒಡೆತನದ ಶಾಲೆಗೆ ಬಾಂಬ್ ಬೆದರಿಕೆ ಬಂದಿದೆ. ಆರ್.ಆರ್.ನಗರದಲ್ಲಿರುವ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಶಾಲೆಗೆ ಈ ಮೇಲ್ ಮೂಲಕ ಬೆದರಿಕೆ ಬಂದಿದ್ದು, ಬೆಳಿಗ್ಗೆ ಶಾಲೆಗೆ ತೆರಳಿದ್ದ ಮಕ್ಕಳನ್ನ ಶಾಲಾ ಆಡಳಿತ ಮಂಡಳಿ ಮರಳಿ ಮನೆಗೆ ಕಳುಹಿಸಿದೆ. ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ಮತ್ತು ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ. ವಿಷಯ ತಿಳಿದ ತಕ್ಷಣ ಶಾಲಾ ಆಡಳಿತ ಮಂಡಳಿ ಶಾಲೆಗೆ ರಜೆ ನೀಡಿದೆ. ಶಾಲೆಯ ಶಿಕ್ಷಕರು ಹಾಗೂ ಮಕ್ಕಳನ್ನ ಹೊರಗಡೆ ಕಳುಹಿಸಲಾಗಿದೆ. ಪೋಷಕರು ಶಾಲೆಗೆ ಬಂದು ಮಕ್ಕಳನ್ನ ಮನೆಗೆ ಕರೆದುಕೊಂಡು ಹೋಗುತ್ತಿದ್ದಾರೆ.
ಈ ವಿಚಾರದ ಬಳಿಕ ಶಿಕ್ಷಕರು ಹಾಗೂ ಮಕ್ಕಳು ಆತಂಕಗೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಆರ್.ಆರ್.ನಗರ, ಜ್ಞಾನ ಭಾರತೀ ,ಬ್ಯಾಟರಾಯನಪುರ ಸುತ್ತಮುತ್ತಲ್ಲಿನ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಕೂಲ್ ಬಳಿ ಪರಿಶೀಲನೆ ನಡೆಸಿದ್ದಾರೆ. ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ್ ನಿಂಬರಗಿ , ಆರ್.ಆರ್.ನಗರ ಇನ್ಸ್ ಪೆಕ್ಟರ್ ಶಿವಣ್ಣ ಅವರು ಭೇಟಿ ನೀಡಿದ್ದಾರೆ.
RSS ಕಚೇರಿ ಮೇಲೆ ಬಾಂಬ್ ಎಸೆದ ದುಷ್ಕರ್ಮಿಗಳು, ಕಟ್ಟಡ ಧ್ವಂಸ!
ಡಿಕೆಶಿ ಪ್ರತಿಕ್ರಿಯೆ: ಬಾಂಬ್ ಬೆದರಿಕೆ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿಕೆ ನೀಡಿದ್ದು, ಇಂದು ಬೆಳಗ್ಗೆ ನಮ್ಮ ಶಾಲೆಯಲ್ಲಿ ಸ್ಟಾಫ್, ಪ್ರಿನ್ಸಿಪಲ್ ಎಲ್ಲರೂ ಶಾಲೆಗೆ ಹೋಗಿದ್ದಾರೆ. ಆಗ ಬಾಂಬ್ ಇಟ್ಟಿರೋದಾಗಿ ಮೇಲ್ ಬಂದಿದೆ. ಬೆದರಿಕೆ ಬಗ್ಗೆ ತಕ್ಷಣ ನಮಗೆ ತಿಳಿಸಿದ್ರು. ಸ್ಕೂಲ್ ಕ್ಯಾಂಪಸ್ ನಲ್ಲಿ ಇರೋರನ್ನ ಶಿಪ್ಟ್ ಮಾಡಿದೆವು. ಕೂಡಲೆ ಪೊಲೀಸ್ ಆಯುಕ್ತರ ಜೊತೆ ಮಾತನಾಡಿದೆವು. 70% ತಾಪಸಣೆ ಮಾಡಿದ್ದಾರೆ ಇನ್ನೂ, ತಪಾಸಣೆ ನಡೆಯುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ. ಪೋಷಕರು ಗಾಬರಿ ಆಗೋದು ಬೇಡ. ನಮ್ಮಲ್ಲಿ ಹೈ ಸೆಕ್ಯೂರಿಟಿ ಇದೆ. ಪ್ರತಿ ಮೂಮೆಂಟ್ ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗ್ತಿದೆ. ನಿನ್ನೆ ಒಂದು ಪರೀಕ್ಷೆ ಇತ್ತು. ಹಾಗಾಗಿ ಬೇರೆಯವರು ಬರಲಿಕ್ಕೆ ಅವಕಾಶ ನೀಡಲಾಗಿತ್ತು. ಸಮಸ್ಯೆ ಆಗೋದು ಬೇಡ ಅಂತ ಪೊಲೀಸರಿಗೆ ತಿಳಿಸಿದೆವು. ಅವರು ನಾವೇ ಎಲ್ಲಾ ನೋಡಿಕೊಳ್ಳೋದಾಗಿ ಹೇಳಿದ್ದಾರೆ. ಹಾಗಾಗಿ ನಾನು ತಡವಾಗಿ ರಾಷ್ಟ್ರಪತಿ ಮತದಾನಕ್ಕೆ ಆಗಮಿಸಿದ್ದೇನೆ ಎಂದು ಹೇಳಿದ್ದಾರೆ.
ಆರಗ ಜ್ಞಾನೇಂದ್ರ ಪ್ರತಿಕ್ರಿಯೆ: ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿ ಆರ್ ಆರ್ ನಗರದ ಖಾಸಗಿ ಕಾಲೇಜ್ ಗೆ ಬಾಂಬ್ ಕರೆ ಬಂದಿದೆ. ಇದರ ಬಗ್ಗೆ ಪೊಲೀಸ್ರು ಕ್ರಮವಹಿಸಿದ್ದಾರೆ. ಬಾಂಬ್ ಸ್ಕ್ವಾಡ್ ಅಲ್ಲಿಗೆ ಹೋಗಿದೆ. ಪರಿಶೀಲನೆ ನಡೆಸಲಾಗುತ್ತಿದೆ. ಈ ಹಿಂದೆಯೂ ಶಾಲೆಗಳಿಗೆ ಇಂತಹ ಕರೆ ಬಂದಿತ್ತು. ಆ ಬಳಿಕ ಬೆದರಿಕೆ ಕರೆಗಳು ಹುಸಿಯಾಗಿದ್ವು. ಇವತ್ತು ಕೂಡ ಬೆದರಿಕೆ ಕರೆ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದಿದ್ದಾರೆ.