Bitcoin scam; ಎಲ್ಲ ಪ್ರಶ್ನೆಗೆ ಉತ್ತರ ಕೊಟ್ಟ ಪೊಲೀಸ್ ಇಲಾಖೆ, ಒಂದು ವರ್ಷದಲ್ಲಿ ಆಗಿದ್ದಿಷ್ಟು!
* ಕರ್ನಾಟದಲ್ಲಿ ಬಿಟ್ ಕಾಯಿನ್ ಪ್ರಕರಣ
* ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಾಗಿದೆ
* ಕೊನೆಗೂ ಸ್ಪಷ್ಟನೆ ಕೊಟ್ಟ ಪೊಲೀಸ್ ಇಲಾಖೆ
* ಶ್ರೀಕಿ ಬಳಿ ಸ್ವಂತ ಬಿಟ್ ಕಾಯಿನ್ ವಾಲೆಟ್ ಇರಲೇ ಇಲ್ಲ
ಬೆಂಗಳೂರು (ನ. 13) ಬಿಟ್ ಕಾಯಿನ್ (Bitcoin) ಹಗರಣ ವಿಚಾರ ಸದ್ಯಕ್ಕೆ ಒಂದು ತಾರ್ಕಿಕ ಅಂತ್ಯ ಕಾಣುವ ಯಾವ ಲಕ್ಷಣಗಳು ಇಲ್ಲ. ಇದೀಗ ನಗರ ಪೊಲೀಸ್ ಆಯುಕ್ತರ ಕಚೇರಿಯಿಂದ (Bengaluru Police) ಸ್ಪಷ್ಟನೆ ನೀಡಲಾಗಿದೆ. ಅನೇಕ ಅನುಮಾನಗಳಿಗೆ ಉತ್ತರ ಇಲ್ಲಿ ಸಿಗುವ ಕೆಲಸವಾಗಿದೆ.
ಬಿಟ್ ಕಾಯಿನ್ ಪ್ರಕರಣದ ತನಿಖೆಯನ್ನ ಪಾರದರ್ಶಕವಾಗಿ ನಡೆಸಲಾಗಿದೆ ಯಾವುದೇ ಬಾಹ್ಯ ಒತ್ತಡಗಳಿಗೆ ಒಳಗಾಗಿ ಪ್ರಕರಣದ ತನಿಖೆ ನಡೆಸಿಲ್ಲ. ಕೆ.ಜಿ.ನಗರ, ಸೈಬರ್ ಕ್ರೈಮ್, ಅಶೋಕನಗರ 3 ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ಕೆ.ಜಿ.ನಗರ ಠಾಣೆಯಲ್ಲಿ ದಾಖಲಾದ ದೂರಿನಲ್ಲಿ ಈಗಾಗಲೇ ಚಾರ್ಜಶೀಟ್ ಸಹ ಸಲ್ಲಿಸಲಾಗಿದೆ. ಕೆ.ಜಿ.ನಗರದಲ್ಲಿ ದಾಖಲಾದ ದೂರಿನಿಂದ ಬಿಟ್ ಕಾಯಿನ್ ವಿಚಾರ ಬಯಲಾಗಿತ್ತು. ಕಳೆದ ವರ್ಷ ನವೆಂಬರ್ 4ರಂದು ದೂರು ದಾಖಲಾಗಿತ್ತು.
ಹ್ಯಾಕರ್ ಶ್ರೀಕಿಯ ರಣ ರೋಚಕ ಇತಿಹಾಸ
500 ಗ್ರಾಂ ಹೈಡ್ರೋ ಗಾಂಜಾ (Drugs) ಸಹಿತ ಓರ್ವ ಆರೋಪಿಯನ್ನ ಬಂಧಿಸಲಾಗಿತ್ತು. ಮುಂದುವರಿದ ತನಿಖೆಯಲ್ಲಿ ಬಂಧಿತರಾದ 10 ಜನರಲ್ಲಿ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ಸಹ ಓರ್ವ ಆರೋಪಿ. ತನಿಖೆಯಲ್ಲಿ ಕ್ರಿಫ್ಟೋ ಕರೆನ್ಸಿ ವೆಬ್‌ಸೈಟ್ ಹ್ಯಾಕಿಂಗ್ ಬಗ್ಗೆ ಬಾಯ್ಬಿಟ್ಟಿದ್ದ. ಬಳಿಕ ಪ್ರಕರಣ ಸಿಸಿಬಿಗೆ ವರ್ಗಾಯಿಸಲಾಗಿತ್ತು.
ತನಿಖೆಯ ದೃಷ್ಟಿಯಿಂದ ಬಿಟ್ ಕಾಯಿನ್ ವ್ಯಾಲೆಟ್ ತೆರೆಯುವುದು ಅಗತ್ಯವಾಗಿತ್ತು. ಕೋರ್ಟ್ ಅನುಮತಿ ಪಡೆದು ಸೈಬರ್ ತಜ್ಞರ ಸಮ್ಮುಖದಲ್ಲಿ ವ್ಯಾಲೆಟ್ ತೆರೆದಿದ್ದೆವು. 31.8 ಬಿಟ್ ಕಾಯಿನ್ ಜಫ್ತಿ ಮಾಡಿ ಪಾಸ್ ವರ್ಡ್ ಸಮೇತ ನ್ಯಾಯಾಲಕ್ಕೆ ಸಲ್ಲಿಸಲಾಗಿದೆ. ಪೊಲೀಸ್ ಸಿಬ್ಬಂದಿ, ನುರಿತ ಸೈಬರ್ ತಜ್ಞರನ್ನ ಒಳಗೊಂಡಂತೆ ತನಿಖೆ ನಡೆಸಲಾಗಿದೆ
ತನಿಖೆಯ ಪ್ರತೀ ಹಂತದಲ್ಲಿಯೂ ವಿಡಿಯೋ ಚಿತ್ರೀಕರಣ ಮಾಡಲಾಗಿದೆ ವೇಲ್ ಅಲರ್ಟ್ ನಲ್ಲಿ 14,682 ಬಿಟ್ ಕಾಯಿನ್ ವರ್ಗಾವಣೆ ಆಗಿದೆ ಎಂದಿರುವುದು ಆಧಾರರಹಿತ ಈ ನೆಲದ ಕಾನೂನಿನಂತೆ ನಿಷ್ಪಕ್ಷಪಾತ ತನಿಖೆ ಮಾಡಲಾಗಿದೆ ನಿರ್ದಿಷ್ಟವಲ್ಲದ, ಸಾಮಾಜಿಕ ಜಾಲತಾಣದ ಆರೋಪಗಳಿಗೆ ಉತ್ತರಿಸಲು ಸಾಧ್ಯವಿಲ್ಲ. ಬಂಧಿತ ಆರೋಪಿಗಳು ಮಾಧ್ಯಮಗಳಲ್ಲಿ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಆದರೂ ಸಹ ಯಾವುದೇ ವಿದೇಶಿ, ಅಂತರಾಷ್ಟ್ರೀಯ ತನಿಖಾ ಸಂಸ್ಥೆ ನಮ್ಮನ್ನ ಸಂಪರ್ಕಿಸಿಲ್ಲ. ಆರೋಪಿ ಹೇಳಿಕೊಂಡಿರುವಂತೆ ಹ್ಯಾಕಿಂಗ್ ಆಗಿದೆ ಎನ್ನುವುದನ್ನ ಯಾರೊಬ್ಬರೂ ಖಚಿತಪಡಿಸಿಲ್ಲ.
ಬಳಿಕ ಬಿಟ್ ಕಾಯಿನ್ ವರ್ಗಾವಣೆಗಾಗಿ ನ್ಯಾಯಾಲಯದ ಅನುಮತಿ ಪಡೆಯಲಾಯಿತು. ವ್ಯಾಲೆಟ್ ತೆರೆದಾಗ ಪತ್ತೆಯಾಗಿದ್ದು 186.811 ಬಿಟ್ ಕಾಯಿನ್. ಅಸಲಿಗೆ ಆರೋಪಿ ಶ್ರೀಕೃಷ್ಣನ ಬಳಿ ಸ್ವಂತ ಬಿಟ್ ಕಾಯಿನ್ ವ್ಯಾಲೆಟ್ ಇರಲಿಲ್ಲ. ಆತನಿಂದ ವಶಕ್ಕೆ ಪಡೆದಿದ್ದು ಲೈವ್ ವ್ಯಾಲೆಟ್ ಆಗಿರುತ್ತದೆ
ಮತ್ತು ಆ ಲೈವ್ ವ್ಯಾಲೆಟ್ ನ ಕೀ ಸಹ ಆರೋಪಿ ಬಳಿ ಪತ್ತೆಯಾಗಿರುವುದಿಲ್ಲ. ಹಾಗಾಗಿ ವಶಪಡಿಸಿಕೊಂಡ ವ್ಯಾಲೆಟ್ ನ್ನ ಹಾಗೆಯೇ ಬಿಡಲಾಗಿರುತ್ತದೆ. ಮತ್ತು ಈ ಎಲ್ಲ ವಿವರಣೆಗಳ ಸಹಿತ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಇತ್ತೀಚಿನ ಆತನ ಬಂಧನದ ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದೇವೆ. ಆತನ ಬಳಿ ಪತ್ತೆಯಾದ ಮಾದಕದ ಕುರಿತು ತನಿಖೆಗೆ ಕಸ್ಟಡಿಗೆ ಕೇಳಲಾಗಿತ್ತು. ರಕ್ತ ಮತ್ತು ಮೂತ್ರದ ಮಾದರಿ ಪಡೆ.ಲು ಅನುಮತಿ ಪಡೆಯಲಾಗಿತ್ತು.
ವಿಕ್ಟೋರಿಯಾದಲ್ಲಿ ಸಾಧ್ಯವಾಗದ ಕಾರಣ ಬೌರಿಂಗ್ ನಲ್ಲಿ ಪರೀಕ್ಷೆ ನಡೆಸಲಾಗಿದೆ ರಕ್ತ ಮತ್ತು ಮೂತ್ರದ ಮಾದರಿಯನ್ನ ಎಫ್ ಎಸ್ ಎಲ್ ಗೆ ಕಳಿಸಲಾಗಿತ್ತು ಎಫ್ ಎಸ್ ಎಲ್ ವರದಿಯಲ್ಲಿ ನೆಗೆಟಿವ್ ಬಂದಿರುತ್ತದೆ. ನಂತರ ಆತನ ಬಂಧನದ ವಿಚಾರವಾಗಿ ರಿಟ್ ಅರ್ಜಿ ಹಾಕಲಾಗಿತ್ತು. ರಿಟ್ ಅರ್ಜಿ ಸಲ್ಲಿಸಿದವರಿಗೆ 5 ಸಾವಿರ ದಂಡ ವಿಧಿಸಿ ಶ್ರೀಕೃಷ್ಣನ ಬಿಡುಗಡೆಯಾಗಿರುತ್ತದೆ ಎಂದು ಪೊಲೀಸ್ ಇಲಾಖೆ ಸ್ಪಷ್ಟನೆಯಲ್ಲಿ ತಿಳಿಸಿದೆ.
ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಈ ಪ್ರಕರಣಕ್ಕೆ ಸಂಬಂಧಿಸಿ ವಾಕ್ ಸಮರಗಳು ನಡೆಯುತ್ತಲೇ ಇವೆ. ಪೊಲೀಸ್ ವಶದಲ್ಲಿ ಶ್ರೀಕಿ ಇದ್ದಾಗಲೇ ಬಿಟ್ ಕಾಯಿನ್ ವರ್ಗಾವಣೆಯಾಗಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿಕೊಂಡು ಬಂದಿದೆ.