Asianet Suvarna News Asianet Suvarna News

ಬೆಂಗಳೂರು: ನಿಮ್ಹಾನ್ಸ್‌ನಲ್ಲಿ ಬಯಾಪ್ಸ್‌ ಕದ್ದು ಕೇರಳಕ್ಕೆ ಮಾರಾಟ..!

ನಿಮ್ಹಾನ್ಸ್ ಸಂಸ್ಥೆಯ ನರರೋಗ ಶಾಸ್ತ್ರ ವಿಭಾಗದ ತಾಂತ್ರಿಕ ನೌಕರ ಎಂ.ಆರ್‌.ಚಂದ್ರಶೇಖರ್‌ ಮತ್ತು ಶವಗಾರದ ಸಹಾಯಕ ಎಸ್‌.ಅಣ್ಣಾದೊರೈ ಹಾಗೂ ಕೇರಳ ಮೂಲದ ರಘುರಾಮ್ ವಿರುದ್ಧ ಆರೋಪ ಬಂದಿದೆ. ಈ ಸಂಬಂಧ ನಿಮ್ಹಾನ್ಸ್ ಸಂಸ್ಥೆಯ ಕುಲಸಚಿವ ಡಾ। ಶಂಕರನಾರಾಯಣ್ ರಾವ್ ನೀಡಿದ ದೂರಿನ ಅನ್ವಯ ಎಫ್ಐಆರ್ ದಾಖಲಾಗಿದೆ.
 

Biopsy Stolen from Bengaluru NIMHANS and Sold to Kerala grg
Author
First Published Dec 28, 2023, 5:26 AM IST

ಬೆಂಗಳೂರು(ಡಿ.28):  ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಹಣಕ್ಕಾಗಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್)ಯಲ್ಲಿ ರೋಗಿಗಳಿಂದ ಸಂಗ್ರಹಿಸಿದ್ದ ‘ಬಯಾಪ್ಸ್‌ ಸ್ಯಾಂಪಲ್ಸ್‌’ (ಜೀವಕಣಗಳು) ಅನ್ನು ಸಂಸ್ಥೆಯ ನೌಕರರು ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಹಾನ್ಸ್ ಸಂಸ್ಥೆಯ ನರರೋಗ ಶಾಸ್ತ್ರ ವಿಭಾಗದ ತಾಂತ್ರಿಕ ನೌಕರ ಎಂ.ಆರ್‌.ಚಂದ್ರಶೇಖರ್‌ ಮತ್ತು ಶವಗಾರದ ಸಹಾಯಕ ಎಸ್‌.ಅಣ್ಣಾದೊರೈ ಹಾಗೂ ಕೇರಳ ಮೂಲದ ರಘುರಾಮ್ ವಿರುದ್ಧ ಆರೋಪ ಬಂದಿದೆ. ಈ ಸಂಬಂಧ ನಿಮ್ಹಾನ್ಸ್ ಸಂಸ್ಥೆಯ ಕುಲಸಚಿವ ಡಾ। ಶಂಕರನಾರಾಯಣ್ ರಾವ್ ನೀಡಿದ ದೂರಿನ ಅನ್ವಯ ಎಫ್ಐಆರ್ ದಾಖಲಾಗಿದೆ.

ಮಂಗಳೂರಿನ ಹಂಪನಕಟ್ಟೆ ಬಳಿ ನೈತಿಕ ಪೊಲೀಸ್ ಗಿರಿ ಪ್ರಕರಣ ಮೂವರು ಆರೋಪಿಗಳ ಬಂಧನ!

ಇತ್ತೀಚೆಗೆ ಆಸ್ಪತ್ರೆಯ ಶವಗಾರಕ್ಕೆ ನರರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ। ಅನಿತಾ ಮಹಾದೇವನ್ ಹಾಗೂ ಹೆಚ್ಚುವರಿ ಪ್ರಾಧ್ಯಾಪಕ ಡಾ. ಬಿ.ಎನ್.ನಂದೀಶ್ ತಂಡ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ ವೇಳೆ ಬಯಾಪ್ಸ್‌ ಸ್ಯಾಂಪಲ್ಸ್‌ನಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಸಿಬ್ಬಂದಿಯನ್ನು ವಿಚಾರಣೆ ನಡೆಸಿದಾಗ ಈ ಕಳ್ಳತನ ಕೃತ್ಯ ಬಯಲಾಗಿದೆ.

ಸಂಶೋಧನೆಗೆ ಬಳಕೆ?

ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಬಿವಿಜಿ ಏಜೆನ್ಸಿ ಮೂಲಕ ಗುತ್ತಿಗೆ ನೌಕರ ಆಧಾರದ ಮೇರೆಗೆ ಚಂದ್ರಶೇಖರ್ ಮತ್ತು ಅಣ್ಣಾ ದೊರೈ ನೇಮಕಗೊಂಡಿದ್ದರು. ನಿಮ್ಹಾನ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವ ರೋಗಿಗಳಿಂದ ರೋಗ ಲಕ್ಷಣ ಪತ್ತೆಗೆ ವೈದ್ಯರು ಬಯಾಪ್ಸ್‌ ಸ್ಯಾಂಪಲ್ಸ್ ಸಂಗ್ರಹಿಸುತ್ತಾರೆ. ಅಂತೆಯೇ ಸರಿಸುಮಾರು ಒಂದು ಸಾವಿರಕ್ಕೂ ಹೆಚ್ಚಿನ ರೋಗಿಗಳ ಬಯಾಪ್ಸ್‌ ಸ್ಯಾಂಪಲ್ಸ್ ಅನ್ನು ಶವಗಾರದಲ್ಲಿ ದಾಸ್ತಾನು ಮಾಡಲಾಗಿತ್ತು. ಈ ಸ್ಯಾಂಪಲ್ಸ್ ಅನ್ನು ವೈದ್ಯಕೀಯ ಸಂಶೋಧನೆಗೆ ಸಹ ಬಳಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ. 

ಡಿಸೆಂಬರ್ ೨೩ರಂದು ಡಾ। ಅನಿತಾ ಹಾಗೂ ಡಾ। ಬಿ.ಎನ್.ನಂದೀಶ್ ತಂಡ ತಪಾಸಣೆ ನಡೆಸಿದ ವೇಳೆ ರೋಗಿಗಳಿಂದ ಸಂಗ್ರಹಿಸಿದ್ದ ‘ಬಯಾಪ್ಸ್‌ ಸ್ಯಾಂಪಲ್ಸ್‌’ ಸಂಬಂಧ ರಿಜಿಸ್ಟ್ರರ್‌ ಪುಸ್ತಕದಲ್ಲಿ ನಮೂದಾಗಿರುವುದಕ್ಕೂ ಸ್ಟೋರೇಜ್‌ನಲ್ಲಿ ಇರುವುದಕ್ಕೂ ವ್ಯತ್ಯಾಸ ಕಂಡು ಬಂದಿದೆ. ಈ ಬಗ್ಗೆ ಟೆಕ್ನಿಷಿಯನ್‌ ಚಂದ್ರಶೇಖರ್ ಹಾಗೂ ಸಹಾಯಕ ಅಣ್ಣಾದೊರೈಯನ್ನು ಎಚ್‌ಒಡಿ ಅನಿತಾ ಪ್ರಶ್ನಿಸಿದಾಗ ಸೂಕ್ತ ಉತ್ತರ ನೀಡದೆ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಕೊನೆಗೆ ತೀವ್ರ ವಿಚಾರಣೆ ಬಳಿಕ ಆಸ್ಪತ್ರೆಯಲ್ಲಿ ಸಂಗ್ರಹಿಸಿದ್ದ ಬಯಾಪ್ಸ್‌ ಸ್ಯಾಂಪಲ್ಸ್‌ ಅನ್ನು ಕೇರಳದ ರಘುರಾಮ್ ಮೂಲಕ ಹೊರ ರಾಜ್ಯದ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಿಗೆ ಮಾರಾಟ ಮಾಡಿರುವುದಾಗಿ ಇಬ್ಬರು ಬಾಯ್ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಡಾ। ಅನಿತಾ ಅವರು ಕುಲಸಚಿವ ಡಾ. ಶಂಕರ ನಾರಾಯಣ ರಾವ್ ಅವರಿಗೆ ಮಾಹಿತಿ ನೀಡಿದ್ದಾರೆ. ಈ ವರದಿ ಆಧರಿಸಿ ಸಿದ್ದಾಪುರ ಠಾಣೆಗೆ ಕುಲಸಚಿವರು ದೂರು ನೀಡಿದ್ದಾರೆ.

Bengaluru : ಪಾರ್ಟಿಯಲ್ಲಿ ಎಣ್ಣೆ ಜಾಸ್ತಿ ಬೇಡವೆಂದ ಗೆಳೆಯನನ್ನೇ ಕೊಲೆಗೈದ ಸ್ನೇಹಿತ!

200 ಸ್ಯಾಂಪಲ್ಸ್ ಮಾರಾಟ?

ನಾಲ್ಕು ತಿಂಗಳಲ್ಲಿ ಸುಮಾರು 200ಕ್ಕೂ ಹೆಚ್ಚಿನ ರೋಗಿಗಳ ಬಯಾಪ್ಸ್‌ ಸ್ಯಾಂಪಲ್ಸ್ ಮಾರಾಟ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಆರೋಪಿಗಳಾದ ಚಂದ್ರಶೇಖರ್ ಹಾಗೂ ಅಣ್ಣಾದೊರೈನನ್ನು ವಿಚಾರಣೆ ನಡೆಸಲಾಗಿದೆ. ಆದರೆ ಇದುವರೆಗೆ ಯಾರನ್ನೂ ಬಂಧಿಸಿಲ್ಲ. ಕೇರಳದ ರಘುನಾಥ್ ಖಾಸಗಿ ವ್ಯಕ್ತಿಯಾಗಿದ್ದು, ಆತನ ಪೂರ್ವಾಪರ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಅಲ್ಲದೆ ಬಯಾಪ್ಸ್‌ ಸ್ಯಾಂಪಲ್ಸ್ ವಿಚಾರವಾಗಿ ಕೆಲವು ವೈದ್ಯಕೀಯ ಗೊಂದಲಗಳ ಬಗ್ಗೆ ನಿಮ್ಹಾನ್ಸ್ ಸಂಸ್ಥೆಯಿಂದ ಸ್ಪಷ್ಟನೆ ಕೇಳಿದ್ದೇವೆ. ನಿಮ್ಹಾನ್ಸ್‌ ಸಂಸ್ಥೆಯ ವರದಿ ಬಳಿಕ ಮುಂದಿನ ಕ್ರಮ ಜರುಗಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿಮ್ಹಾನ್ಸ್‌ನಿಂದಲೂ ಆಂತರಿಕ ವಿಚಾರಣೆ

ಪ್ರಕರಣ ಸಂಬಂಧ ನಿಮ್ಹಾನ್ಸ್ ಸಂಸ್ಥೆಯಿಂದ ವಿಚಾರಣೆ ನಡೆಸಲು ಕುಲಸಚಿವರು ಸಮಿತಿ ರಚಿಸಿದ್ದಾರೆ. ಸ್ಟೋರೇಜ್‌ನಿಂದ ಬಯಾಪ್ಸ್‌ ಸ್ಯಾಂಪಲ್ಸ್ ಹೊರ ತೆಗೆಯಬೇಕಾದರೆ ಎಚ್‌ಒಡಿ ಪೂರ್ವಾನುಮತಿ ಕಡ್ಡಾಯವಾಗಿದೆ. ಹೀಗಾಗಿ ಎಚ್‌ಒಡಿ ಗಮನಕ್ಕೆ ಬಾರದೆ ಹೇಗೆ ಸ್ಯಾಂಪಲ್ಸ್ ಹೊರಗೆ ಮಾರಾಟವಾಗಿದೆ ಎಂಬುದನ್ನು ಪತ್ತೆ ಹಚ್ಚಲು ಆಂತರಿಕ ಸಮಿತಿ ರಚಿಸಲಾಗಿದೆ ಎಂದು ಕುಲಸಚಿವ ಡಾ। ಶಂಕರನಾರಾಯಣ್ ರಾವ್‌ ಹೇಳಿದ್ದಾರೆ.

Latest Videos
Follow Us:
Download App:
  • android
  • ios