ಬೆಂಗಳೂರು: ಸಿಗ್ನಲ್ ಜಂಪ್ ಮಾಡಿ ಕಾನ್‌ಸ್ಟೇಬಲ್‌ಗೆ ಹೊಡೆದ ಬೈಕ್ ಸವಾರ ಜೈಲಿಗೆ
ವೈಯಾಲಿಕಾವಲ್ ನಿವಾಸಿ ಪ್ರತೀಕ್ ಆರ್.ಶಿಂಧೆ ಬಂಧಿತ. ಸದಾಶಿವನಗರ ಸಂಚಾರ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಪಿ.ವೈ.ಶಿವರಾಜು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬೆಂಗಳೂರು(ಮಾ.22): ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿದ್ದಲ್ಲದ್ದೇ ಕರ್ತವ್ಯ ನಿರತ ಸಂಚಾರ ಪೊಲೀಸ್ ಕಾನ್‌ಸ್ಟೇಬಲ್‌ನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿದ್ದ ದ್ವಿಚಕ್ರ ವಾಹನ ಸವಾರನನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವೈಯಾಲಿಕಾವಲ್ ನಿವಾಸಿ ಪ್ರತೀಕ್ ಆರ್.ಶಿಂಧೆ(25) ಬಂಧಿತ. ಸದಾಶಿವನಗರ ಸಂಚಾರ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಪಿ.ವೈ.ಶಿವರಾಜು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಂದು ಕೇಸ್, ಮೂರು ಎಫ್‌ಐಆರ್!, ಗೂಂಡಾ ಕಾಯ್ದೆಯಡಿ ಮಂಗಳೂರು ಹಿಂದೂ ಕಾರ್ಯಕರ್ತನ ಬಂಧನ!
ಏನಿದು ಘಟನೆ?:
ಸಂಚಾರ ಕಾನ್‌ಸ್ಟೇಬಲ್ ಶಿವರಾಜು ಅವರು ಮಾ.19ರಂದು ರಾತ್ರಿ 8.30ರ ಸುಮಾರಿಗೆ ಸದಾಶಿವನಗರ ಪೊಲೀಸ್ ಠಾಣೆ ಜಂಕ್ಷನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಎಂ.ಎಸ್.ರಾಮಯ್ಯ ಜಂಕ್ಷನ್ ಕಡೆಯಿಂದ ದ್ವಿಚಕ್ರ ವಾಹನದಲ್ಲಿ ಸ್ನೇಹಿತೆಯನ್ನು ಕೂರಿಸಿಕೊಂಡು ಆರೋಪಿ ಪ್ರತೀಕ್ ಬಂದಿದ್ದಾನೆ. ಈ ವೇಳೆ ಸಿಗ್ನಲ್ ಜಂಪ್ ಮಾಡಿದ ಆರೋಪಿಯು ಶಿವರಾಜು ಸಿಗ್ನಲ್ ಕಂಟ್ರೋಲ್ ಮಾಡುತ್ತಿದ್ದ ಐಲ್ಯಾಂಡ್ ಬಳಿಗೆ ಬಂದು ಏಕವಚನದಲ್ಲಿ ಸರಿಯಾಗಿ ಸಿಗ್ನಲ್ ನೀಡಲು ಬರುವುದಿಲ್ಲವಾ ಎಂದು ಶಿವರಾಜು ಅವರನ್ನು ಪ್ರಶ್ನಿಸಿದ್ದಾನೆ. ಈ ವೇಳೆ ಆತನ ಜತೆಯಲ್ಲಿ ಇದ್ದ ಯುವತಿ ‘ಹೀಗೆ ಮಾತನಾಡುವುದು ತಪ್ಪು. ಇಲ್ಲಿಂದ ಹೋಗೋಣ ಬಾ’ ಎಂದು ಕರೆದಿದ್ದಾಳೆ. ಆದರೂ ಆರೋಪಿ ಪ್ರತೀಕ್ ಅವಾಚ್ಯ ಶಬ್ಧಗಳಿಂದ ಶಿವರಾಜು ಅವರನ್ನು ನಿಂದಿಸಿದ್ದಾನೆ.
ಬೆನ್ನಟ್ಟಿ ಹಿಡಿದ ಪೇದೆ
ಶಿವರಾಜು ಅವರು ಪ್ರತೀಕ್‌ನನ್ನು ಹಿಡಿಯಲು ಮುಂದಾದಾಗ, ಆರೋಪಿ ಪ್ರತೀಕ್ ಕೈಗಳಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಆದರೂ ಬಿಡದ ಶಿವರಾಜು ಸ್ಥಳೀಯರ ನೆರವಿನಿಂದ ಆತನನ್ನು ಬೆನ್ನಟ್ಟಿ ಹಿಡಿದಿದ್ದರು. ಬಳಿಕ ಗಸ್ತು ಪೊಲೀಸರನ್ನು ಸ್ಥಳಕ್ಕೆ ಕರೆಸಿಕೊಂಡು ಆರೋಪಿಯನ್ನು ಒಪ್ಪಿಸಿದ್ದರು. ಈ ಸಂಬಂಧ ನೀಡಿದ ದೂರಿನ ಮೇರೆಗೆ ಸದಾಶಿವನಗರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.