ಮದುವೆಯಾದ ಮಹಿಳೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರೀತಿಯ ಬಲೆ ಬೀಸಿದ ಯುವಕನೊಬ್ಬ, ಆಕೆಯ ಸಂಬಂಧಿಯ ಮೇಲೆ ಕೊಲೆ ಯತ್ನ ನಡೆಸಿದ್ದಾನೆ. ಈ ಘಟನೆ ಬೆಂಗಳೂರಿನ ಹೆಚ್‌ಎಎಲ್‌ನಲ್ಲಿ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ಬೆಂಗಳೂರು (ಜು.20): ಮದುವೆಯಾದ ಮಹಿಳೆಗೆ ತನ್ನನ್ನು ಲವ್ ಮಾಡುವಂತೆ ಇನ್‌ಸ್ಟಾಗ್ರಾಮ್‌ ಮೂಲಕ ಪೀಡಿಸುತ್ತಿದ್ದ ತಮಿಳುನಾಡು ಮೂಲದ ಯುವಕನಿಗೆ ಬುದ್ಧಿ ಹೇಳುವುದಕ್ಕೆಂದು ಬೆಂಗಳೂರಿಗೆ ಕರೆಸಿಕೊಳ್ಳಲಾಗಿದೆ. ಮಹಿಳೆ ಭೇಟಿಯಾಗಲು ಬಂದ ಯುವಕ, ಆಕೆಯ ಸಂಬಂಧಿಯ ಕುತ್ತಿಗೆ ಚಾಕು ಚುಚ್ಚಿ ಕೊಲೆ ಯತ್ನ ಮಾಡಿದ್ದು, ಇದೀಗ ಜೈಲು ಸೇರಿದ್ದಾನೆ.

ಈ ಘಟನೆ ಜುಲೈ17 ರಂದು ಹೆಚ್ಎಎಲ್ ನಲ್ಲಿ ನಡೆದ ಘಟನೆ. ತಮಿಳುನಾಡು ಮೂಲದ ಸೆಲ್ವ ಕಾರ್ತಿಕ್‌ಗೆ ಇನ್ಸ್ಟಾಗ್ರಾಮ್ ನಲ್ಲಿ ಮಹಿಳೆಯ ಪರಿಚಯವಾಗಿದೆ. ಇನ್ಸ್ಟಾಗ್ರಾಮ್ ನಲ್ಲಿಯೇ ಮಹಿಳೆಗೆ ಮೆಸೇಜ್ ಮಾಡಿ ಲವ್ ಮಾಡುವಂತೆ ಕಾಟ ಕೊಡುತ್ತಿದ್ದನು. ಪ್ರೀತಿ ಮಾಡುವಂತೆ ಪೀಡಿಸುತ್ತಿದ್ದ ತಮಿಳುನಾಡು ತಿರಪ್ಪತ್ತೂರು ಮೂಲದವನಾಗಿದ್ದನು. ಈ ವಿಚಾರವನ್ನು ಮಹಿಳೆ ತನ್ನ ಗಂಡನಿಗೆ ಹಾಗೂ ಅವರ ತಂದೆಗೆ ಹೇಳಿದ್ದಳು. ಮಹಿಳೆಯ ತಂದೆಗೆ ವಿಚಾರ ಗೊತ್ತಾಗಿದ್ದೇ ಕಾರ್ತಿಕ್‌ನನ್ನು ಮಾತುಕತೆಗೆ ಎಂದು ಕರೆಸಿದ್ದಾರೆ.

ಮಗಳಿಗೆ ಲವ್ ಮಾಡುವಂತೆ ಕಿರುಕುಳ ನೀಡುತ್ತಿದ್ದ ಕಾರ್ತಿನ್‌ನನ್ನು ತಮಿಳುನಾಡಿನಿಂದ ಬೆಂಗಳೂರಿನ ಹೆಚ್‌ಎಲ್‌ಗೆ ಕರೆಸಿಕೊಂಡಿದ್ದಾರೆ. ಯುವತಿಯ ಅಪ್ಪನ ಜೊತೆಗೆ ಮಾತುಕತೆ ನಡೆಸಿದ ಬಳಿಕ, ತಮಿಳುನಾಡು ಮೂಲದ ಯುವಕ ಕಾರ್ತಿಕ್ ನಾನು ಒಮ್ಮೆಯಾದರೂ ಮಹಿಳೆ ಜೊತೆ ಮಾತನಾಡಬೇಕು ಎಂದು ಪಟ್ಟು ಹಿಡಿದಿದ್ದಾನೆ. ಈ ವೇಳೆ ಆಯ್ತು ಬಾ, ನಿಂಗೆ ಆ ಯುವತಿ ತೋರಿಸುತ್ತೇವೆ ಎಂದು ಬೈಕ್‌ನಲ್ಲಿ ಕೂರಿಸಿಕೊಂಡು ಮನೆಗೆ ಕಡೆ ಹೊರಟಿದ್ದಾರೆ. ಈ ವೇಳೆ ಅದೇನ್ ಆಯ್ತೋ ಏನೋ ಮಹಿಳೆ ಸಂಬಂಧಿಗೆ ಚಾಕು ಇರಿದಿದ್ದಾನೆ.

ಬೈಕ್‌ನಲ್ಲಿಯೇ ಪ್ರಶಾಂತ್ ಕತ್ತುಕೊಯ್ದ ಆರೋಪಿ ಸೆಲ್ವ ಕಾರ್ತಿಕ್ ಅಲ್ಲಿಂದ ಪರಾರಿ ಆಗಲು ಯತ್ನಿಸಿದ್ದಾನೆ. ಗಾಯಾಳು ಯುವಕನಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ. ಆಸ್ಪತ್ರೆಯ ಮೂಲಕ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ಮಹಿಳೆ ಮನೆಯವರು ಹೆಚ್‌ಎಎಲ್‌ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದೀಗ ಹೆಚ್ಎಎಲ್ ಠಾಣೆ ಪೊಲೀಸರು ಆರೋಪಿ ಕಾರ್ತಿಕ್‌ನನ್ನು ಬಂಧಿಸಿದ್ದಾರೆ. ಹೆಚ್ಚಿನ ತನಿಖೆಯನ್ನು ಮುಂದುವರೆಸಿದ್ದಾರೆ.

ಇನ್ನು ನಮ್ಮ ದೇಶದಲ್ಲಿ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್ ಬಳಕೆ ಮಾಡುವ ಅನೇಕರು ಇಂತಹ ಪ್ರಕರಣಗಳಲ್ಲಿ ಸಿಲುಕಿ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಅನೇಕರು ತಮ್ಮ ಗಂಡನನ್ನು ಬಿಟ್ಟು ಇನ್‌ಸ್ಟಾಗ್ರಾಮ್‌ನಲ್ಲಿ ಪ್ರೀತಿ ಮಾಡಿದವರೊಂದಿಗೆ ಹೋಗಿದ್ದಾರೆ. ಇನ್ನು ಕೆಲವರು ಗಂಡನನ್ನು ಕೊಲೆ ಮಾಡಿದ್ದಾರೆ. ಇನ್ನು ಮತ್ತೆ ಕೆಲವು ಪ್ರಕರಣಗಳಲ್ಲಿ ಗಂಡನೇ ಹೆಂಡತಿ ಅಥವಾ ಪ್ರೀತಿ ಮಾಡಿದ ಮಹಿಳೆಯರನ್ನು ಕೊಲೆ ಮಾಡಿದ ಘಟನೆಗಳೂ ವರದಿ ಆಗಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣವನ್ನು ಬಳಕೆ ಮಾಡುವವರು ಭಾರೀ ಎಚ್ಚರಿಕೆಯಿಂದ ಇರಬೇಕು. ತಮ್ಮ ಜೀವನ ಅಥವಾ ಸಂಸಾರಕ್ಕೆ ಮಾರಕವಾಗುತ್ತಿದೆ ಎಂದಾದಲ್ಲಿ ಅದರಿಂದ ದೂರ ಇರುವುದೇ ಒಳ್ಳೆಯದು. ಯಾರಿಂದ ತೊಂದರೆ ಆಗುತ್ತದೆಯೋ ಅವರನ್ನು ದೂರ ಇಡಲು ಬ್ಲಾಕ್ ಲಿಸ್ಟ್‌ಗೆ ಹಾಕಿದರೂ ಸಾಕು ಎಂದು ತಜ್ಞರು ಹೇಳಿದ್ದಾರೆ.