ಮದುವೆಯಾಗುವುದಾಗಿ ನಂಬಿಸಿ ವಿಚ್ಛೇದಿತ ಮಹಿಳೆಯ ಖಾಸಗಿ ವಿಡಿಯೋಗಳನ್ನು ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆರೋಪಿ ಶ್ರೀನಿವಾಸ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು (ಜೂ. 17): ಪ್ರೀತಿಯ ಹೆಸರಿನಲ್ಲಿ ಮದುವೆಯಾಗುತ್ತೇನೆ ಎಂದು ನಂಬಿಸಿ, ವಿಚ್ಛೇದಿತ ಮಹಿಳೆಯ ಖಾಸಗಿ ಫೋಟೋ ಮತ್ತು ವಿಡಿಯೋ ಮಾಡಿಕೊಂಡು ಬ್ಲ್ಯಾಕ್‌ಮೇಲ್ ಮಾಡಲು ಮುಂದಾದ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಹಿಳೆಯ ದೂರಿನಂತೆ, ಶ್ರೀನಿವಾಸ್ ಎಂಬಾತ ಅವರೊಂದಿಗೆ ಪ್ರೀತಿಯ ಸಂಬಂಧ ಬೆಳೆಸಿದ್ದನು. ನಂತರ ಮದುವೆ ಮಾಡಿಕೊಳ್ಳುವುದಾಗಿ ಭರವಸೆ ನೀಡಿ, ಆತನ ವಿಶ್ವಾಸಕ್ಕೆ ಒಳಪಟ್ಟಿದ್ದ ಮಹಿಳೆಯು ಖಾಸಗಿ ಕ್ಷಣಗಳನ್ನು ಆತನೊಂದಿಗೆ ಹಂಚಿಕೊಂಡಿದ್ದಾಳೆ. ಈ ವೇಳೆ ಆ ಕ್ಷಣಗಳನ್ನು ಆರೋಪಿಯಾಗಿದ್ದ ಶ್ರೀನಿವಾಸ್ ತನ್ನ ಮೊಬೈಲ್‌ನಲ್ಲಿ ಚಿತ್ರಿಸಿದ್ದಾನೆ. ಮಹಿಳೆಯ ಹೇಳಿಕೆಯಂತೆ, ಆರೋಪಿಯು ಈ ಫೋಟೋ ಮತ್ತು ವಿಡಿಯೋಗಳನ್ನು ಬಳಸಿ ಅವಳಿಗೆ ಮಾನಸಿಕವಾಗಿ ಒತ್ತಡ ಹಾಕಿ, ನಿರಂತರ ಹಣ ಹಾಗೂ ಚಿನ್ನಾಭರಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಈ ಬ್ಲ್ಯಾಕ್‌ಮೇಲ್ ಹಾಗೂ ದೋಖಾ ಇಷ್ಟಕ್ಕೆ ನಿಲ್ಲದೇ, ಮಹಿಳೆಯ ಅಣ್ಣನಿಗೂ ಕರೆಮಾಡಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ಅಷ್ಟೇ ಅಲ್ಲದೆ, ಮಹಿಳೆಯ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿ, ಅದರಲ್ಲಿ ಖಾಸಗಿ ವಿಡಿಯೋಗಳನ್ನು ಅಪ್ಲೋಡ್ ಮಾಡುವ ಯತ್ನ ಕೂಡ ಮಾಡಿದ್ದನು. ಈ ಎಲ್ಲ ಪೀಡನೆಯಿಂದ ತೀವ್ರವಾಗಿ ಮಾನಸಿಕವಾಗಿ ಬಳಲುತ್ತಿದ್ದ ಮಹಿಳೆ, ಕೊನೆಗೆ ಸಹನೆ ಮೀರಿದ ಪರಿಣಾಮ ಕಾಡುಗೋಡಿ ಪೊಲೀಸ್ ಠಾಣೆಗೆ ದೂರು ನೀಡಿದಳು. ಪೋಲಿಸರು ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿಯನ್ನು ಬಂಧಿಸಿದ್ದಾರೆ. ಶಂಕಿತನನ್ನು ಬಂಧಿಸಿ ಹೆಚ್ಚಿನ ವಿಚಾರಣೆ ಮುಂದುವರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಘಟನೆಯು ಸಾಮಾಜಿಕ ಜಾಲತಾಣ ಹಾಗೂ ಡಿಜಿಟಲ್ ಮಾಧ್ಯಮದ ದುರುಪಯೋಗದಿಂದ ಪ್ರತ್ಯೇಕ ಮಹಿಳೆಯರು ಹೇಗೆ ಬಲಿಯಾಗುತ್ತಿದ್ದಾರೆ ಎಂಬುದನ್ನು ಮತ್ತೊಮ್ಮೆ ದೃಢಪಡಿಸಿದೆ. ಸಾಮಾಜಿಕ ಜಾಗೃತಿ ಹಾಗೂ ಕಾನೂನು ತಿಳುವಳಿಕೆಯ ಅಗತ್ಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಹಿಳೆಯರು ಯಾವುದೇ ವ್ಯಕ್ತಿಯಾಗಿದ್ದರೂ ಆತನೊಂದಿಗೆ ತಮ್ಮ ವೈಯಕ್ತಿಕ ಹಾಗೂ ಖಾಸಗಿ ವಿಚಾರಗಳನ್ನು ಹಂಚಿಕೊಳ್ಳುವ ಮುನ್ನ ಎಚ್ಚರಿಕೆವಹಿಸಬೇಕು. ಇದು ನಿಮ್ಮ ಖಾಸಗಿತನಕ್ಕೆ ಧಕ್ಕೆ ತರುವುದಲ್ಲದೇ, ನಿಮಗೆ ಮುಂದೊಂದು ದಿನ ಸಂಕಷ್ಟ ತಂದೊಡ್ಡಲಿದೆ ಎಂಬುದು ಇಲ್ಲಿ ಸಾಬೀತಾಗಿದೆ.