ಬೆಂಗಳೂರಿನ ಎಸ್‌ಬಿಐ ಲಾಕರ್ ಒಂದರಲ್ಲಿ ಇಟ್ಟಿದ್ದ 12 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣಗಳು ಕಾಣೆಯಾಗಿರುವುದಾಗಿ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ. ಆಗಿದ್ದೇನು?
ಮನೆಯಲ್ಲಿ ಚಿನ್ನಾಭರಣ ಸೇರಿದಂತೆ ಅಮೂಲ್ಯ ವಸ್ತುಗಳನ್ನು ಇಟ್ಟುಕೊಳ್ಳಲು ಭಯವಾಗುವ ಹಿನ್ನೆಲೆಯಲ್ಲಿ ಬಹುತೇಕ ಮನೆಗಳಲ್ಲಿ ಅವುಗಳನ್ನು ಲಾಕರ್‌ನಲ್ಲಿ ಇಡುತ್ತಾರೆ. ಆದರೆ, ಶಾಕಿಂಗ್ ಎಂಬ ವಿಷಯವೊಂದು ಇದೀಗ ಬೆಳಕಿಗೆ ಬಂದಿದೆ. ಬೆಂಗಳೂರಿನ ಗೃಹಿಣಿಯೊಬ್ಬರು ಲಾಕರ್‌ನಲ್ಲಿ ಇಟ್ಟಿದ್ದ ಸುಮಾರು 12 ಲಕ್ಷ ಮೌಲ್ಯದ 145 ಗ್ರಾಂ ಚಿನ್ನ ಮತ್ತು ವಜ್ರದ ಆಭರಣಗಳು ಕಾಣೆಯಾಗಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಲಾಕರ್‌ನಲ್ಲಿ ಆಭರಣ ಕಳುವಾದರೂ ಬ್ಯಾಂಕ್ ಅಧಿಕಾರಿಗಳು ತಮ್ಮ ದೂರಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ, ದಾರಿ ಕಾಣದ ಮಹಿಳೆ ಎಸ್‌ಬಿಐ ಅಧಿಕಾರಿಗಳ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ಬೆಂಗಳೂರಿನ 54 ವರ್ಷದ ಗೃಹಿಣಿ ಬಿಂದು ಸಿ.ಡಿ. ಎನ್ನುವವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಡಾಲರ್ಸ್ ಕಾಲೋನಿ ಶಾಖೆಯ ಅಧಿಕಾರಿಗಳ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದು, ಅವರ ಲಾಕರ್‌ನಿಂದ 145 ಗ್ರಾಂ ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣಗಳು ನಾಪತ್ತೆಯಾಗಿವೆ ಎಂದು ಆರೋಪಿಸಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ.
ಹಲವಾರು ದೂರುಗಳ ಹೊರತಾಗಿಯೂ ಮಹಿಳೆ ಬ್ಯಾಂಕ್ ಅಧಿಕಾರಿಗಳಿಂದ ಯಾವುದೇ ಸ್ಪಷ್ಟನೆಯನ್ನು ಪಡೆಯಲು ವಿಫಲವಾದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಅವರು ತಮ್ಮ ದೂರನ್ನು ಆಲಿಸದ ಹಿನ್ನೆಲೆಯಲ್ಲಿ ಪೊಲೀಸರನ್ನು ಸಂಪರ್ಕಿಸಬೇಕಾಯಿತು ಎಂದಿದ್ದಾರೆ. ವರದಿಯ ಪ್ರಕಾರ, ಬಿಂದು ಸಿ.ಡಿ. ಅವರು ಡಿಸೆಂಬರ್ 2022 ರಿಂದ ಎಸ್‌ಬಿಐ ಡಾಲರ್ಸ್ ಕಾಲೋನಿ ಶಾಖೆಯಲ್ಲಿ ಉಳಿತಾಯ ಖಾತೆ ಮತ್ತು ಲಾಕರ್ ಸೌಲಭ್ಯವನ್ನು ಹೊಂದಿದ್ದಾರೆ. ಸದಾಶಿವನಗರ ಪೊಲೀಸರಿಗೆ ಸಲ್ಲಿಸಿದ ದೂರಿನಲ್ಲಿ, ಅವರು ಕೊನೆಯದಾಗಿ 2024 ರ ನವೆಂಬರ್‌ನಲ್ಲಿ ತಮ್ಮ ಲಾಕರ್ ಅನ್ನು ಪರಿಶೀಲಿಸಿದ್ದರು ಮತ್ತು ಆ ಸಮಯದಲ್ಲಿ ತಮ್ಮ ಎಲ್ಲಾ ಬೆಲೆಬಾಳುವ ವಸ್ತುಗಳು ಹಾಗೇ ಇದ್ದವು ಎಂದು ಅವರು ಉಲ್ಲೇಖಿಸಿದ್ದಾರೆ.
ಆದಾಗ್ಯೂ, ಮಾರ್ಚ್ 28, 2025 ರಂದು ಲಾಕರ್‌ಗೆ ಭೇಟಿ ನೀಡಿದಾಗ, ತಾವು ಸಂಗ್ರಹಿಸಿಟ್ಟಿದ್ದ ಚಿನ್ನ ಮತ್ತು ವಜ್ರದ ಆಭರಣಗಳು ಕಾಣೆಯಾಗಿರುವುದನ್ನು ಕಂಡುಕೊಂಡಿದ್ದಾರೆ. ಕಣ್ಮರೆಯಿಂದ ಆಘಾತಕ್ಕೊಳಗಾದ ಅವರು ತಕ್ಷಣ ಈ ವಿಷಯವನ್ನು ಬ್ಯಾಂಕ್ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆದರೆ ಯಾವುದೇ ಪ್ರಯೋಜನ ಆಗಲಿಲ್ಲ. ಬಿಂದು ಅಲ್ಲಿಗೆ ನಿಲ್ಲಲಿಲ್ಲ - ಅವರು ಎಸ್‌ಬಿಐನ ಗ್ರಾಹಕ ಸೇವೆಗೆ ಕರೆ ಮಾಡಿದರೂ ಪ್ರಯೋಜನ ಆಗಲಿಲ್ಲ. ಕೊನೆಗೆ ಮುಖ್ಯ ವಿಜಿಲೆನ್ಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಆದರೂ ಅವರ ಪ್ರಯತ್ನಗಳು ಫಲ ಕೊಡಲಿಲ್ಲ. ಬದಲಾಗಿ, ಕಾಣೆಯಾದ ವಸ್ತುಗಳಿಗಾಗಿ ಮನೆಯಲ್ಲಿ ಪರಿಶೀಲಿಸಲು ಅವರಿಗೆ ಪದೇ ಪದೇ ಹೇಳಲಾಯಿತು. ಇದರಿಂದ ಬೇಸತ್ತ ಬಿಂದು ಅವರು ಕೊನೆಯದಾಗಿ ಪೊಲೀಸರಲ್ಲಿ ದೂರು ದಾಖಲು ಮಾಡಿದ್ದಾರೆ.
ಎಸ್‌ಬಿಐ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು ಮಾಡಿದ ಬಳಿಕ ಕಾರ್ಯ ಪ್ರವೃತ್ತರಾಗಿರುವ ಪೊಲೀಸರು ಎಸ್‌ಬಿಐ ಅಧಿಕಾರಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 305(ಎ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ, ಇದು ವಾಸಸ್ಥಳಗಳು, ಸಾರಿಗೆ ಸಾಧನಗಳು ಅಥವಾ ಪೂಜಾ ಸ್ಥಳಗಳಲ್ಲಿ ಕಳ್ಳತನಕ್ಕೆ ಸಂಬಂಧಿಸಿದೆ. ಪೊಲೀಸರು ಈ ವಿಷಯದ ಬಗ್ಗೆ ತನಿಖೆ ಆರಂಭಿಸಿದ್ದಾರೆ ಮತ್ತು ಯಾವುದೇ ಸಂಭಾವ್ಯ ಉಲ್ಲಂಘನೆಯನ್ನು ಪತ್ತೆಹಚ್ಚಲು ಬ್ಯಾಂಕ್ ಸಿಬ್ಬಂದಿಯನ್ನು ಪ್ರಶ್ನಿಸುವ ಮತ್ತು ಸಿಸಿಟಿವಿ ದೃಶ್ಯಾವಳಿಗಳು ಮತ್ತು ಪ್ರವೇಶ ದಾಖಲೆಗಳನ್ನು ಪರಿಶೀಲಿಸುವ ನಿರೀಕ್ಷೆಯಿದೆ.
