ಬೆಂಗಳೂರು[ಫೆ.18]: ಮಹಿಳಾ ಟೆಕಿಗೆ ಲೈಂಗಿಕ ಕಿರುಕುಳ ನೀಡಿದ ಉಬರ್‌ ಕ್ಯಾಬ್‌ ಚಾಲಕನನ್ನು ಕೆ.ಆರ್‌.ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ಹಿಂದುಪುರ ನಿವಾಸಿ ರಾಮ್‌ ಮೋಹನ್‌ (30) ಬಂಧಿತ ಕ್ಯಾಬ್‌ ಚಾಲಕ. ಉತ್ತರ ಭಾರತೀಯ ಮೂಲದ 25 ವರ್ಷದ ಯುವತಿ ಕೊಟ್ಟದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಯುವತಿ ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದು, ಟಿ.ಸಿ.ಪಾಳ್ಯದಲ್ಲಿ ನೆಲೆಸಿದ್ದರು. ಪ್ರತಿಷ್ಠಿತ ಕಂಪನಿಯಲ್ಲಿ ಸಾಫ್ಟ್‌ವೇರ್‌ ಉದ್ಯೋಗಿಯಾಗಿದ್ದಾರೆ. ಫೆ.1ರಂದು ಸ್ನೇಹಿತರ ಮನೆಗೆ ತೆರಳಿದ್ದರು. ಸಂಜೆ 6.30ರ ಸುಮಾರಿಗೆ ಹೆಬ್ಬಾಳದಿಂದ ಉಬರ್‌ ಕ್ಯಾಬ್‌ ಬುಕ್‌ ಮಾಡಿಕೊಂಡು ಕೆ.ಆರ್‌.ಪುರಕ್ಕೆ ವಾಪಸ್‌ ಆಗುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ಟಿ.ಸಿ.ಪಾಳ್ಯ ಸಮೀಪ ಕ್ಯಾಬ್‌ ನಿಲ್ಲಿಸಿದ್ದ ಚಾಲಕ ಆಕೆಯ ಕಾಲು ಹಿಡಿದು ಎಳೆದಾಡಿದ್ದ. ಆರೋಪಿ ವರ್ತನೆಗೆ ಯುವತಿ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ, ಬಟ್ಟೆಹಿಡಿದು ಎಳೆದಾಡಿ ಅಸಭ್ಯ ವರ್ತನೆ ತೋರಿದ್ದ. ಈ ವೇಳೆ ಯುವತಿ ಕ್ಯಾಬ್‌ ಬಾಗಿಲು ತೆಗೆದು ತಪ್ಪಿಸಿಕೊಳ್ಳಲು ಮುಂದಾದಾಗ ಜೋರಾಗಿ ಕಾರು ಚಾಲನೆ ಮಾಡಿದ್ದ. ನಂತರ ನಗರದೆಲ್ಲೆಡೆ ಕ್ಯಾಬ್‌ನಲ್ಲಿ ಸುತ್ತಾಡಿಸಿ ಪೊಲೀಸರಿಗೆ ದೂರು ಕೊಡದಂತೆ ಬೆದರಿಸಿದ್ದ. ಅದಕ್ಕೆ ಆಕೆ ಒಪ್ಪಿದ ಬಳಿಕ ಟಿ.ಸಿ.ಪಾಳ್ಯಕ್ಕೆ ತಂದು ಬಿಟ್ಟು ಹೋಗಿದ್ದ.

ಘಟನೆ ಬಗ್ಗೆ ಯುವತಿ ಕೆ.ಆರ್‌.ಪುರ ಠಾಣೆಗೆ ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತನ ಮೊಬೈಲ್‌ ಲೋಕೇಷನ್‌ ಆಧಾರದ ಮೇಲೆ ಹಿಂದೂಪುರದಿಂದ ಬಂಧಿಸಿ, ನಗರಕ್ಕೆ ಕರೆ ತಂದಿದ್ದಾರೆ.