*ಜಾಲಿ ರೈಡ್‌ಗೆ ಬಂದಿದ್ದ ಟೆಕ್ಕಿಗಳ ಬೈಕ್‌ಗೆ ಕಾರು ಡಿಕ್ಕಿ*ಹೆಬ್ಬಾಳ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಘಟನೆ*ಅತಿವೇಗ ಪಾನಮತ್ತ ಚಾಲನೆ ಕಾರಣ
ಬೆಂಗಳೂರು (ಫೆ. 28): ಎರಡು ಪ್ರತ್ಯೇಕ ರಸ್ತೆ ಅಪಘಾತ ಪ್ರಕರಣಗಳಲ್ಲಿ ಇಬ್ಬರು ಸಾಫ್ಟ್‌ವೇರ್ ಎಂಜಿನಿಯರ್ ಸೇರಿ ಮೂವರು ಸವಾರರು ಮೃತಪಟ್ಟಿರುವ ಘಟನೆ ಹೆಬ್ಬಾಳ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬ್ಯಾಟರಾಯನಪುರ ಜಂಕ್ಷನ್‌ನಲ್ಲಿ ಕಾರು ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಮೃತಹಳ್ಳಿ ನಿವಾಸಿಗಳಾದ ಯತೀಶ್(22) ಹಾಗೂ ಕಿರಣ್(22) ಮೃತರು. ಇಬ್ಬರು ಇತ್ತೀಚೆಗಷ್ಟೇ ಎಂಜಿನಿಯರಿಂಗ್ ಪದವಿ ಮುಗಿಸಿ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಗಿಟ್ಟಿಸಿದ್ದರು. ಕೊರೋನಾ ಹಿನ್ನೆಲೆಯಲ್ಲಿ ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ಶನಿವಾರ ಕೆಲಸ ಮುಗಿಸಿ ದ್ವಿಚಕ್ರ ವಾಹನದಲ್ಲಿ ಸುತ್ತಾಡಲು ಹೊರಬಂದಿದ್ದರು.
ತಡರಾತ್ರಿ 1.30ರ ಸುಮಾರಿಗೆ ಬ್ಯಾಟರಾಯನಪುರ ಜಂಕ್ಷನ್‌ನಲ್ಲಿ ಹೋಗುವಾಗ, ಕೊಡಿಗೇಹಳ್ಳಿ ಗೇಟ್‌ನಿಂದ ಏರ್‌ಪೋರ್ಟ್ ಕಡೆಗೆ ತೆರಳುತ್ತಿದ್ದ ಕಾರೊಂದು ಏಕಾಏಕಿ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ರಸ್ತೆಗೆ ಬಿದ್ದು ಉಜ್ಜಿದೆ. ಇದರಿಂದಾಗಿ ಯತೀಶ್ ಮತ್ತು ಕಿರಣ್ ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆ ವೇಳೆ ಸವಾರರಿಬ್ಬರು ತಲೆಗೆ ಹೆಲ್ಮೆಟ್ ಧರಿಸಿರಲಿಲ್ಲ. ಘಟನೆ ಬಳಿಕ ಚಾಲಕ ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಕಾರು ಜಪ್ತಿ ಮಾಡಿದ್ದು, ಚಾಲಕನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:Bengaluru Crime: ಮದ್ಯ ಸೇವನೆಗೆ ಹಣ ನೀಡದಿದ್ದಕ್ಕೆ ಹೆತ್ತ ತಾಯಿಯನ್ನೇ ಕೊಂದ ಪಾಪಿ ಮಗ
ರಸ್ತೆ ವಿಭಜಕಕ್ಕೆ ಗುದ್ದಿದ ಬೈಕ್ ಸವಾರ: ಮತ್ತೊಂದು ಅಪಘಾತ ಪ್ರಕರಣದಲ್ಲಿ ಮಾನ್ಯತಾ ಟೆಕ್‌ಪಾರ್ಕ್ ಬಳಿಯ ರಿಂಗ್ ರಸ್ತೆಯಲ್ಲಿ ರಸ್ತೆ ವಿಭಜಕಕ್ಕೆ ಗುದ್ದಿಕೊಂಡು ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಟ್ಟಿದ್ದಾರೆ. ಬಾಗಲಗುಂಟೆಯ ರಘುವೀರ್(27) ಮೃತ ಸವಾರ.
ಮುಂಜಾನೆ 5.30ರ ಸುಮಾರಿಗೆ ರಘುವೀರ್ ವೇಗವಾಗಿ ದ್ವಿಚಕ್ರ ವಾಹನದಲ್ಲಿ ಹೋಗುವಾಗ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಗುದ್ದಿದ್ದಾರೆ. ಈ ವೇಳೆ ದ್ವಿಚಕ್ರ ವಾಹನ ಸಹಿತ ರಸ್ತೆಗೆ ಬಿದ್ದಿದ್ದರಿಂದ ಹೆಲ್ಮೆಟ್ ಧರಿಸದ್ದರಿಂದ ತಲೆಗೆ ತೀವ್ರ ಪೆಟ್ಟಾಗಿ ರಕ್ತಸ್ರಾವವಾಗಿದೆ. ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಿಸದೇ ರಘುವೀರ್ ಮೃತಪಟ್ಟಿದ್ದಾರೆ.
ಅತಿಯಾದ ವೇಗ ಹಾಗೂ ಪಾನಮತ್ತ ಚಾಲನೆಯೇ ಅಪಘಾತ ಕಾರಣ ಎನ್ನಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಈ ಬಗ್ಗೆ ನಿಖರ ಮಾಹಿತಿ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಈ ಎರಡೂ ಅಪಘಾತ ಪ್ರಕರಣಗಳ ಸಂಬಂಧ ಹೆಬ್ಬಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:Road Accident: ಒಂದೇ ಬೈಕ್‌ನಲ್ಲಿ ಬೆಳಗಾವಿಯ ನಾಲ್ವರು ಸ್ನೇಹಿತರು.. ಮೃತ್ಯು ಅಪ್ಪಿಕೊಂಡರು
2 ಕಾರು, ಬೈಕ್ ಮೇಲೆ ಲಾರಿ ಪಲ್ಟಿ: 6 ಜನರ ಸಾವು: ಕಳೆದ ತಿಂಗಳು ಮೈಸೂರು ಮುಖ್ಯರಸ್ತೆಯ ಕುಂಬಳಗೋಡು ಸಮೀಪ ಸೋಮವಾರ ಸಂಜೆ ಲಾರಿ, ಕಾರು ಹಾಗೂ ಬೈಕ್ ನಡುವೆ ಸರಣಿ ಅಪಘಾತ ಸಂಭವಿಸಿ, ಮಗು ಸೇರಿದಂತೆ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದರು.
ಮೈಸೂರು ರಸ್ತೆ ಕಾಮಗಾರಿ ನಡೆಯುತ್ತಿದ್ದು, ಜಲ್ಲಿ ತುಂಬಿಕೊಂಡು ವೇಗವಾಗಿ ಬಂದ ಟಿಪ್ಪರ್ ಲಾರಿ ನಿಯಂತ್ರಣ ತಪ್ಪಿ ಎಡ ಭಾಗಕ್ಕೆ ಪಲ್ಟಿಯಾಗಿದ್ದು, ಪಕ್ಕದಲ್ಲಿಯೇ ಇದ್ದ ಎರಡು ಕಾರು ಒಂದು ಬೈಕ್ ಮೇಲೆ ಬಿದ್ದಿತ್ತು. ಒಂದೇ ಕಾರಿನಲ್ಲಿದ್ದ ನಾಲ್ವರು ಪ್ರಯಾಣಿಕರು, ಮತ್ತೊಂದು ಕಾರಿನಲ್ಲಿದ್ದ ಒಬ್ಬ ಪ್ರಯಾಣಿಕ ಹಾಗೂ ಒಬ್ಬ ಬೈಕ್ ಸವಾರ ಸೇರಿ ಆರು ಮಂದಿ ಸ್ಥಳದಲ್ಲಿಯೇ ಸಾವಿಗೀಡಾಗಿದ್ದರು.
ಎರಡು ಕಾರುಗಳಲ್ಲಿ ತಲಾ 5ರಂತೆ 10 ಜನ ತೆರಳುತ್ತಿದ್ದರು. ಒಂದೇ ಕುಟುಂಬದ ನಾಲ್ವರು ಸಾವಿಗೀಡಾಗಿದ್ದರು. ಉಳಿದಂತೆ ಕಾರ್‌ಗಳಲ್ಲಿದ್ದ ಐದು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕ್ಕಪುಟ್ಟಗಾಯಗಳಾಗಿದ್ದವು. ಇದೇ ಸಂದರ್ಭದಲ್ಲಿ ಅಕ್ಕಪಕ್ಕದಲ್ಲಿ ಸಂಚರಿಸುತ್ತಿದ್ದ ಐದಾರು ವಾಹನಗಳು ಬಹುತೇಕ ಜಖಂ ಆಗಿವೆ.
