ಈಗಾಗಲೇ ಪ್ರಕರಣದ ಕುರಿತು ಎನ್‌ಐಎಗೆ ಮಾಹಿತಿ ನೀಡಿರುವುದನ್ನು ನಗರ ಪೊಲೀಸ್ ಆಯುಕ್ತ ದಯಾನಂದ್ ಖಚಿತಪಡಿಸಿದ್ದಾರೆ. ಹೀಗಾಗಿ ಶಂಕಿತ ಉಗ್ರರ ಜಾಲದ ಮುಂದಿನ ತನಿಖೆಯನ್ನು ಎನ್‌ಐಎ ಕೈಗೆತ್ತಿಕೊಳ್ಳಲಿದೆ ಎಂದು ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.
ಬೆಂಗಳೂರು(ಜು.20): ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಜ್ಜಾಗಿದ್ದಾಗ ಸಿಸಿಬಿ ಬಲೆಗೆ ಬಿದ್ದ ಐವರು ಎಲ್‌ಇಟಿ ಶಂಕಿತ ಉಗ್ರರ ಬಂಧನ ಪ್ರಕರಣವು ಹೆಚ್ಚಿನ ತನಿಖೆಗೆ ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ವರ್ಗಾವಣೆಯಾಗುವ ಸಾಧ್ಯತೆಯಿದೆ.
ಈಗಾಗಲೇ ಪ್ರಕರಣದ ಕುರಿತು ಎನ್‌ಐಎಗೆ ಮಾಹಿತಿ ನೀಡಿರುವುದನ್ನು ನಗರ ಪೊಲೀಸ್ ಆಯುಕ್ತ ದಯಾನಂದ್ ಖಚಿತಪಡಿಸಿದ್ದಾರೆ. ಹೀಗಾಗಿ ಶಂಕಿತ ಉಗ್ರರ ಜಾಲದ ಮುಂದಿನ ತನಿಖೆಯನ್ನು ಎನ್‌ಐಎ ಕೈಗೆತ್ತಿಕೊಳ್ಳಲಿದೆ ಎಂದು ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.
Breaking: ಬೆಂಗಳೂರಲ್ಲಿ ದೊಡ್ಡ ಮಟ್ಟದ ಸ್ಫೋಟಕ್ಕೆ ಪ್ಲ್ಯಾನ್: ಐವರು ಶಂಕಿತ ಉಗ್ರರು ಅರೆಸ್ಟ್
ಐವರು ಶಂಕಿತ ಉಗ್ರರಿಗೆ ವಿದೇಶದ ವ್ಯಕ್ತಿಗಳ ಜತೆ ಸಂಪರ್ಕವಿರುವುದು ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಅಲ್ಲದೆ ಈ ಪ್ರಕರಣದ ಪ್ರಮುಖ ಆರೋಪಿ ಶಂಕಿತ ಉಗ್ರ ಆರ್.ಟಿ.ನಗರದ ಮಹಮ್ಮದ್ ಜುನೈದ್ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ. ಹಾಗೆಯೇ ಈ ತಂಡಕ್ಕೆ ಜಿಹಾದ್ ಬೋಧಿಸಿ ಮೂಲಭೂತವಾದಿಗಳನ್ನಾಗಿ ರೂಪಿಸಿದ್ದು ಕೇರಳ ಮೂಲದ ಶಂಕಿತ ಉಗ್ರ ನಾಸಿರ್ ಆಗಿದ್ದಾನೆ. ಈ ಹಿನ್ನೆಲೆಯಲ್ಲಿ ಪ್ರಕರಣವು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ವ್ಯಾಪ್ತಿ ಹೊಂದಿರುವ ಕಾರಣಕ್ಕೆ ಎನ್‌ಐಎ ತನಿಖೆ ನಡೆಸಬಹುದು ಎನ್ನಲಾಗಿದೆ.
ಇನ್ನು ಶಂಕಿತರ ವಿರುದ್ಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಚು (120ಬಿ), ದೇಶದ್ರೋಹ (121ಎ) ಹಾಗೂ ಕಾನೂಬಾಹಿರ ಚಟುವಟಿಕೆಗಳ ನಿರ್ಬಂಧ ಕಾಯ್ದೆ (ಯುಎಪಿಎ) ಅಡಿ ಎಫ್‌ಐಆರ್ ದಾಖಲಾಗಿದೆ. ನಿಯಮಾನುಸಾರ ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಿಸಿದ ಯುಎಪಿಎ ಕಾಯ್ದೆಯಡಿ ದಾಖಲಾದ ಪ್ರಕರಣವನ್ನು ಎನ್‌ಐಎ ತನಿಖೆ ನಡೆಸಬಹುದಾಗಿದೆ. ಹೀಗಾಗಿ ಶಂಕಿತ ಐವರು ಉಗ್ರರ ಬಂಧನ ಪ್ರಕರಣವನ್ನು ಸಿಸಿಬಿ ಪ್ರಾಥಮಿಕ ಹಂತದ ತನಿಖೆ ನಡೆಸಿದ ಬಳಿಕ ಎನ್‌ಐಎಗೆ ಹಸ್ತಾಂತರಿಸಲಿದೆ ಎಂದು ಮೂಲಗಳು ಹೇಳಿವೆ.
