ಬೆಂಗಳೂರಿನಲ್ಲಿ ಅಕ್ಕನ ಅನೈತಿಕ ಸಂಬಂಧಕ್ಕೆ ಬೇಸತ್ತು ತಮ್ಮನೇ ಆಕೆಯ ಪ್ರಿಯಕರನನ್ನು ಕೊಲೆ ಮಾಡಿದ್ದಾನೆ. ನಟ ದರ್ಶನ್ ಅಭಿಮಾನಿಯಾಗಿದ್ದ ಕಿಶೋರ್ ಎಂಬಾತ ಕೊಲೆಯಾದ ವ್ಯಕ್ತಿ. ಅಕ್ಕನಿಗೂ ಗಲ್ಲೆ ಮಾಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರು (ಫೆ.20): ಅಕ್ಕನನ್ನು ಒಂದೊಳ್ಳೆಯ ಕುಟುಂಬಕ್ಕೆ ಮದುವೆ ಮಾಡಿಕೊಟ್ಟಿದ್ದರೂ ನಟ ದರ್ಶನ್ ಅಭಿಮಾನಿಯಾಗಿರೋ ದೂರದ ಸಂಬಂಧಿಯೊಂದಿಗೆ ಅಕ್ಕ ಅನೈತಿಕ ಸಂಬಂಧ ಹೊಂದಿದ್ದಳು. ಅಕ್ಕನಿಗೆ ಅನೈತಿಕ ಸಂಬಂಧ ಬಿಟ್ಟುಬಿಡುವಂತೆ ಎಷ್ಟೇ ಹೇಳಿದರೂ ಕೇಳದೇ ಆತನೊಂದಿಗೆ ಖಾಸಗಿ ಕ್ಷಣದಲ್ಲಿದ್ದಾಗ ಮನೆಗೆ ನುಗ್ಗಿದ ತಮ್ಮ ಅನೈತಿಕ ಸಂಬಂಧ ಹೊಂದಿದ ವ್ಯಕ್ತಿಯನ್ನು ಕೊಚ್ಚಿ ಕೊಲೆ ಮಾಡಿದ್ದಾನೆ. ಅಕ್ಕನಿಗೂ ಗಲ್ಲೆ ಮಾಡಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಘಟನೆ ಬೆಂಗಳೂರಿನ ಹೊರವಲಯ ಕಾಡುಗೋಡಿಯ ಬೆಳ್ತೂರ್ ಕಾಲೋನಿಯಲ್ಲಿ ಗುರುವಾರ ಸಂಜೆ ವೇಳೆ ನಡೆದಿದೆ. ಅಕ್ಕನ ಅನೈತಿಕ ಸಂಬಂಧಕ್ಕೆ ಬೇಸತ್ತು ಅಕ್ಕನ ಪ್ರಿಯಕರನನ್ನು ತಮ್ಮನೇ ಕೊಲೆ ಮಾಡಿದ್ದಾನೆ. ಅಕ್ಕನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ದೂರದ ಸಂಬಂಧಿಕ ಕಿಶೋರ್ ಕೊಲೆಯಾದ ವ್ಯಕ್ತಿ ಆಗಿದ್ದಾನೆ. ಈತ ನಟ ದರ್ಶನ್ ತೂಗುದೀಪ ಅಭಿಮಾನಿ ಆಗಿದ್ದನು. ಮದುವೆ ಮುಂಚಿನಿಂದಲೇ ದೂರದ ಸಂಬಂಧಿಕನಾಗಿದ್ದ ಕಿಶೋರ್ ಮಹಿಳೆ ಅರುಂಧತಿಯೊಂದಿಗೆ ಸಂಬಂಧದಲ್ಲಿ ಇದ್ದನು. ಆದರೆ, ಆತನಿಗೆ ಮದುವೆ ಮಾಡಿಕೊಡದೇ ಉತ್ತಮ ಕುಟುಂಬವನ್ನು ನೋಡಿ ಬೇರೆ ಕಡೆಗೆ ಮದುವೆ ಮಾಡಿಕೊಡಲಾಗಿತ್ತು. 

ಯಲ್ಲಪ್ಪ ಹಾಗೂ ಅರುಂಧತಿ ಇಬ್ಬರೂ ಮದುವೆಯಾಗಿ ಸುಖ ಸಂಸಾರ ಮಾಡಲಿಲ್ಲ. ಕಾರಣ ಅರುಂಧತಿಯನ್ನು ಯಲ್ಲಪ್ಪನಿಗೆ ಮದುವೆ ಮಾಡಿಕೊಟ್ಟರೂ ತಮ್ಮ ಹಳೆಯ ಸಂಬಂಧವನ್ನು ಮಾತ್ರ ಬಿಟ್ಟಿರಲಿಲ್ಲ. ಈ ಬಗ್ಗೆ ಸ್ವತಃ ಆಕೆಯ ಗಂಡ ಕೂಡ ಅಕ್ರಮ ಸಂಬಂಧವನ್ನು ನಿಲ್ಲಿಸುವಂತೆ ಬುದ್ಧಿ ಹೇಳಿದ್ದಾರೆ. ಆಗಲೂ ಕೇಳಿದಿದ್ದಾಗ ಅರುಂಧತಿಯ ತಮ್ಮ ವೆಂಕಟರಮಣಿಗೆ ನೀನೇ ನಿಮ್ಮಕ್ಕನಿಗೆ ಬುದ್ಧಿ ಹೇಳುವಂತೆ ತಿಳಿಸಿದ್ದಾನೆ. ಆಗ ತಮ್ಮನೇ ಬಂದು ನೀನು ಆ.. ಕಿಶೋರ್ ಜೊತೆಗಿನ ಸಂಬಂಧ ಬಿಟ್ಟು, ಗಂಡನೊಂದಿಗೆ ಸಂಸಾರ ಮಾಡಿಕೊಂಡಿರವಂತೆ ಬುದ್ಧಿ ಹೇಳಿದ್ದಾನೆ. ಜೊತೆಗೆ, ಕಿಶೋರನಿಗೂ ಅಕ್ಕನ ಸಹವಾಸ ಬಿಡುವಂತೆ ಎಚ್ಚರಿಕೆಯನ್ನೂ ರವಾನಿಸಿದ್ದಾರೆ.

ಇದನ್ನೂ ಓದಿ: ಸಿಎಂ, ಸರ್ಕಾರಿ ಅಧಿಕಾರಿಗಳ ಸಹಿ ನಕಲು ಮಾಡಿ ನಕಲಿ ನೇಮಕಾತಿ ಆದೇಶ ಸೃಷ್ಟಿಸಿದ ಭೂಪ! ಏನಿದು ಪ್ರಕರಣ?

ಮನೆಯವರು ಯಾರು ಏನೇ ಹೇಳಿದರೂ ಅರುಂಧತಿ ಮತ್ತು ಕಿಶೋರ್ ಯಾರ ಮಾತನ್ನೂ ಕೇಳದೇ ಅನೈತಿಕ ಸಂಬಂಧ ಮುಂದುವರೆಸಿದ್ದರು. ಅರುಂಧತಿಯ ಗಂಡನಿಗೆ ಸೇರಿದ ಹಳೆಯ ಮನೆಯೊಂದಲ್ಲಿ ಇವರಿಬ್ಬರೂ ಆಗಿಂದಾಗ್ಗೆ ಬಂದು ಸೇರುತ್ತಿದ್ದರು. ಈ ಪಾಳು ಬಿದ್ದ ಮನೆಯನ್ನೇ ಅನೈತಿಕ ಸಂಬಂಧದ ಅಡ್ಡೆಯಾಗಿ ಮಾಡಿಕೊಂಡಿದ್ದರು. ಪ್ರತಿಬಾರಿಯೂ ಅಲ್ಲಿ ಬಂದು ಇಬ್ಬರೂ ಸೇರುತ್ತಿದ್ದರು. ಅದೇ ರೀತಿ ಗುರುವಾರ ಮಧ್ಯಾಹ್ನವೂ ಕೂಡ ಇಬ್ಬರೂ ಪಾಳು ಮನೆಗೆ ಹೋಗಿ ಖಾಸಗಿ ಕ್ಷಣಗಳಲ್ಲಿ ಕಾಲ ಕಳೆಯುತ್ತಿರುವಾಗ ಆಕೆಯ ತಮ್ಮ ವೆಂಕಟರಮಣ ಮತ್ತು ಆತನ ಸಂಗಡಿಗರು ಮಾರಕಾಸ್ತ್ರಗಳನ್ನು ಹಿಡಿದು ಒಳಗೆ ನುಗ್ಗಿದ್ದಾರೆ. ಅಲ್ಲಿ ಖಾಸಗಿ ಕ್ಷಣಗಳಲ್ಲಿ ಮೈಮರೆತಿದ್ದ ಜೋಡಿಯ ಮೇಲೆ ಮಚ್ಚು ಬೀಸಿದ್ದಾನೆ.

ಇದನ್ನೂ ಓದಿ: ಡೈರೆಕ್ಟರ್ ಗುರುಪ್ರಸಾದ್ ಕೊನೆಯ ಆಡಿಯೋ ಬಗ್ಗೆ 2ನೇ ಹೆಂಡತಿ ಸುಮಿತ್ರಾ ಸ್ಪಷ್ಟನೆ; ನೀಚ ಮಾವನಿಂದ ಕೃತ್ಯ!

ಕಿಶೋರನಿಗೆ ಮಾರಕಾಸ್ತ್ರಗಳಿಂದ ಹೊಡೆದಿದ್ದರಿಂದ ಆತ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾನೆ. ಈ ವೇಳೆ, ಅರುಂಧತಿಗೂ ಹಲ್ಲೆ ಮಾಡಿದ್ದಾರೆ. ಗಾಯಗೊಂಡ ಅರುಂಧತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನು ಸ್ಥಳಕ್ಕೆ ಬಂದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.