ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ರೌಡಿಶೀಟರ್ ಕೊಲೆ, 5 ಆರೋಪಿಗಳು ಅರೆಸ್ಟ್, ಹತ್ಯೆಯ ಮಾಸ್ಟರ್ ಮೈಂಡ್‌ಗೆ ಶೋಧ
ಇತ್ತೀಚೆಗೆ ನಡೆದಿದ್ದ ರೌಡಿ ಕಪಿಲ್(35) ಕೊಲೆ ಪ್ರಕರಣ ಸಂಬಂಧ ಡಿ.ಜೆ.ಹಳ್ಳಿ ಠಾಣೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಮಾಸ್ಟರ್ ಮೈಂಡ್ ಸೆರೆಗೆ ಪೊಲೀಸರ ಶೋಧ ನಡೆಸುತ್ತಿದ್ದು, ಇನ್ನೂ ನಾಲ್ವರ ಬಂಧನವಾಗಬೇಕಿದೆ.
ಬೆಂಗಳೂರು (ಜು.16): ಇತ್ತೀಚೆಗೆ ನಡೆದಿದ್ದ ರೌಡಿ ಕಪಿಲ್(35) ಕೊಲೆ ಪ್ರಕರಣ ಸಂಬಂಧ ಡಿ.ಜೆ.ಹಳ್ಳಿ ಠಾಣೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಮನೋರಾಯನಪಾಳ್ಯದ ನವೀನ್ ಕುಮಾರ್, ಪವನ್ ಕುಮಾರ್, ಮಂಜುನಾಥ ಲೇಔಟ್‌ನ ರಾಹುಲ್, ಶಾಂಪುರದ ಪುನೀತ್ ಕುಮಾರ್ ಹಾಗೂ ಆರ್.ಟಿ.ನಗರದ ಶಂಕರ್ ಬಂಧಿತರು.
ಆರೋಪಿಗಳು ಜು.11ರಂದು ರಾತ್ರಿ 8 ಗಂಟೆ ಸುಮಾರಿಗೆ ಡಿ.ಜೆ.ಹಳ್ಳಿಯ ಕೆಎಚ್‌ಬಿ ಮುಖ್ಯರಸ್ತೆಯಲ್ಲಿ ರೌಡಿ ಕಪಿಲ್‌ನನ್ನು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಹಲ್ಲೆಗೈದು ಕೊಲೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಬೆಂಗಳೂರು ಹಾಗೂ ತಮಿಳುನಾಡಿನಲ್ಲಿ ಕಾರ್ಯಾಚರಣೆ ನಡೆಸಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣದ ಮಾಸ್ಟರ್ ಮೈಂಡ್ ಸೇರಿ ಇನ್ನೂ ನಾಲ್ವರು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿ ರಿಜಿಸ್ಟರ್ ಕಾರಿನಿಂದ ಬೆಂಗಳೂರಲ್ಲಿ ವ್ಯಕ್ತಿಯ ಅಪಹರಣ, ಮೊಬೈಲ್‌ನಲ್ಲಿ ಸೆರೆ!
ರಸ್ತೆಯಲ್ಲಿ ಅವಮಾನಿಸಿದ್ದ: ರೌಡಿ ಕಪಿಲ್ ಕೊಲೆಗೆ ವೈಯಕ್ತಿಕ ದ್ವೇಷದ ಜತೆಗೆ ನಾನಾ ಕಾರಣಗಳಿವೆ. ಆರೋಪಿಗಳು ಒಳಸಂಚು ನಡೆಸಿ ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಕಪಿಲ್ ಕೊಲೆಗೆ ವ್ಯಕ್ತಿ ಯೊಬ್ಬ ಸುಪಾರಿ ನೀಡಿರುವುದು ತನಿಖೆಯಿಂದ ತಿಳಿದು ಬಂದಿದೆ. ಕೊಲೆಯಾದ ಕಪಿಲ್ ಈ ಹಿಂದೆ ಆರೋಪಿಗಳಾದ ನವೀನ್ ಮತ್ತು ರಾಹುಲ್‌ನನ್ನು ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲಿ ಹಲ್ಲೆ ನಡೆಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಅವಮಾನಿಸಿದ್ದ ಎನ್ನಲಾಗಿದೆ. ಹೀಗಾಗಿ ನವೀನ್ ಮತ್ತು ರಾಹುಲ್ ಪ್ರತೀಕಾರ ತೀರಿಸಿಕೊಳ್ಳಲು ಕಾದಿದ್ದರು. ಈ ನಡುವೆ ಕಪಿಲ್, ಆರೋಪಿಗಳಾದ ಶಂಕರ್ ಮತ್ತು ಪವನ್ ಜತೆಗೂ ಕಿರಿಕ್ ಮಾಡಿಕೊಂಡು ದ್ವೇಷ ಕಟ್ಟಿಕೊಂಡಿದ್ದ. ಹೀಗಾಗಿ ಆರೋಪಿಗಳು ಕಪಿಲ್‌ಗೆ ಬುದ್ಧಿ ಕಲಿಸಲು ಸಮಯಕ್ಕಾಗಿ ಕಾದುಕುಳಿತ್ತಿದ್ದರು. ಅದರಂತೆ ಸಂಚು ರೂಪಿಸಿ ಕಪಿಲ್‌ನನ್ನು ಕೊಲೆ ಮಾಡಿದ್ದರು.
Bengaluru: ರಾಜಧಾನಿಯಲ್ಲಿ ಬಿಗ್ಗೆಸ್ಟ್ ದರೋಡೆ, ಬೈಕ್‌ನಲ್ಲಿ ಸಾಗಿಸುತ್ತಿದ್ದ ಕೆಜಿ ಗಟ್ಟಲೆ ಚಿನ್ನ
ಹಿಡಿತ ಸಾಧಿಸಲು ಯತ್ನ: ಕೊಲೆಯಾದ ರೌಡಿ ಕಪಿಲ್ ವಿರುದ್ಧ ಈ ಹಿಂದೆ ಕೊಲೆ, ಕೊಲೆ ಯತ್ನ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಐದಕ್ಕೂ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿವೆ. 2014ರಲ್ಲಿ ನಡೆದ ರೌಡಿ ನಕರ ಬಾಬು ಕೊಲೆ ಪ್ರಕರಣದಲ್ಲಿ ಕಪಿಲ್‌ನನ್ನು ಮಡಿವಾಳ ಠಾಣೆ ಪೊಲೀಸರು ಕೋಕಾ ಕಾಯ್ದೆಯಡಿ ಬಂಧಿಸಿ ಜೈಲಿಗಟ್ಟಿದ್ದರು. ಬಳಿಕ ಜಾಮೀನು ಪಡೆದು ಹೊರಬಂದಿದ್ದ ಕಪಿಲ್ ಆರ್.ಟಿ.ನಗರದಲ್ಲಿ ನೆಲೆಸಿದ್ದ. ಆರ್.ಟಿ.ನಗರ, ಹೆಬ್ಬಾಳ, ಗೋವಿಂದಪುರ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದ್ದ. ಈ ಸಮಯದಲ್ಲೇ ಆರೋಪಿಗಳೊಂದಿಗೆ ದ್ವೇಷ ಕಟ್ಟಿಕೊಂಡಿದ್ದ. ಕೊನೆಗೆ ವಿರೋಧಿಗಳ ಸಂಚಿನಿಂದ ಕೊಲೆಯಾಗಿರುವುದು ತನಿಖೆಯಿಂದ ತಿಳಿದು ಬಂದಿದೆ.
5 ಲಕ್ಷ ರು.ಗೆ ಸುಪಾರಿ?: ಕಪಿಲ್ ಕೊಲೆ ಪ್ರಕರಣದ ಮಾಸ್ಟರ್ ಮೈಂಡ್ ತಲೆಮರೆಸಿಕೊಂಡಿದ್ದಾನೆ. ಆರೋಪಿಗಳಿಗೆ ಕಪಿಲ್ ಜತೆಗೆ ದ್ವೇಷ ಇರುವ ವಿಚಾರ ತಿಳಿದುಕೊಂಡಿದ್ದ ಆ ವ್ಯಕ್ತಿ, ಆರೋಪಿಗಳನ್ನು ಬಳಸಿಕೊಂಡು ಕಪಿಲ್ ಕೊಲೆಗೆ ಸ್ಕೆಚ್ ಹಾಕಿದ್ದ. ಇದಕ್ಕಾಗಿ ಆರೋಪಿಗಳಿಗೆ 5 ಲಕ್ಷ ರು. ಸುಪಾರಿ ನೀಡಿದ್ದ ಎನ್ನಲಾಗಿದೆ. ಅಂತೆಯೆ ಜೈಲಿನ ಖರ್ಚುಗಳನ್ನೂ ತಾನೇ ಭರಿಸುವುದಾಗಿ ಆ ವ್ಯಕ್ತಿ ಆರೋಪಿಗಳಿಗೆ ಭರವಸೆ ನೀಡಿದ್ದ. ಅದರಂತೆ ಆರೋಪಿಗಳು ಕೆಲ ದಿನ ಕಪಿಲ್‌ನ ಚಲನವಲನ ನಿಗಾವಹಿಸಿ ಜು.11ರಂದು ರಾತ್ರಿ ನಡು ರಸ್ತೆಯಲ್ಲಿ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದರು. ಪೊಲೀಸರ ತನಿಖೆಯಲ್ಲಿ ರೌಡಿ ಕಪಿಲ್ ಕೊಲೆಗೆ ನಾನಾ ಕಾರಣಗಳು ಕೇಳಿ ಬರುತ್ತಿವೆ. ಹೀಗಾಗಿ ಎಲ್ಲಾ ಆಯಾ ಮಗಳಲ್ಲೂ ತನಿಖೆ ನಡೆಯುತ್ತಿದೆ.