ಬೆಂಗಳೂರಿನಲ್ಲಿ ರೈಲಿನಲ್ಲಿ ಬಂದು ಬೈಕ್ ಕದಿಯುತ್ತಿದ್ದ ಕಳ್ಳನನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 30 ಲಕ್ಷ ಮೌಲ್ಯದ 40 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆಂಧ್ರಪ್ರದೇಶದಿಂದ ಬಂದು ಕಳ್ಳತನ ಮಾಡುತ್ತಿದ್ದ.

ಬೆಂಗಳೂರು (ಜುಲೈ.9): ರೈಲಿನಲ್ಲಿ ನಗರಕ್ಕೆ ಬಂದು ಬೈಕ್ ಕದ್ದು ಪರಾರಿಯಾಗುತ್ತಿದ್ದ ಕಿಡಿಗೇಡಿಯೊಬ್ಬನನ್ನು ಯಲಹಂಕ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.

ಆಂಧ್ರಪ್ರದೇಶದ ಕದ್ರಿ ನಿವಾಸಿ ರವಿ ಕುಮಾರ್ ನಾಯಕ್ ಬಂಧಿತನಾಗಿದ್ದು, ಆರೋಪಿಯಿಂದ 30 ಲಕ್ಷ ರು. ಮೌಲ್ಯದ 40 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಬಾಗಲೂರು ಕ್ರಾಸ್ ಬಳಿ ಬೈಕ್ ಕದ್ದು ತೆರಳುವಾಗ ಶಂಕೆ ಮೇರೆಗೆ ನಾಯಕ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ಕೃತ್ಯಗಳು ಬಯಲಾಗಿವೆ.

ವೃತ್ತಿಪರ ಕ್ರಿಮಿನಲ್ ಆಗಿರುವ ರವಿಕುಮಾರ್‌ ನಾಯಕ್‌ ವಿರುದ್ಧ ಆಂಧ್ರಪ್ರದೇಶ ಹಾಗೂ ಬೆಂಗಳೂರಿನಲ್ಲಿ ಪ್ರಕರಣಗಳು ದಾಖಲಾಗಿವೆ. ಮೊದಲು ಆಂಧ್ರಪ್ರದೇಶದಲ್ಲಿ ಶ್ರೀಗಂಧ ಕಳ್ಳತನಕ್ಕೆ ಆತ ಕುಖ್ಯಾತನಾಗಿದ್ದ. ಎರಡು ವರ್ಷಗಳಿಂದ ಶ್ರೀಗಂಧ ಬಿಟ್ಟು ಬೈಕ್ ಕಳ್ಳತನಕ್ಕಿಳಿದಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Doorbell Thief Arrested: ಬೆಲ್ ಮಾಡ್ತಿದ್ದ, ಬಾಗಿಲು ತೆರೆಯದ ಮನೆಗಳನ್ನ ಲೂಟಿ ಮಾಡ್ತಿದ್ದ!, ಖತರ್ನಾಕ್ ಖದೀಮ ಸಿಕ್ಕಿಬಿದ್ದಿದ್ದು ಹೇಗೆ?

ತನ್ನೂರು ಕದ್ರಿಯಿಂದ ರೈಲಿನಲ್ಲಿ ನಗರಕ್ಕೆ ಬಂದಿಳಿಯುತ್ತಿದ್ದ ನಾಯಕ್‌ ಸಾರ್ವಜನಿಕ ಸ್ಥಳಗಳಲ್ಲಿ ನಿಂತಿರುವ ಬೈಕ್‌ ಕದ್ದು ಅದೇ ದಿನ ತನ್ನೂರಿಗೆ ಮರಳುತ್ತಿದ್ದ. ಅದೇ ರೀತಿ ಯಲಹಂಕ, ಕೊಡಿಗೇಹಳ್ಳಿ, ಆವಲಹಳ್ಳಿ, ಚಿಕ್ಕಬಳ್ಳಾಪುರ ಹಾಗೂ ಹೊಸಕೋಟೆ ಸೇರಿದಂತೆ ವಿವಿಧ ಠಾಣೆಗಳಲ್ಲಿ 40ಕ್ಕೂ ಹೆಚ್ಚಿನ ಬೈಕ್‌ಗಳನ್ನು ಆರೋಪಿ ಕಳವು ಮಾಡಿದ್ದ. ಕದ್ದ ಬೈಕ್‌ಗಳನ್ನು ಆಂಧ್ರಪ್ರದೇಶದಲ್ಲಿ ಕಡಿಮೆ ಬೆಲೆಗೆ ಆತ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.