ಬೆಂಗಳೂರಿನ ಮೈಕೋ ಲೇಔಟ್‌ನಲ್ಲಿ ಖಾಸಗಿ ಪಿಜಿ ಮಾಲೀಕ ರವಿತೇಜರೆಡ್ಡಿ ಯುವತಿಯೊಬ್ಬಳ ಮೇಲೆ ಬಲತ್ಕಾರ, ದೌರ್ಜನ್ಯ ಎಸಗಿದ್ದಾನೆ. ಉಂಗುರ ಕಳೆದುಹೋಗಿರುವ ಬಗ್ಗೆ ವಿಚಾರಿಸುವ ನೆಪದಲ್ಲಿ ಯುವತಿಯನ್ನು ಕೊಠಡಿಗೆ ಕರೆದು ಈ ಕೃತ್ಯ ಎಸಗಿದ್ದಾನೆ.
ಬೆಂಗಳೂರು (ಜೂ.24): ಖಾಸಗಿ ಪಿಜಿ ಮಾಲೀಕನೋರ್ವ ಯುವತಿಯೊಬ್ಬಳಿಗೆ ಬಲತ್ಕಾರ ದೌರ್ಜನ್ಯ ಎಸಗಿದ ಆಘಾತಕಾರಿ ಘಟನೆ ಬೆಂಗಳೂರಿನ ಮೈಕೋ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರವಿತೇಜರೆಡ್ಡಿ ಬಂಧಿತ ಆರೋಪಿ. ಕಳೆದ ಜೂನ್ 21ರ ಶನಿವಾರ ನಡೆದ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಘಟನೆ ವಿವರ: ಪಿಜಿಯಲ್ಲಿ ವಾಸವಿದ್ದ ಸಂತ್ರಸ್ತ ಯುವತಿ. ಕಳೆದ ಜೂನ್ 21ರ ಶನಿವಾರದಂದು ಪಿಜಿಯಲ್ಲಿ ಬೆಲೆಬಾಳುವ ಉಂಗುರ ಕಳೆದುಕೊಂಡಿದ್ದಾಳೆ. ಈ ಬಗ್ಗೆ ಪಿಜಿ ಮಾಲೀಕನಿಗೂ ವಿಷಯ ತಿಳಿಸಿದ್ದಾಳೆ. ಆದರೆ ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ರವಿತೇಜರೆಡ್ಡಿ ಯುವತಿಯರನ್ನು ವೈಯಕ್ತಿಕವಾಗಿ ಕೊಠಡಿಗೆ ಕರೆದು ವಿಚಾರಣೆ ನಡೆಸುತ್ತಿದ್ದ ಎನ್ನಲಾಗಿದೆ. ಈ ವೇಳೆ ಸಂತ್ರಸ್ತ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದು, ಆಕೆಯ ಪ್ರತಿರೋಧದ ಹೊರತಾಗಿಯೂ ದೌರ್ಜನ್ಯವೆಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನೆಯಿಂದ ಆಘಾತಕ್ಕೊಳಗಾದ ಸಂತ್ರಸ್ತ ಯುವತಿ:
ಪಿಜಿ ಮಾಲೀಕನ ದುಷ್ಟ ವರ್ತನೆಯಿಂದ ಭಯಗೊಂಡಿದ್ದ ಸಂತ್ರಸ್ತ ಯುವತಿ, ನಿನ್ನೆ ಖಾಸಗಿ ಆಸ್ಪತ್ರೆಯಲ್ಲಿ ವೈದಿಕೀಯ ಪರೀಕ್ಷೆಗೆ ಒಳಗಾಗಿ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
