ಬೆಂಗಳೂರಿನಲ್ಲಿ 58 ವರ್ಷದ ಮಹಿಳೆಯೊಬ್ಬರು ಆನ್‌ಲೈನ್ ವಂಚನೆಗೆ ಬಲಿಯಾಗಿ 2 ಲಕ್ಷ ರೂ. ಕಳೆದುಕೊಂಡಿದ್ದಾರೆ. ಬ್ಯಾಂಕ್‌ನಿಂದ ಬಂದಂತೆ ಕಂಡುಬಂದ ಕರೆಗೆ ಉತ್ತರಿಸಿ, ಸೂಚನೆಗಳನ್ನು ಪಾಲಿಸಿದ್ದರಿಂದ ವಂಚನೆಗೆ ಒಳಗಾಗಿದ್ದಾರೆ.
ಬೆಂಗಳೂರು (ಜ.31): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆನ್‌ಲೈನ್ ವಂಚನೆ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದ್ದು 58 ವರ್ಷದ ಹಿರಿಯ ಮಹಿಳೆಯೊಬ್ಬರಿಗೆ ಬಂದ ಅಪರಿಚಿತ ಫೋನ್ ಕರೆಯೊಂದನ್ನ ರಿಸೀವ್ ಮಾಡಿ 2 ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ನಡೆದಿದೆ.
ಇದೇ ಜನೆವರಿ 20ರಂದು ಮಹಿಳೆಯ ಮೊಬೈಲ್‌ಗೆ ಸ್ವಯಂಚಾಲಿತ ಕರೆ ಬಂದಿದೆ. ಫೋನ್ ರಿಸೀವ್ ಮಾಡಿದಾಗ ಇದು ರಾಷ್ಟ್ರಿಕೃತ ಬ್ಯಾಂಕ್‌ನ ಇಂಟರಾಕ್ಟಿವ್ ವಾಯ್ಸ್ ರೆಸ್ಪಾನ್ಸ್(IVR) ಸಿಸ್ಟಮ್ ಕಾಣಿಸಿಕೊಂಡಿದೆ. ವಿಚಿತ್ರವೆಂದರೆ ಕಾಲರ್ ಐಡಿ ನೋಡಿದಾಗ SBI ಎಂದು ತೋರಿಸಿದೆ. ಅದು ಆ ಮಹಿಳೆ ಖಾತೆ ಹೊಂದಿರುವ ಬ್ಯಾಂಕ್ ಆಗಿದೆ.
ವಂಚನೆ ಹೇಗಾಯ್ತು?
ಮೊದಲಿಗೆ ಮಹಿಳೆಗೆ ರೆಕಾರ್ಡ್ ಮಾಡಿದ ಕರೆ ಬಂದಿದೆ. ಅದರಲ್ಲಿ ಮಹಿಳೆಯ ಖಾತೆಯಿಂದ ಬೇರೆ ಖಾತೆಗೆ 2 ಲಕ್ಷ ರೂ. ಟ್ರಾನ್ಸ್‌ಫರ್ ಆಗಿದೆ ಎಂದು ಹೇಳಿದೆ. ಇದರಿಂದ ಗಾಬರಿಗೊಂಡ ಮಹಿಳೆ. ಯಾವುದೇ ವ್ಯವಹಾರ ಮಾಡದಿದ್ದರೂ ಹೇಗೆ ವರ್ಗಾವಣೆ ಆಯ್ತು ಅನ್ನೋ ಆತಂಕದಲ್ಲಿದ್ದ ಮಹಿಳೆ. ಈ ವೇಳೆ ವಹಿವಾಟು ನಡೆಸಿದ್ದರೆ 3 ಅನ್ನು ಒತ್ತುವಂತೆ, ಒಂದು ಯಾವುದೇ ವಹಿವಾಟು ನಡೆಸಿರದಿದ್ದರೆ 1 ಅನ್ನು ಒತ್ತುವಂತೆ ಸೂಚಿಸಲಾಗಿದೆ. ಕಾಲರ್ ಐಡಿಯಲ್ಲಿ ಎಸ್‌ಬಿಐ ತೋರಿಸಿದ್ದರಿಂದ ಇದು ಬ್ಯಾಂಕ್‌ನಿಂದಲೇ ಬಂದಿರುವ ಕರೆಯಾಗಿದೆ ಎಂದು ನಂಬಿರುವ ಮಹಿಳೆ. ಅವರು ಹೇಳಿದಂತೆ 1 ಅನ್ನು ಒತ್ತಿದ್ದಾರೆ.
ಇದನ್ನೂ ಓದಿ: ಏನಿದು ಹೊಸ ಜಂಪ್ ಡೆಪಾಸಿಟ್ ವಂಚನೆ, ಶುರುವಾಗಿದೆ ಯುಪಿಐ ಪೇಮೆಂಟ್ ಸ್ಕ್ಯಾಮ್
ಇದಕ್ಕೂ ಮೊದಲು ಸಂತ್ರಸ್ತ ಮಹಿಳೆಗೆ ಹಲವಾರು ಬಾರಿ ಕರೆ ಮಾಡಿದ್ದಾರೆ. ಆದರೆ ಆ ಮಹಿಳೆ ಗೊಂದಲದಿಂದ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಪದೇಪದೆ ಕರೆಗಳು ಬಂದಿದ್ದರಿಂದ ಕೊನೆಯದಾಗಿ ಕಾಲ್ ರಿಸೀವ್ ಮಾಡಿ, ನಾನು ಯಾವುದೇ ವಹಿವಾಟು ನಡೆಸಿಲ್ಲ ಎಂದು 1 ಅನ್ನು ಒತ್ತಿದ್ದಾರೆ. 1 ಒತ್ತುತ್ತಿದ್ದಂತೆ ಮಹಿಳೆಯ ಮೊಬೈಲ್‌ಗೆ 'ದಯವಿಟ್ಟು ತಕ್ಷಣ ಬ್ಯಾಂಕ್‌ಗೆ ಹೋಗಿ, ವ್ಯವಸ್ಥಾಪಕರನ್ನು ಸಂಪರ್ಕಿಸಿ' ಎಂಬ ಮೆಸೇಜ್ ಬಂದಿದೆ.
ವಂಚಕರ ಕರೆ ಕಡಿತಗೊಂಡ ತಕ್ಷಣ ಮಹಿಳೆ ತನ್ನ ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಆಘಾತಕ್ಕೊಳಗಾಗಿದ್ದಾರೆ. ಮಹಿಳೆಯ ಖಾತೆಯಿಂದ ಬರೋಬ್ಬರಿ 2 ಲಕ್ಷ ರೂಪಾಯಿ ಮಾಯವಾಗಿದೆ. ಮೊಬೈಲ್ ಕರೆಯಲ್ಲಿ ಒಂದನ್ನು ಒತ್ತಿ ಎರಡು ಲಕ್ಷ ರೂಪಾಯಿ ಕ್ಷಣಾರ್ಧದಲ್ಲಿ ಕಳೆದುಕೊಂಡ ಮಹಿಳೆ ಗಾಬರಿಗೊಂಡು ತಕ್ಷಣ ಬ್ಯಾಂಕ್‌ಗೆ ಹೋಗಿದ್ದಾರೆ. ಅಲ್ಲಿಂದ ಸೈಬರ್ ಕ್ರೈಂ ಗೆ ತೆರಳಿ ದೂರು ನೀಡುವಂತೆ ಬ್ಯಾಂಕ್ ಮ್ಯಾನೇಜರ್ ತಿಳಿಸಿದ ನಂತರ ಗಿರಿನಗರ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಸೈಬರ್ ವಂಚಕರ ಹೊಸ ತಂತ್ರ! ಫ್ರೀ ಮೊಬೈಲ್ ಗಿಫ್ಟ್ ಆಸೆ ತೋರಿಸಿ ಎಂಜಿನಿಯರ್‌ಗೆ ₹2 ಕೋಟಿ ಉಂಡೆನಾಮ!
ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದ್ದೇನು?
ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಅಧಿಕಾರಿಗಳ ಪ್ರಕಾರ, ಸೈಬರ್ ಅಪರಾಧಿಗಳು ಈಗ ವಂಚನೆಗಾಗಿ ಹೊಸ ಮತ್ತು ಸುಧಾರಿತ ತಂತ್ರಗಳನ್ನು ಬಳಸುತ್ತಿದ್ದಾರೆ. ಸಾಮಾನ್ಯವಾಗಿ, ಇಂತಹ ವಂಚನೆಗಳಲ್ಲಿ, ವಂಚಕರು ಜನರಿಂದ ಬ್ಯಾಂಕ್ ಖಾತೆ, ಕಾರ್ಡ್ ವಿವರಗಳು ಅಥವಾ ಇತರ ಸೂಕ್ಷ್ಮ ಮಾಹಿತಿಯನ್ನು ಪಡೆಯಲು ಪ್ರಯತ್ನಿಸುತ್ತಾರೆ. ಆದರೆ ಈ ಪ್ರಕರಣದಲ್ಲಿ ತಾನು ಅಂತಹ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ ಎಂದು ಮಹಿಳೆ ಹೇಳಿಕೊಂಡಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಯ ಪ್ರಕಾರ, ಮಹಿಳೆ ತಿಳಿಯದೆ ಕೆಲವು ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿರಬಹುದು ಅಥವಾ ಕಳ್ಳರು ವಂಚನೆಯ ಹೊಸ ಮಾರ್ಗವನ್ನು ಕಂಡುಹಿಡಿದಿರಬಹುದು. ಸದ್ಯ ಪೊಲೀಸರು ಈ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸುತ್ತಿದ್ದಾರೆ ಎಂದಿದ್ದಾರೆ.
