ಯುವತಿಯ ‘ಸಾವಿನ’ ಹೈಡ್ರಾಮಾ, CBI ಹೆಸರಲ್ಲಿ 5.57 ಲಕ್ಷ ಪಂಗನಾಮ!
- ಯುವತಿಯ ‘ಸಾವಿನ’ ಹೈಡ್ರಾಮಾ ಸೃಷ್ಟಿಸಿ ಯುವಕನಿಂದ ಹಣ ಸುಲಿಗೆ
- ಜಾಲತಾಣದಲ್ಲಿ ಪರಿಚಿತವಾಗಿದ್ದ ಯುವತಿ ಅಶ್ಲೀಲ ವಿಡಿಯೋ ಬಳಸಿ ಬ್ಲ್ಯಾಕ್‌ಮೇಲ್
- ಹಣ ಕೊಡದಿದ್ದಾಗ ‘ಯುವತಿ ಸತ್ತಿದ್ದಾಳೆ’ ಎಂದು .5.57 ಲಕ್ಷ ಪೀಕಿದ ದುಷ್ಕರ್ಮಿಗಳು
ಬೆಂಗಳೂರು (ಜು.11): ಸಾಮಾಜಿಕ ಜಾಲತಾಣದಲ್ಲಿ ಪರಿಚಿತಳಾದ ಮಹಿಳೆಯ ಜತೆಗಿನ ಅಶ್ಲೀಲ ವಿಡಿಯೋ ಮುಂದಿಟ್ಟುಕೊಂಡು ‘ಹನಿಟ್ರ್ಯಾಪ್ ಗ್ಯಾಂಗ್’ ವ್ಯಕ್ತಿಯೊಬ್ಬರಿಂದ 5.57 ಲಕ್ಷ ರು. ಸುಲಿಗೆ ಮಾಡಿರುವ ಘಟನೆ ನಡೆದಿದೆ.
ಯಲಚೇನಹಳ್ಳಿಯ ಅಕ್ಷಯನಗರ ನಿವಾಸಿ ಅವಿನಾಶ್ (34) ಹಣ ಕಳೆದುಕೊಂಡವರು. ಈ ಹನಿಟ್ರ್ಯಾಪ್ ಗ್ಯಾಂಗ್ ಕಾಟ ತಾಳಲಾರದೆ ಆಗ್ನೇಯ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ರಾಹುಲ್ ಕುಮಾರ್ ಮತ್ತು ರಿಯಾ ಮಲ್ಹೋತ್ರಾ ಎಂಬುವವರ ವಿರುದ್ಧ ಎಫ್‌ಐಆರ್ ದಾಖಲಿಸಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಬೆಂಗಳೂರಿನಲ್ಲಿ ಬೀದಿ ಬದಿ ವ್ಯಾಪಾರಿಗಳ ಮೇಲೆ ಫುಡ್ ಆಫೀಸರ್ಸ್ ದೌರ್ಜನ್ಯ!
ಕೆಲ ತಿಂಗಳ ಹಿಂದೆ ದೂರುದಾರ ಅವಿನಾಶ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ರಿಯಾ ಮಲ್ಹೋತ್ರಾ ಎಂಬಾಕೆ ಪರಿಚಿತಳಾಗಿದ್ದಾಳೆ. ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆದಿದ್ದು, ಪರಸ್ಪರ ವಿಡಿಯೋ ಕರೆ ಮಾಡಿ ಮಾತನಾಡಿದ್ದಾರೆ. ಈ ವೇಳೆ ಆರೋಪಿ ರಿಯಾ ಮಲ್ಹೋತ್ರಾ, ಅವಿನಾಶ್ ಜತೆಗೆ ಅಶ್ಲೀಲವಾಗಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾಳೆ. ಕೆಲ ದಿನಗಳ ಬಳಿಕ ಆಕೆ ಆ ಅಶ್ಲೀಲ ವಿಡಿಯೋಗಳನ್ನು ಅವಿನಾಶ್‌ಗೆ ಕಳುಹಿಸಿ ಹಣ ನೀಡುವಂತೆ ಕೇಳಿದ್ದಾಳೆ. ಹಣ ನೀಡದಿದ್ದರೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಸಿದ್ದಾಳೆ. ಆದರೆ ಅವಿನಾಶ್, ಆರಂಭದಲ್ಲಿ ಹಣ ಕೊಡಲು ನಿರಾಕರಿಸಿದ್ದಾರೆ.
ಸಾವಿನ ಡ್ರಾಮಾ: ಕೆಲ ದಿನಗಳ ಬಳಿಕ ರಾಹುಲ್ ಕುಮಾರ್ ಎಂಬಾತ ಅವಿನಾಶ್‌ಗೆ ಕರೆ ಮಾಡಿ, ‘ನಾನು ಸಿಬಿಐ ಇಲಾಖೆಯ ಕ್ರೈಂ ಬ್ರ್ಯಾಂಚ್‌ನಿಂದ ಮಾತನಾಡುತ್ತಿದ್ದು, ನಿಮ್ಮೊಂದಿಗೆ ಸಂಬಂಧ ಇರಿಸಿಕೊಂಡಿದ್ದ ರಿಯಾ ಮಲ್ಹೋತ್ರಾ ಸಾವನಪ್ಪಿದ್ದಾಳೆ. ಸಾವಿಗೆ ನೀನೇ ಕಾರಣ ಎಂಬುದು ನಮಗೆ ಗೊತ್ತಾಗಿದೆ’ ಎಂದು ನಕಲಿ ಸಿಬಿಐ ಕೇಸ್ ಲಿಸ್ಟ್ ತೋರಿಸಿದ್ದಾನೆ. ಬಳಿಕ ವಿಚಾರಣೆಗೆ ಹಾಜರಾಗುವಂತೆ ಅವಿನಾಶ್‌ಗೆ ಬೆದರಿಸಿದ್ದಾನೆ. ವಿಚಾರಣೆ ಕೈಬಿಡಬೇಕಾದರೆ, ಹಣ ಕೊಡಬೇಕು ಎಂದು ಬೇಡಿಕೆ ಇರಿಸಿದ್ದಾನೆ. ಈತನ ಮಾತು ನಂಬಿದ ಅವಿನಾಶ್, ಹಂತ ಹಂತವಾಗಿ ಆನ್‌ಲೈನ್ ಮುಖಾಂತರ .5.57 ಲಕ್ಷ ವರ್ಗಾವಣೆ ಮಾಡಿದ್ದಾರೆ.
Mysuru: ಸಾಂಸ್ಕೃತಿಕ ನಗರಿಯಲ್ಲಿ ಖತರ್ನಾಕ್ ಮನೆ ಕಳ್ಳಿಯ ಬಂಧನ
ಆದರೂ ದುಷ್ಕರ್ಮಿಗಳು ಮತ್ತಷ್ಟುಹಣ ಕೊಡುವಂತೆ ಅವಿನಾಶ್‌ಗೆ ಕಿರುಕುಳ ನೀಡಿದ್ದಾರೆ. ಇವರ ಕಾಟ ತಾಳಲಾರದೆ ಅವಿನಾಶ್ ಸ್ನೇಹಿತರೊಬ್ಬರಿಗೆ ಹನಿಟ್ರ್ಯಾಪ್ ವಿಚಾರ ತಿಳಿಸಿದ್ದಾರೆ. ಬಳಿಕ ಸ್ನೇಹಿತನ ಸಲಹೆ ಮೇರೆಗೆ ಆಗ್ನೇಯ ವಿಭಾಗದ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.