*ಕೆಲಸಕ್ಕೆ ಸೇರಲು ಹಲವು ಶುಲ್ಕ ನೀಡಬೇಕೆಂದು ನಂಬಿಸಿದ್ದ ವಂಚಕ*ಸಿಇಎನ್‌ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲು*ವಿವಿಧ ಹಂತಗಳಲ್ಲಿ ವಿನೀತ್‌ ಅವರಿಂದ ಬರೋಬ್ಬರಿ ₹4.30 ಲಕ್ಷ ವರ್ಗಾವಣೆ

ಬೆಂಗಳೂರು (ಜ. 14): ಇನ್ಫೋಸಿಸ್ ಕಂಪನಿ (Infosys) ಹೆಸರಿನಲ್ಲಿ ಕರೆ ಮಾಡಿ ಕೆಲಸ ಕೊಡಿಸುವುದಾಗಿ ವ್ಯಕ್ತಿಯಯೊಬ್ಬರನ್ನು ನಂಬಿಸಿ ₹4.32 ಲಕ್ಷ ಪಡೆದು ವಂಚಿಸಲಾಗಿದೆ. ಗೊರಗುಂಟೆ ಪಾಳ್ಯದ ಎಂ.ವಿನಿತ್‌(24) ಎಂಬುವವರು ಸೈಬರ್‌ ಚೋರರಿಂದ (Cyber Crime) ವಂಚನೆಗೆ ಒಳಗಾಗಿದ್ದಾರೆ. ಇವರು ನೀಡಿದ ದೂರಿನ ಮೇರೆಗೆ ಉತ್ತರ ಸಿಇಎನ್‌ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿ ಸೈಬರ್‌ ಕಳ್ಳನ ಪತ್ತೆಗೆ ಬಲೆ ಬೀಸಿದ್ದಾರೆ.

ಇತ್ತೀಚೆಗೆ ವಿನೀತ್‌ ಅವರ ಮೊಬೈಲ್‌ಗೆ ಕರೆ ಮಾಡಿರುವ ಅಪರಿಚಿತ ವ್ಯಕ್ತಿಯೊಬ್ಬ, ತಾನು ಇಸ್ಫೋಸಿಸ್‌ ಕಂಪನಿಯಿಂದ ಮಾತನಾಡುತ್ತಿರುವುದಾಗಿ ಪರಿಚಯಿಸಿಕೊಂಡಿದ್ದಾನೆ. ಕಂಪನಿಯಲ್ಲಿ ಕೆಲಸ ಖಾಲಿ ಇದ್ದು, ನಿಮಗೆ ಕೆಲಸ ನೀಡುವುದಾಗಿ ಹೇಳಿ ನಂಬಿಸಿದ್ದಾನೆ. ಈತನ ಮಾತು ನಂಬಿದ ವಿನೀತ್‌ ಕೆಲಸ ಮಾಡಲು ತಾವು ಸಿದ್ಧರಿರುವುದಾಗಿ ಹೇಳಿದ್ದಾರೆ. ಈ ವೇಳೆ ಅಪರಿಚಿತ ವ್ಯಕ್ತಿಯು ಕೆಲಸ ಸೇರಲು ಕೆಲ ಶುಲ್ಕಗಳನ್ನು (Fee) ಪಾವತಿಸಬೇಕು ಎಂದು ವಿವಿಧ ಹಂತಗಳಲ್ಲಿ ವಿನೀತ್‌ ಅವರಿಂದ ಬರೋಬ್ಬರಿ .4.30 ಲಕ್ಷ ವರ್ಗಾವಣೆ ಮಾಡಿಸಿಕೊಂಡಿದ್ದಾನೆ.

ಇದನ್ನೂ ಓದಿ:Bengaluru: 2 ಕೋಟಿ ಬೆಲೆಯ 171 ದುಬಾರಿ ವಾಚ್‌ ಕದ್ದಿದ್ದವ ಅರೆಸ್ಟ್‌

ಬಳಿಕ ವಿನೀತ್‌ ಕರೆ ಮಾಡಿದಾಗ ಅಪರಿಚಿತ ತನ್ನ ಮೊಬೈಲ್‌ ಸ್ವಿಚ್‌ಆಫ್‌ ಮಾಡಿದ್ದಾನೆ. ಹಲವು ಬಾರಿ ಪ್ರಯತ್ನಿಸಿದರೂ ಸಂಪರ್ಕಕ್ಕೆ ಸಿಕ್ಕಿಲ್ಲ. ಬಳಿಕ ವಿನೀತ್‌ಗೆ ತಾನು ಸೈಬರ್‌ ಖದೀಮರ ಬಲೆಗೆ ಬಿದ್ದಿರುವುದು ಅರಿವಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ವಂಚಕನ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾಡಲಿಂಗ್‌ ಹೆಸರಿನಲ್ಲಿ ಯುವತಿಯರಿಗೆ ವಂಚಿಸಿದ್ದ ವಿದ್ಯಾರ್ಥಿ ಸೆರೆ!

ಇನ್ಸ್‌ಸ್ಟಾಗ್ರಾಂನಲ್ಲಿ (Instagram) ಯುವತಿಯ ಹೆಸರಿನಲ್ಲಿ ನಕಲಿ ಖಾತೆ ತೆರೆದು ತಾನು ಮಾಡೆಲಿಂಗ್‌ಗೆ ಅವಕಾಶ ಕೊಡಿಸುವುದಾಗಿ ಯುವತಿಯರ ಬೋಲ್ಡ್‌ ಲುಕ್‌ನ ಫೋಟೋ ಪಡೆದು ಬಳಿಕ ಅಶ್ಲೀಲವಾಗಿ ಮಾರ್ಫಿಂಗ್‌ ಮಾಡಿ ಹಣಕ್ಕೆ ಬ್ಲ್ಯಾಕ್‌ ಮೇಲ್‌ ಮಾಡುತ್ತಿದ್ದ ಆರೋಪಿಯನ್ನು ಹಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.ಕೊಡಗು ಮೂಲದ ಪ್ರಪಂಚ್‌ ನಾಚಪ್ಪ (Prapanchan Nachappa) (25)) ಬಂಧಿತ. ಆರೋಪಿಯು ನಗರದ ಖಾಸಗಿ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.

ಇನ್‌ಸ್ಟಾಗ್ರಾಂನಲ್ಲಿ ಯುವತಿಯ ಹೆಸರಿನಲ್ಲಿ ನಕಲಿ ಖಾತೆ ತೆರೆದು, ತಾನು ಮಾಡಲ್‌ ಎಂದು ಪರಿಚಯಿಸಿಕೊಂಡಿದ್ದ. ಅಂತೆಯೆ ಮಾಡೆಲಿಂಗ್‌ಗೆ ಯುವತಿಯರು ಬೇಕಾಗಿದ್ದಾರೆ ಎಂದು ಫೋಸ್ಟ್‌ ಹಾಕಿ, ಸಂಪರ್ಕಕ್ಕಾಗಿ ತನ್ನದೇ ಮೊಬೈಲ್‌ ನಂಬರ್‌ ಹಂಚಿಕೊಂಡಿದ್ದ. ಈ ಫೋಸ್ಟ್‌ ನೋಡಿದ್ದ ಮಾಡೆಲಿಂಗ್‌ ಆಸಕ್ತ ಯುವತಿಯರು ಆತನ ಮೊಬೈಲ್‌ ಸಂಖ್ಯೆಗೆ ಸಂಪರ್ಕಿಸಿದ್ದರು.

ಇದನ್ನೂ ಓದಿ:Cheating Case: ದೊಡ್ಡವರೆಲ್ಲ ಗೊತ್ತೆಂದು ಲಕ್ಷ ಲಕ್ಷ ನುಂಗಿದ, ಲಾಕ್ ಡೌನ್ ಈತನ ವಂಚನೆಯ ರಹದಾರಿ!

ಈ ವೇಳೆ ಆರೋಪಿಯು ಮಾಡೆಲಿಂಗ್‌ಗೆ ಪೂರಕವಾಗಿ ಬೋಲ್ಡ್‌ ಆಗಿ ತೆಗೆಸಿರುವ ಫೋಟೋಗಳನ್ನು ವಾಟ್ಸಾಪ್‌ ಮಾಡುವಂತೆ ಕೇಳಿ ಪಡೆಯುತ್ತಿದ್ದ. ಬಳಿಕ ಫೋಟೋಗಳನ್ನು ಮಾರ್ಫಿಂಗ್‌ ಮಾಡಿ ಅಶ್ಲೀಲ ಫೋಟೋಗೆ ಯುವತಿಯರು ಮುಖ ಸೇರಿಸಿ ಆ ಫೋಟೋಗಳನ್ನು ಮತ್ತೆ ಯುವತಿಯರಿಗೆ ಕಳುಹಿಸಿ ಹಣಕ್ಕೆ ಬೇಡಿಕೆ ಇರಿಸುತ್ತಿದ್ದ. ಹಣ ನೀಡಲು ನಿರಾಕರಿಸಿದರೆ, ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋಗಳನ್ನು ಹರಿಬಿಡುವುದಾಗಿ ಬ್ಲ್ಯಾಕ್‌ ಮೇಲ್‌ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ರೂ. 10 ಸಾವಿರದಿಂದ 1 ಲಕ್ಷ ಸುಲಿಗೆ: ಆರೋಪಿಯು ಯುವತಿಯರ ಮಾರ್ಫಿಂಗ್‌ ಫೋಟೋ ಮುಂದಿಟ್ಟುಕೊಂಡು ಬೆದರಿಸಿ 10 ಸಾವಿರ ರು.ನಿಂದ ಒಂದು ಲಕ್ಷ ರು. ವರೆಗೂ ಹಣವನ್ನು ಖಾತೆಗೆ ಹಾಕಿಸಿಕೊಳ್ಳುತ್ತಿದ್ದ. ಸುಮಾರು 20ಕ್ಕೂ ಅಧಿಕ ಯುವತಿಯರು ಆರೋಪಿಯಿಂದ ವಂಚನೆಗೆ ಒಳಗಾಗಿದ್ದಾರೆ. ಆತನ ಬ್ಲ್ಯಾಕ್‌ ಮೇಲ್‌ಗೆ ಹೆದರಿ ಆತ ನೀಡಿದ ಖಾತೆಗೆ ಆನ್‌ಲೈನ್‌ನಲ್ಲಿ ಹಣ ಕಳುಹಿಸಿದ್ದಾರೆ. ಆರೋಪಿಯು ಇನ್ಸ್‌ಸ್ಟಾಗ್ರಾಂನಲ್ಲಿ ಯುವತಿಯ ಹೆಸರಿನಲ್ಲಿ ಆರೋಪಿ ನಕಲಿ ಖಾತೆ ತೆರೆದಿದ್ದರಿಂದ ಯುವತಿಯರು ಪೂರ್ವಪರ ವಿಚಾರಿಸದೆ ಆರೋಪಿಯ ಮೋಸದ ಬಲೆಗೆ ಬಿದ್ದಿದ್ದಾರೆ.