ಬೆಂಗಳೂರು(ಮಾ.24): ಇತ್ತೀಚೆಗೆ ಬಳ್ಳಾರಿ ರಸ್ತೆಯಲ್ಲಿ ನಡೆದಿದ್ದ ಹಿಟ್‌ ಆ್ಯಂಡ್‌ ರನ್‌ ಅಪಘಾತ ಪ್ರಕರಣ ಸಂಬಂಧ ಹೈಗ್ರೌಂಡ್ಸ್‌ ಸಂಚಾರಿ ಠಾಣೆ ಪೊಲೀಸರು, ಘಟನಾ ಸ್ಥಳದಲ್ಲಿ ಸಿಕ್ಕಿದ ‘ಕನ್ನಡಿ’ ಮೂಲಕ ಪಾದಚಾರಿಗೆ ಸಾವಿಗೆ ಕಾರಣವಾಗಿದ್ದ ಕಾರನ್ನು ಪತ್ತೆ ಹಚ್ಚಿದ್ದಾರೆ.

ಯಲಹಂಕ ನಿವಾಸಿ, ಖಾಸಗಿ ಕಂಪನಿ ಉದ್ಯೋಗಿ ಕೃಷ್ಣಮೂರ್ತಿ (39) ಮೃತರು. ಕೃಷ್ಣಮೂರ್ತಿ ಅವರು, ಮಾ.18ರ ರಾತ್ರಿ ಸಹೋದ್ಯೋಗಿಗಳ ಜೊತೆ ಕಾರಿನಲ್ಲಿ ಮರಳುತ್ತಿದ್ದರು. ಲಿ ಮೆರಿಡಿಯನ್‌ ಹೋಟೆಲ್‌ ಎದುರು ರಾತ್ರಿ 11ರ ಸುಮಾರಿಗೆ ಕಾರಿನ ಚಕ್ರ ಪಂಕ್ಚರ್‌ ಆಗಿತ್ತು. ಪಂಕ್ಚರ್‌ ಹಾಕಿಸಿ ಮರಳುತ್ತಿದ್ದರು. ಈ ಹಂತದಲ್ಲಿ ರಸ್ತೆ ದಾಟುತ್ತಿದ್ದಾಗಲೇ ಅವರಿಗೆ ಬೆಂಜ್‌ ಡಿಕ್ಕಿ ಹೊಡೆದಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಕೃಷ್ಣಮೂರ್ತಿ ಮೃತಪಟ್ಟಿದ್ದರು. ಪೊಲೀಸರು, ಸುತ್ತಮುತ್ತಲ ಸಿಸಿಟಿವಿ ಕ್ಯಾಮೆರಾಗಳನ್ನು ವಶಕ್ಕೆ ಪರಿಶೀಲಿಸಿದಾಗ ಕಾರಿನ ಕುರಿತು ಅಸ್ಪಷ್ಟದೃಶ್ಯಗಳು ಲಭಿಸಿವೆ. ಆಗ ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿದಾಗ ಕಾರಿನ ಕನ್ನಡಿ ಸಿಕ್ಕಿತ್ತು. ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಬಿಳಿ ಬಣ್ಣದ ಕಾರು ಎಂಬುದು ತಿಳಿಯಿತು. ನಗರದಲ್ಲಿನ ಬೆಂಜ್‌ ಮಾರಾಟ ಮಳಿಗೆಗಳು ಹಾಗೂ ಸಾರಿಗೆ ಅಧಿಕಾರಿಗಳ ನೆರವು ಪಡೆದು ಕಾರನ್ನು (ಕೆಎ-04, ಎಂಡಬ್ಲ್ಯು5040) ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಬೆಂಜ್‌ ಕಾರು ಉದ್ಯಮಿ ಎಂ.ಎನ್‌.ಶ್ರೀನಿವಾಸ್‌ ಅವರ ಹೆಸರಿನಲ್ಲಿದೆ. ಆದರೆ ಅಪಘಾತ ನಡೆದ ವೇಳೆ ಚಾಲಕ ಕಾರು ಓಡಿಸಿದ್ದು, ನಾನಲ್ಲ ಎಂದು ಮಾಲಿಕರು ಹೇಳುತ್ತಿದ್ದಾರೆ. ಹೀಗಾಗಿ ಈ ಬಗ್ಗೆ ಖಚಿತತೆಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.