ಗಿರಿನಗರ ಇಂಡಿಯನ್ ಬ್ಯಾಂಕ್‌ನಲ್ಲಿ ಸುಮಾರು ನಾಲ್ಕು ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಪ್ರಕರಣದ ತನಿಖೆ ವಿಳಂಬವಾಗಿದ್ದಕ್ಕೆ ಗ್ರಾಹಕರು ಪ್ರತಿಭಟನೆ ನಡೆಸಿದ್ದಾರೆ. ಅಸಿಸ್ಟೆಂಟ್ ಮ್ಯಾನೇಜರ್ ಕಿರಣ್, ಗ್ರಾಹಕರ ಚಿನ್ನವನ್ನು ಕದ್ದು ಆನ್‌ಲೈನ್ ಬೆಟ್ಟಿಂಗ್‌ಗೆ ಬಳಸಿದ್ದ ಭೂಪ.

 ಬೆಂಗಳೂರು (ಏ.24): ಗಿರಿನಗರ ಇಂಡಿಯನ್‌ ಬ್ಯಾಂಕ್‌ನಲ್ಲಿ ಇಟ್ಟಿದ್ದ ಸುಮಾರು ನಾಲ್ಕು ಕೋಟಿ ರು. ಮೌಲ್ಯದ ಚಿನ್ನಾಭರಣ ಕಳವು ಪ್ರಕರಣದ ಸಂಬಂಧ ಚಿನ್ನಾಭರಣ ಕಳೆದುಕೊಂಡಿರುವ ಗ್ರಾಹಕರು ಗುರುವಾರ ಬ್ಯಾಂಕ್‌ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ.

Add Asianetnews Kannada as a Preferred SourcegooglePreferred

ಗಿರಿನಗರದ ಇಂಡಿಯನ್ ಬ್ಯಾಂಕ್ ಅಸಿಸ್ಟೆಂಟ್ ಮ್ಯಾನೇಜರ್ ಕಿರಣ್ ವಿರುದ್ಧ ಪ್ರಕರಣ ದಾಖಲಾಗಿ ಮೂರು ತಿಂಗಳಾದರೂ ಪೊಲೀಸರು ಯಾವುದೇ ಕ್ರಮ ಜರುಗಿಸಿಲ್ಲ. ತನಿಖೆ ಸರಿಯಾಗಿ ನಡೆಸುತ್ತಿಲ್ಲ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜತೆಗೆ ಚಿನ್ನಾಭರಣ ಕಳವು ಪ್ರಕರಣದಲ್ಲಿ ಕಿರಣ್ ಬಂಧನವಾಗಿತ್ತಾದರೂ ಪೊಲೀಸರು ಆತನ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಬಂಧನವಾದ ಮೂರೇ ದಿನಕ್ಕೆ ಜಾಮೀನು ಪಡೆದು ಹೊರಬಂದಿದ್ದಾನೆ ಎಂದು ಆರೋಪಿಸಿದ್ದಾರೆ.

ಕಾನೂನಿನ ತೊಡಕು: ಸ್ಪಷ್ಟನೆ

ಆರೋಪಿ ಕಿರಣ್‌ ಕದ್ದ ಚಿನ್ನವನ್ನು ಮುತ್ತೂಟ್‌ ಫೈನಾನ್ಸ್‌ ಕಂಪನಿಯಲ್ಲಿ ಅಡವಿಟ್ಟು ಹಣ ಪಡೆದಿದ್ದಾನೆ. ಅದನ್ನು ರಿಕವರಿ ಮಾಡಲು ಮುಂದಾಗಿದ್ದೇವೆ. ಆದರೆ ಆ ಕಂಪನಿಯವರು ಕೋರ್ಟ್‌ ಮೆಟ್ಟಿಲೇರಿದ್ದಾರೆ. ಇದರಿಂದಾಗಿ ಕಾನೂನಿನ ತೊಡಕು ಉಂಟಾಗಿದ್ದು, ತನಿಖೆ ವಿಳಂಬವಾಗಿಲ್ಲ. ಪ್ರಕರಣದ ತನಿಖೆ ಅಂತಿಮ ಹಂತದಲ್ಲಿದ್ದು ಸದ್ಯದಲ್ಲಿಯೇ ಕೋರ್ಟ್‌ಗೆ ಚಾರ್ಜ್‌ ಶೀಟ್‌ ಸಲ್ಲಿಸುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ? 

ಸುಮಾರು 24 ಮಂದಿ ಗ್ರಾಹಕರು ಬ್ಯಾಂಕ್‌ನಲ್ಲಿ ಅಡವಿಟ್ಟಿದ್ದ ಸುಮಾರು ನಾಲ್ಕು ಕೋಟಿ ರು. ಮೌಲ್ಯದ ಚಿನ್ನವನ್ನು ಅಸಿಸ್ಟೆಂಟ್ ಮ್ಯಾನೇಜರ್ ಕಿರಣ್‌ ಲಕ್ಕಿ ಬಾಸ್ಕರ್ ಸಿನಿಮಾ ಮಾದರಿ ಹಂತ ಹಂತವಾಗಿ ಕಳ್ಳತನ ಮಾಡಿದ್ದ. ಕದ್ದ ಚಿನ್ನವನ್ನು ಮುತ್ತೂಟ್‌ ಫೈನಾನ್ಸ್‌ ಕಂಪನಿಯಲ್ಲಿ ಅಡವಿಟ್ಟು ಆನ್ ಲೈನ್ ಬೆಟ್ಟಿಂಗ್ ಆಡಿ ಮೋಜು ಮಾಡಿದ್ದ. ಗ್ರಾಹಕರು ಅಡಮಾನ ಇಟ್ಟ ಚಿನ್ನ ಪಡೆಯಲು ಬಂದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಬಳಿಕ ಮ್ಯಾನೇಜರ್‌ ಎಲ್ಲಾ ಲಾಕರ್‌ಗಳ ಪರಿಶೀಲನೆ ಮಾಡಿದಾಗ ಕಳ್ಳತನವಾಗಿರುವುದು ತಿಳಿದು ಬಂದಿತ್ತು. ಈ ಸಂಬಂಧ ಫೆ.5 ರಂದು ಬ್ಯಾಂಕ್ ಮ್ಯಾನೇಜರ್ ಗಿರಿನಗರ ಪೊಲೀಸರಿಗೆ ದೂರು ನೀಡಿದ್ದರು. ದೂರಿನನ್ವಯ ಆರೋಪಿ ಕಿರಣ್‌ನನ್ನು ಬಂಧಿಸಲಾಗಿತ್ತು.