Asianet Suvarna News Asianet Suvarna News

Bengaluru: ಟಿವಿ, ಫ್ರಿಡ್ಜ್, ಗೀಸರ್‌ಗಳ ರಿಪೇರಿ ಹೆಸರಿನಲ್ಲಿ ವಂಚಿಸುತ್ತಿದ್ದವನ ಬಂಧನ

ಗೃಹೋಪಯೋಗಿ ಹಾಗೂ ಎಲೆಕ್ಟ್ರಾನಿಕ್‌ ಉಪಕರಣಗಳ ರಿಪೇರಿಗೆ ಆನ್‌ಲೈನ್‌ ಮೂಲಕ ಹಣ ಪಡೆದು ಸಾರ್ವಜನಿಕರಿಗೆ ವಂಚಿಸುತ್ತಿದ್ದ ಕಿಡಿಗೇಡಿಯೊಬ್ಬನನ್ನು ಈಶಾನ್ಯ ವಿಭಾಗದ ಸಿಇಎನ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

bengaluru fake technician held for duping customers gvd
Author
First Published Nov 20, 2022, 3:01 PM IST

ಬೆಂಗಳೂರು (ನ.20): ಗೃಹೋಪಯೋಗಿ ಹಾಗೂ ಎಲೆಕ್ಟ್ರಾನಿಕ್‌ ಉಪಕರಣಗಳ ರಿಪೇರಿಗೆ ಆನ್‌ಲೈನ್‌ ಮೂಲಕ ಹಣ ಪಡೆದು ಸಾರ್ವಜನಿಕರಿಗೆ ವಂಚಿಸುತ್ತಿದ್ದ ಕಿಡಿಗೇಡಿಯೊಬ್ಬನನ್ನು ಈಶಾನ್ಯ ವಿಭಾಗದ ಸಿಇಎನ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗುರಪ್ಪನಪಾಳ್ಯದ ಎಂ.ಕೆ.ಹೌಸ್‌ ನಿವಾಸಿ ಅಬ್ದುಲ್‌ ಸುಭಾನ ಬಂಧಿತರಾಗಿದ್ದು, ಆರೋಪಿಯಿಂದ ಕೃತ್ಯಕ್ಕೆ ಬಳಸಿದ್ದ 2 ಮೊಬೈಲ್‌, 4 ಸಿಮ್‌ ಕಾರ್ಡ್‌ ಹಾಗೂ ಬ್ಯಾಂಕ್‌ ಖಾತೆಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ದೂರುದಾರರ ಮನೆಯಲ್ಲಿ ಎಲ್‌ಜಿ ರೆಫ್ರಿಜರೇಟರ್‌ ರಿಪೇರಿ ನೆಪದಲ್ಲಿ 9 ಸಾವಿರ ಪಡೆದು ಅಬ್ದುಲ್‌ ವಂಚಿಸಿದ್ದ. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಿದಾಗ ವಂಚಕ ಕೃತ್ಯಗಳು ಬಯಲಾಗಿವೆ.

ಹೇಗೆ ವಂಚನೆ: ಮನೆಯ ರೆಫ್ರಿಜರೇಟರ್‌, ಎಸಿ, ಟಿವಿ, ಗೀಸರ್‌, ವೋವನ್‌ ಹಾಗೂ ವಾಟರ್‌ ಫಿಲ್ಟರ್‌ ಸೇರಿದಂತೆ ಇತರೆ ಎಲೆಕ್ಟ್ರಾನಿಕ್‌ ಉಪಕರಣಗಳ ರಿಪೇರಿಗೆ ಸಾರ್ವಜನಿಕರು, ಗೂಗಲ್‌ನಲ್ಲಿ ಹುಡುಕಾಡಿ ಆನ್‌ಲೈನ್‌ ಮೂಲಕ ಸರ್ವಿಸ್‌ ಸೆಂಟರ್‌ಗಳ ಮಾಹಿತಿ ಪಡೆಯುತ್ತಿದ್ದರು. ಆಗ ಆ ಸವೀರ್‍ಸ್‌ ಸೆಂಟರ್‌ ಸಿಬ್ಬಂದಿ ಮೂಲಕ ರಿಪೇರಿಗೆ ಬಂದಿರುವ ಉಪಕರಣಗಳ ಬಗ್ಗೆ ಅಬ್ದುಲ್‌ಗೆ ಮಾಹಿತಿ ರವಾನೆ ಮಾಡುತ್ತಿದ್ದರು. ಆಗ ಗ್ರಾಹಕರ ಮೊಬೈಲ್‌ಗೆ ಕರೆ ಮಾಡುವ ಅಬ್ದುಲ್‌, ರಿಪೇರಿಗೆ ಬಂದಿರುವ ವಸ್ತುವನ್ನು ವಿಡಿಯೋ ಕಾಲ್‌ ಮಾಡಿ ತೋರಿಸಿದರೆ ಪರಿಶೀಲಿಸುತ್ತೇನೆ ಎನ್ನುತ್ತಿದ್ದ. ಜತೆಗೆ ಉಪಕರಣದ ಫೋಟೋವನ್ನು ಪಡೆಯುತ್ತಿದ್ದ. 

Hassan: ಜಮೀನು ವಿಷಯದಲ್ಲಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ

ಬಳಿಕ ಪರಿಶೀಲಿಸುವಂತೆ ನಾಟಕವಾಡಿ, ಗ್ರಾಹಕರಿಗೆ ತಿಳಿಯದ ಬಿಡಿ ಭಾಗದ ಹೆಸರನ್ನು ಹೇಳಿ ಅದನ್ನು ಬದಲಾಯಿಸಬೇಕಿದೆ. ನೀವು ಆನ್‌ಲೈನ್‌ನಲ್ಲಿ ಹಣ ಕಳುಹಿಸಿದರೆ ಬಿಡಿ ಭಾಗ ತಂದು ಸರಿ ಮಾಡಿಕೊಡುತ್ತೇನೆ ಎನ್ನುತ್ತಿದ್ದ. ಈ ಮಾತು ನಂಬಿದ ಗ್ರಾಹಕರು, ಆನ್‌ಲೈನ್‌ ಮೂಲಕ ಅಬ್ದುಲ್‌ಗೆ 8ರಿಂದ 9 ಸಾವಿರ ರವರೆಗೆ ಹಣ ಪಾವತಿಸುತ್ತಿದ್ದರು. ಹೀಗೆ ಹಣ ಸಂದಾಯವಾದ ಬಳಿಕ ಆರೋಪಿ ಗ್ರಾಹಕರ ಸಂಪರ್ಕ ಕಡಿತಗೊಳಿಸುತ್ತಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

ಮತದಾರರ ಮಾಹಿತಿ ಕಳವು: ಮತದಾರರ ಮಾಹಿತಿ ಕಳವು ಆರೋಪಕ್ಕೆ ತುತ್ತಾಗಿರುವ ಚಿಲುಮೆ ಸಂಸ್ಥೆಯ ನಿರ್ದೇಶಕ ಸೇರಿ ಇಬ್ಬರು ಹಿರಿಯ ಅಧಿಕಾರಿಗಳನ್ನು ಶುಕ್ರವಾರ ಬೆಂಗಳೂರು ಕೇಂದ್ರ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಇದೇ ವೇಳೆ, ಬಿಬಿಎಂಪಿ ಹಾಗೂ ಚಿಲುಮೆ ಸಂಸ್ಥೆಯ ಕಚೇರಿಯಲ್ಲಿ ಕೆಲವು ಮಹತ್ವದ ದಾಖಲೆಗಳನ್ನು ಕೂಡ ಜಪ್ತಿ ಮಾಡಿದ್ದಾರೆ. ಚಿಲುಮೆ ಸಂಸ್ಥೆಯ ನಿರ್ದೇಶಕ ರೇಣುಕಾ ಪ್ರಸಾದ್‌ ಹಾಗೂ ಮಾನವ ಸಂಪನ್ಮೂಲ ಅಧಿಕಾರಿ ಧರ್ಮೇಶ್‌ ಬಂಧಿತರಾಗಿದ್ದು, ಮತ್ತಿಬ್ಬರು ಸಿಬ್ಬಂದಿಯನ್ನು ವಿಚಾರಣೆ ನಡೆಸಿ ಪೊಲೀಸರು ಕಳುಹಿಸಿದ್ದಾರೆ.

ಈ ನಡುವೆ ಸಂಸ್ಥೆಯ ಆಡಳಿತಾಧಿಕಾರಿಗಳು ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ. ‘ಮತದಾನ ಕುರಿತು ಜಾಗೃತಿ ನೆಪದಲ್ಲಿ ಮತದಾರರ ವೈಯಕ್ತಿಕ ಮಾಹಿತಿ ಸಂಗ್ರಹಿಸಿ ದತ್ತಾಂಶ ಕಳವು ಮಾಡಿದ್ದಾರೆ’ ಎಂದು ಚಿಲುಮೆ ಸಂಸ್ಥೆಯ ವಿರುದ್ಧ ಹಲಸೂರು ಗೇಟ್‌ ಹಾಗೂ ಕಾಡುಗೋಡಿ ಪೊಲೀಸ್‌ ಠಾಣೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ದೂರು ದಾಖಲಿಸಿದ್ದರು. ‘ಈ ಕೃತ್ಯಕ್ಕೆ ಚುನಾವಣಾಧಿಕಾರಿಗಳ ಹೆಸರಿನಲ್ಲಿ ನಕಲಿ ಗುರುತಿನ ಚೀಟಿ ಸಹ ಬಳಕೆ ಮಾಡಿದ್ದರು’ ಎಂದು ಆರೋಪಿಸಲಾಗಿತ್ತು. ಈ ಪ್ರಕರಣ ರಾಜಕೀಯ ಸಂಚಲನ ಸೃಷ್ಟಿಸಿದೆ.

Vijayapura: ನಾಗರಬೆಟ್ಟ ಎಕ್ಸ್‌ಪರ್ಟ್ ಶಾಲೆಯಲ್ಲಿ ಅನುಮಾನಾಸ್ಪದವಾಗಿ ವಿದ್ಯಾರ್ಥಿಯ ಸಾವು

ದಾಳಿ, ಇಬ್ಬರ ಬಂಧನ: ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸಗೌಡ ನೇತೃತ್ವದ ವಿಶೇಷ ತಂಡಗಳು, ಮಲ್ಲೇಶ್ವರದ 17ನೇ ಅಡ್ಡರಸ್ತೆಯಲ್ಲಿರುವ ಚಿಲುಮೆ ಸಂಸ್ಥೆಯ ಕಚೇರಿ ಮೇಲೆ ಶುಕ್ರವಾರ ಮಧ್ಯಾಹ್ನ ದಾಳಿ ನಡೆಸಿ ಪರಿಶೀಲಿಸಿತು. ಕೃತ್ಯ ಬೆಳಕಿಗೆ ಬಂದ ನಂತರ ಕಚೇರಿಗೆ ಬೀಗ ಹಾಕಿಕೊಂಡು ಚಿಲುಮೆ ಸಂಸ್ಥೆಯ ವ್ಯವಸ್ಥಾಪಕ ಹಾಗೂ ಸಿಬ್ಬಂದಿ ಪರಾರಿಯಾಗಿದ್ದರು. ಹೀಗಾಗಿ ನ್ಯಾಯಾಲಯದ ಸಚ್‌ರ್‍ ವಾರೆಂಟ್‌ ಪಡೆದು ಚಿಲುಮೆ ಸಂಸ್ಥೆಯ ಕಚೇರಿಯನ್ನು ಪೊಲೀಸರು ಜಾಲಾಡಿದರು. ಈ ವೇಳೆ ಕೆಲವು ಕೃತ್ಯ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ್ದ ನಾಲ್ವರನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಿದ ಪೊಲೀಸರು, ರಾತ್ರಿ ವೇಳೆಗೆ ಆ ಸಂಸ್ಥೆಯ ನೌಕರರಾದ ಧರ್ಮೇಶ್‌ ಹಾಗೂ ರೇಣುಕಾ ಪ್ರಸಾದ್‌ ಅವರನ್ನು ಬಂಧಿಸಿದ್ದಾರೆ. ಇನ್ನುಳಿದ ರಕ್ಷಿತ್‌ ಸೇರಿ ಇಬ್ಬರಿಗೆ ಮತ್ತೆ ವಿಚಾರಣೆಗೆ ಬರುವಂತೆ ನೋಟಿಸ್‌ ಜಾರಿಗೊಳಿಸಿ ಪೊಲೀಸರು ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

Follow Us:
Download App:
  • android
  • ios