ಬೆಂಗಳೂರಲ್ಲಿ ಕೆಲಸ ಹುಡುಕುತ್ತಿರೋ ಯುವಕರೇ ಇವರ ಟಾರ್ಗೆಟ್, ಸರ್ಕಾರಿ ನೌಕರಿ ಹೆಸರಲ್ಲಿ ಕೋಟ್ಯಾಂತರ ವಂಚನೆ!
ಸರ್ಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿ ನಿರುದ್ಯೋಗಿಗಳಿಂದ ಲಕ್ಷಾಂತರ ರು. ಪಡೆದು ವಂಚನೆ ಮಾಡುತ್ತಿದ್ದ ದಂಪತಿಯನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು (ಫೆ.21): ಸರ್ಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿ ನಿರುದ್ಯೋಗಿಗಳಿಂದ ಲಕ್ಷಾಂತರ ರು. ಪಡೆದು ವಂಚನೆ ಮಾಡುತ್ತಿದ್ದ ದಂಪತಿಯನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದೊಡ್ಡಬೊಮ್ಮಸಂದ್ರ ನಿವಾಸಿಗಳಾದ ಪ್ರಕಾಶ್ ಮತ್ತು ಮಧು ಬಂಧಿತ ದಂಪತಿ. ಆರೋಪಿಗಳಿಂದ 2 ಲಕ್ಷ ರು.ನಗದು, 4 ಮೊಬೈಲ್ ಫೋನ್‌ಗಳು, ದ್ವಿಚಕ್ರ ವಾಹನ, ಆರು ಬ್ಯಾಂಕ್ ಖಾತೆಗಳಿಗೆ ಸೇರಿದ 16 ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಚೆಕ್‌ಬುಕ್‌ಗಳು, 11 ವಿವಿಧ ಕಂಪನಿಯ ವಾಚ್ ಗಳು,ಚಿನ್ನದಂತೆ ಕಾಣುವ 2 ನಕಲಿ ಬ್ರಾಸ್ ಲೈಟ್, 1 ಚೈನ್, 2 ಉಂಗುರ, 2 ಪೆಂಡೆಂಟ್ ಗಳು ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಟ್ಟಿಂಗ್ ಜತೆ ಹೆಣ್ಣಿನ ಚಟ, ಹಗಲು ದರೋಡೆಗಿಳಿದ ಬೆಂಗಳೂರು ರಿಯಲ್ ಎಸ್ಟೇಟ್ ಉದ್ಯಮಿ ಉದ್ಯೋಗಸ್ಥರೇ ಟಾರ್ಗೆಟ್!
ಇತ್ತೀಚೆಗೆ ಯುವಕನೊಬ್ಬನಿಗೆ ಸರ್ಕಾರಿ ಸ್ವಾಮ್ಯದ ಸಂಸ್ಥೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ಸೇರಿಸಿ ಬಳಿಕ ಕಾಯಂ ಗೊಳಿಸುವ ಭರವಸೆ ನೀಡಿ 6 ಲಕ್ಷ ರು. ಪಡೆದಿದ್ದರು. ನಂತರ ಕಾಯಂ ಉದ್ಯೋಗ ಕೊಡಿಸದೆ ತಲೆಮರೆಸಿಕೊಂಡಿದ್ದರು. ಸಂಬಂಧ ನೊಂದ ಯುವಕ ದೂರು ನೀಡಿದ್ದರು. ಈ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ದಂಪತಿಯನ್ನು ಬಂಧಿಸಲಾಗಿದೆ.
ನಿರುದ್ಯೋಗಿಗಳೇ ಟಾರ್ಗೆಟ್: ಆರೋಪಿ ದಂಪತಿ ವಂಚನೆಯನ್ನು ವೃತ್ತಿಯಾಗಿ ಮಾಡಿಕೊಂಡಿದ್ದರು. ಪದವಿ ಮುಗಿಸಿ ಉದ್ಯೋಗಕ್ಕೆ ಹುಡುಕಾಡುವ ನಿರುದ್ಯೋಗಿಗಳನ್ನು ಗುರಿಯಾಗಿಸಿ ಪರಿಚಯಿಸಿಕೊಳ್ಳುತ್ತಿದ್ದರು. ನಮಗೆ ಸರ್ಕಾರದ ವಿವಿಧ ಇಲಾಖೆ, ಸಂಸ್ಥೆಗಳು, ನಿಗಮ ಮಂಡಳಿಗಳ ಉನ್ನತ ಅಧಿಕಾರಿಗಳು ಹಾಗೂ ಮುಖ್ಯಸ್ಥರ ಪರಿಚಯವಿದೆ. ಖಾಲಿ ಇರುವ ಹುದ್ದೆಗಳನ್ನು ಕೊಡಿಸುವುದಾಗಿ ಆಸೆ ಹುಟ್ಟಿಸುತ್ತಿದ್ದರು. ಬಳಿಕ ಲಕ್ಷಾಂತ ರು. ಹಣ ಪಡೆದು ಶೀಘ್ರದಲ್ಲೇ ನೇಮಕಾತಿ ಪತ್ರ ಸಿಗಲಿದೆ ಎಂದು ಹೇಳುತ್ತಿದ್ದರು. ಹಣ ಕೊಟ್ಟ ನಿರುದ್ಯೋಗಿಗಳು ವಿಳಂಬದ ಬಗ್ಗೆ ಪ್ರಶ್ನಿಸಿದರೆ, ಸಬೂಬು ಹೇಳಿ ಕಾಲಹರಣ ಮಾಡುತ್ತಿದ್ದರು. ಬಳಿಕ ಸಂಪರ್ಕ ಕಡಿದುಕೊಂಡು ವಂಚಿಸುತ್ತಿದ್ದರು.
ಬೆಂಗಳೂರು: ಅನೈತಿಕ ಸಂಬಂಧ ಶಂಕೆ, ಅಕ್ಕಸಾಲಿಗನ ಕೊಲೆ ಮಾಡಿದ್ದ ಷಡ್ಕ ಸೇರಿ ಇಬ್ಬರ ಬಂಧನ
ಮೂರು ಪ್ರಕರಣ ಪತ್ತೆ: ದಂಪತಿಯ ಬಂಧನದಿಂದ ವಿದ್ಯಾರಣ್ಯಪುರ ಠಾಣೆಯಲ್ಲಿ ದಾಖಲಾಗಿದ್ದ ಮೂರು ವಂಚನೆ ಪ್ರಕರಣಗಳು ಪತ್ತೆಯಾಗಿವೆ. ಅಂತೆಯೆ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಆರೋಪಿಗಳ ವಿರುದ್ಧ ವಂಚನೆ ಪ್ರಕರಣಗಳು ದಾಖಲಾಗಿರುವ ಸಾಧ್ಯತೆಯಿದ್ದು, ಹೆಚ್ಚಿನ ತನಿಖೆ ಬಳಿಕ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.