ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಉಂಟಾದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಅಶೋಕ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ಆನೇಪಾಳ್ಯದಲ್ಲಿ ನಡೆದಿದೆ. ಇನ್ನೊಂದೆಡೆ ಸುಲಭವಾಗಿ ಹಣ ಸಂಪಾದನೆಗೆ ಬೈಕ್‌ಗಳ ಕಳ್ಳತನ ಮಾಡುತ್ತಿದ್ದ 7 ಮಂದಿಯನ್ನು ಬಂಧಿಸಲಾಗಿದೆ.

ಬೆಂಗಳೂರು (ಜು.31): ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಉಂಟಾದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಅಶೋಕ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ಆನೇಪಾಳ್ಯದಲ್ಲಿ ನಡೆದಿದೆ. ಆನೇಪಾಳ್ಯದ ನಿವಾಸಿ ಮೊಹಮ್ಮದ್‌ ಇರ್ಫಾನ್‌ (28) ಮೃತ ಯುವಕ. ಈ ಹತ್ಯೆ ಸಂಬಂಧ ಮೃತನ ಸ್ನೇಹಿತ ಖಾದೀಮ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ಇರ್ಫಾನ್‌ ಹಾಗೂ ಖಾದೀಮ್‌ ಬಾಲ್ಯದ ಗೆಳೆಯರಾಗಿದ್ದು, ಆನೇಪಾಳ್ಯದಲ್ಲೇ ಇಬ್ಬರು ನೆಲೆಸಿದ್ದಾರೆ. ಎಲೆಕ್ಟ್ರಿಶಿಯನ್‌ ಆಗಿ ಅವರಿಬ್ಬರು ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಈ ಗೆಳೆಯರ ಮಧ್ಯೆ ಮನಸ್ತಾಪ ಮೂಡಿದ್ದು, ಆಗಾಗ್ಗೆ ಮಾತಿನ ಚಕಮಿಕಿಗಳು ನಡೆದಿದ್ದವು. ಖಾದೀಮ್‌ ನೆಲೆಸಿರುವ ಗಲ್ಲಿಗೆ ಶುಕ್ರವಾರ ರಾತ್ರಿ 10.30ರಲ್ಲಿ ಇರ್ಫಾನ್‌ ತೆರಳಿದ್ದ. ಆಗ ನಮ್ಮ ಗಲ್ಲಿಗೆ ಯಾಕೆ ಬರುತ್ತೀಯಾ ಎಂದು ಆತ ಪ್ರಶ್ನಿಸಿದ್ದಾನೆ. ಇದರಿಂದ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಕೆರಳಿದ ಖಾದೀಮ್‌, ಚಾಕುವಿನಿಂದ ಇರ್ಫಾನ್‌ ತೊಡೆಗೆ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ಆತ ಮೃತಪಟ್ಟಿದ್ದಾನೆ. ಈ ಕೃತ್ಯದ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಕೂಡಲೇ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಸುಲಭವಾಗಿ ಹಣ ಸಂಪಾದನೆಗೆ ಬೈಕ್‌ಗಳ ಕಳ್ಳತನ, 17 ಮಂದಿ ಬಂಧನ; 50 ಲಕ್ಷದ 70 ಬೈಕ್‌ ಜಪ್ತಿ!
ಬೆಂಗಳೂರು: ಪೂರ್ವ ವಿಭಾಗದ ವ್ಯಾಪ್ತಿಯ ಬೈಕ್‌ ಕಳ್ಳತನ ಮಾಡುತ್ತಿದ್ದ 17 ಮಂದಿ ಖದೀಮರನ್ನು ಪ್ರತ್ಯೇಕವಾಗಿ ಬಂಧಿಸಿರುವ ಆರು ಠಾಣೆಗಳ ಪೊಲೀಸರು, 70 ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ. ಹೊರಮಾವು ವಿಜಯಾ ಬ್ಯಾಂಕ್‌ ಕಾಲೋನಿಯ ನಿತಿನ್‌ ಅಲಿಯಾಸ್‌ ಗುಂಗುರು ಕೂದಲು, ರಾಮಮೂರ್ತಿ ನಗರದ ಮಾರಪ್ಪ ಅಲಿಯಾಸ್‌ ಮಾದೇಶ ಹಾಗೂ ಬಾಣವಾಡಿಯ ಮನೋಜ್‌ ಅಲಿಯಾಸ್‌ ಎಮ್ಮೆ, ರಾಜೇಶ, ತುಮಕೂರು ನಗರದ ಅರಳಪೇಟೆಯ ಶಾಹೀದ್‌ ಆಫ್ರಿದ್‌, ಟಿ.ದಾಸರಹಳ್ಳಿಯ ಶಾಹೀದ್‌ ಪಾಷ. ಕೆ.ಜಿ.ಹಳ್ಳಿ ಮೊಹಮ್ಮದ್‌ ಖಲೀಲ್‌, ಅಸಾದ್‌, ಯಾರಬ್‌ ನಗರದ ಸೈಯದ್‌ ಮುನಾವರ್‌, ಶೇಖ್‌ ಅರ್ಬಾಜ್‌, ಸಾಲಮನ್‌, ಮೊಹಮ್ಮದ್‌ ಉಮ್ಮರ್‌, ಮಣಿಕಂಠ, ಮತೀನ್‌ ಹಾಗೂ ಕಾಕ್ಸ್‌ಟೌನ್‌ನ ಅಜಯ್‌ ಸೇರಿ 17 ಮಂದಿ ಬಂಧಿತ ಆರೋಪಿಗಳಾಗಿದ್ದಾರೆ.

ಬನ್ನೇರುಘಟ್ಟ : 2ನೇ ಮಹಡಿಯಿಂದ ಬಿದ್ದು 12 ವರ್ಷದ ವಿದ್ಯಾರ್ಥಿ ದಾರುಣ ಸಾವು

ಆರೋಪಿಗಳಿಂದ 50 ಲಕ್ಷ ಮೌಲ್ಯದ 70 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಹೆಣ್ಣೂರು, ರಾಮಮೂರ್ತಿ ನಗರ, ಬಾಣಸವಾಡಿ, ಪುಲಿಕೇಶಿ ನಗರ, ಶಿವಾಜಿ ನಗರ ಹಾಗೂ ಕೆ.ಜಿ.ಹಳ್ಳಿ ಠಾಣೆಗಳ ವ್ಯಾಪ್ತಿಯಲ್ಲಿ ಬೈಕ್‌ ಕಳ್ಳತನ ಕೃತ್ಯಗಳು ನಡೆದಿದ್ದವು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್‌ ಗುಳೇದ್‌ ಮಾಹಿತಿ ನೀಡಿದ್ದಾರೆ.

ದಂಡ ತಪ್ಪಿಸಲು ಒಂದೇ ಬೈಕ್‌ಗೆ ಹಿಂದೆ, ಮುಂದೆ ಬೇರೆ ನಂಬರ್ ಹಾಕಿ ಸಿಕ್ಕಿಬಿದ್ದ ಚಾಲಾಕಿ!

ಸುಲಭವಾಗಿ ಹಣ ಸಂಪಾದನೆಗೆ ಬೈಕ್‌ ಕಳ್ಳತನವನ್ನು ಈ ಆರೋಪಿಗಳು ತಮ್ಮ ವೃತ್ತಿಯಾಗಿಸಿಕೊಂಡಿದ್ದರು. ಮನೆ, ಹಾಸ್ಟೆಲ್‌ಗಳ ಮುಂದೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸುತ್ತಿದ್ದ ಬೈಕ್‌ಗಳನ್ನು ನಕಲಿ ಕೀ ಬಳಸಿ ಇಲ್ಲವೇ ಹ್ಯಾಂಡಲ್‌ ಬ್ರೇಕ್‌ ಮಾಡಿ ಆರೋಪಿಗಳು ಕಳವು ಮಾಡುತ್ತಿದ್ದರು. ಕಳವು ಮಾಡಿದ ಬೈಕ್‌ಗಳ ಪೈಕಿ ಕೆಲವನ್ನು ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿದರೆ, ಇನ್ನು ಕೆಲವನ್ನು ಬಿಡಿ ಭಾಗಗಳನ್ನು ಬಿಚ್ಚಿ ಮಾರುತ್ತಿದ್ದರು ಎಂದು ಡಿಸಿಪಿ ಹೇಳಿದ್ದಾರೆ.