ಬೆಂಗಳೂರಿನ ರೌಡಿಶೀಟರ್ ದರ್ಶನ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ತಮ್ಮ ಪತಿಯ ಸಾವಿಗೆ ವಿವೇಕನಗರ ಪೊಲೀಸರ ಅನಧಿಕೃತ ಕಸ್ಟಡಿ ಮತ್ತು ಹಲ್ಲೆಯೇ ಕಾರಣ ಎಂದು ಪತ್ನಿ ಅಶ್ವಿನಿ ಆರೋಪಿಸಿದ್ದಾರೆ. ಸಿಐಡಿ ತನಿಖೆಯ ಮೇಲೆ ನಂಬಿಕೆಯಿಲ್ಲದ ಅವರು, ಪ್ರಕರಣದ ನ್ಯಾಯಾಂಗ ತನಿಖೆಗೆ ಆಗ್ರಹಿಸಿದ್ದಾರೆ.
ಬೆಂಗಳೂರು (ಡಿ.02): ಬೆಂಗಳೂರಿನ ರೌಡಿಶೀಟರ್ ಎಂದು ಹೇಳಲಾಗಿದ್ದ 22 ವರ್ಷದ ದರ್ಶನ್ ಅನುಮಾನಾಸ್ಪದ ಸಾವು ಇದೀಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ತಮ್ಮ ಗಂಡನ ಸಾವಿಗೆ ವಿವೇಕನಗರ ಠಾಣೆಯ ಪೊಲೀಸರೇ ಕಾರಣ ಎಂದು ಮೃತ ದರ್ಶನ್ ಪತ್ನಿ ಅಶ್ವಿನಿ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ಮಂಗಳವಾರ ನಡೆಸಿ ಮಾತನಾಡಿದ, ಈಗಾಗಲೇ ರಾಜ್ಯ ಸರ್ಕಾರವು ಸಿಐಡಿ (CID) ತನಿಖೆಗೆ ಆದೇಶಿಸಿದ್ದರೂ, ಪೊಲೀಸ್ ಇಲಾಖೆಯ ಮೇಲಿನ ನಂಬಿಕೆ ಕಳೆದುಕೊಂಡಿರುವ ಅಶ್ವಿನಿ, ಸಿಐಡಿ ತನಿಖೆ ಮೇಲೆ ನಮಗೆ ಸಹಮತವಿಲ್ಲ, ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ನಾಲ್ಕು ದಿನಗಳ ಅನಧಿಕೃತ ಕಸ್ಟಡಿ ಆರೋಪ
ಘಟನೆಯ ಹಿನ್ನೆಲೆ ಹೀಗಿದೆ: ನವೆಂಬರ್ 15 ರಂದು ದರ್ಶನ್‌ರನ್ನು ವಿವೇಕನಗರ ಠಾಣೆಯ ಪೊಲೀಸರು ಕರೆತಂದಿದ್ದರು. ದರ್ಶನ್‌ಗೆ ಕುಡಿತದ ಚಟವಿತ್ತು, ಪೊಲೀಸರ ವಿರುದ್ಧವೇ ಹಲ್ಲೆ ಮಾಡಲು ಮುಂದಾದಾಗ ಆತನನ್ನು ವಶಕ್ಕೆ ಪಡೆದ ಪೊಲೀಸರು, ಯಾವುದೇ ಕೇಸ್ ದಾಖಲಿಸಿದರೇ ಎರಡು ದಿನಗಳ ಕಾಲ ಅನಧಿಕೃತವಾಗಿ ಠಾಣೆಯಲ್ಲಿ ಇಟ್ಟುಕೊಂಡಿದ್ದರು. ಇದೇ ವೇಳೆ ದರ್ಶನ್ ತಾಯಿ ಮಗನನ್ನು ರಿಹ್ಯಾಬ್ ಸೆಂಟರ್‌ಗೆ ಸೇರಿಸುತ್ತೇನೆ ಎಂದು ಹೇಳಿದ್ದರಿಂದ, ಪೊಲೀಸರೇ ಮಾದನಾಯಕನಹಳ್ಳಿ ಬಳಿಯ ಯುನಿಟಿ ರಿಹ್ಯಾಬ್ ಸೆಂಟರ್‌ಗೆ ದಾಖಲಿಸಿದ್ದರು.
ದರ್ಶನ್‌ನನ್ನು ಠಾಣೆಯಲ್ಲಿ ಇರಿಸಿದ್ದ ಎರಡು ದಿನಗಳು ಮತ್ತು ರಿಹ್ಯಾಬ್ ಸೆಂಟರ್‌ಗೆ ದಾಖಲಿಸುವ ಮೊದಲು ಸೇರಿ ಒಟ್ಟು 4 ದಿನಗಳ ಕಾಲ ಅನಧಿಕೃತ ಕಸ್ಟಡಿಯಲ್ಲಿ ಇರಿಸಿ, ಪೊಲೀಸರು ಅಮಾನವೀಯವಾಗಿ ಹಲ್ಲೆ ನಡೆಸಿದ್ದಾರೆ. ದರ್ಶನ್ ದೇಹದ ಹಲವು ಕಡೆ ಗಂಭೀರ ಗಾಯಗಳಾಗಿರುವುದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ಅಶ್ವಿನಿ ಆರೋಪಿಸಿದ್ದಾರೆ.
ದರ್ಶನ್ ಸಾವಿನ ಸುತ್ತಲಿನ ಅನುಮಾನಗಳು
ನವೆಂಬರ್ 26 ರಂದು ರಿಹ್ಯಾಬ್ ಸೆಂಟರ್‌ನವರು ದರ್ಶನ್ ಸಾವನ್ನಪ್ಪಿದ ಸುದ್ದಿ ತಿಳಿಸಿದ್ದಾರೆ. ದರ್ಶನ್‌ರ ತಾಯಿ ರಿಹ್ಯಾಬ್ ಸೆಂಟರ್‌ಗೆ ಹೋದಾಗ, ಮಗನ ದೇಹವನ್ನು ನೆಲಮಂಗಲ ಆಸ್ಪತ್ರೆಯಲ್ಲಿ ಬಿಟ್ಟು ಬಂದಿರುವುದು ತಿಳಿದಿದೆ. ರಿಹ್ಯಾಬ್ ಸೆಂಟರ್‌ನವರು ದರ್ಶನ್‌ಗೆ ಉಸಿರಾಟದ ಸಮಸ್ಯೆ ಇತ್ತು ಎಂದು ಹೇಳಿದ್ದರೂ, ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ದೇಹದ ಮೇಲೆ ಹಲ್ಲೆಯ ಗುರುತುಗಳು ಇರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ದರ್ಶನ್ ತಾಯಿ ಮಾದನಾಯಕನಹಳ್ಳಿ ಠಾಣೆಯಲ್ಲಿ ದೂರು ನೀಡಿದ ನಂತರ ಯುಡಿಆರ್ (UDR) ದಾಖಲಿಸಿದ್ದ ಪೊಲೀಸರು, ನಂತರ ಹಲ್ಲೆ ದೃಢವಾದ ಹಿನ್ನೆಲೆಯಲ್ಲಿ ಕೊಲೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಪತಿಯ ಸಾವಿನ ಸುದ್ದಿ ಹೊರಬೀಳುತ್ತಿದ್ದಂತೆಯೇ, ಪೊಲೀಸರು ತಮಗೆ ಹಣ ನೀಡುವುದಾಗಿ ಆಮಿಷ ಒಡ್ಡಿದ್ದರು. ಜೊತೆಗೆ, ಈ ಪ್ರಕರಣದಲ್ಲಿ ನಾವು ಹೇಳಿದಂತೆ ಕೇಳಿ' ಎಂದು ಒತ್ತಡ ಹೇರಿದ್ದರು ಎಂದು ಪತ್ನಿ ಅಶ್ವಿನಿ ಆರೋಪಿಸಿದ್ದಾರೆ.
ಸಿಐಡಿ ಪೊಲೀಸರು ಸಹ ಪೊಲೀಸರ ಇಲಾಖೆಗೆ ಸೇರಿರುವುದರಿಂದ, ಅವರ ತನಿಖೆ ಮೇಲೆ ನಮಗೆ ಯಾವುದೇ ನಂಬಿಕೆ ಉಳಿದಿಲ್ಲ. ನ್ಯಾಯಯುತ ತನಿಖೆಗಾಗಿ ರಾಜ್ಯ ಸರ್ಕಾರವು ತಕ್ಷಣವೇ ನ್ಯಾಯಾಂಗ ತನಿಖೆಗೆ (Judicial Inquiry) ಆದೇಶ ನೀಡಬೇಕು' ಎಂದು ಅಶ್ವಿನಿ ಅವರು ಸುದ್ದಿಗೋಷ್ಠಿಯಲ್ಲಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಮೃತ ದರ್ಶನ್ ಅವರ ಪತ್ನಿ ಮತ್ತು ಕುಟುಂಬವು ತೀವ್ರ ಆಘಾತದಲ್ಲಿದ್ದು, ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ.


