* ವಕೀಲ್ ಸಾಬ್ ಖ್ಯಾತಿಯ ಜಗದೀಶ್‌ಗೆ ಮತ್ತೊಂದು ಕೇಸ್‌ನಲ್ಲಿ ಜಾಮೀನು* ಕೊಡಿಗೇಹಳ್ಳಿ ಠಾಣೆ ಪೊಲೀಸರು ದಾಖಲಿಸಿದ್ದ ಜಾತಿ ನಿಂದನೆ ಪ್ರಕರಣದಲ್ಲೂ ಸಹ ಜಾಮೀನು* ಮೊನ್ನೇ ಅಷ್ಟೇ ಯತ್ನ ಪ್ರಕರಣದಲ್ಲೂ ವಕೀಲ ಕೆ.ಎಂ. ಜಗದೀಶ್‌ಗೆ ಜಾಮೀನು ಸಿಕ್ಕಿತ್ತು
ಬೆಂಗಳೂರು, (ಮಾ.08): ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಕೇಸ್ ಮೂಲಕ ಚಿರಪರಿಚಿತರಾಗಿದ್ದ ವಕೀಲ್ ಸಾಬ್ ಖ್ಯಾತಿಯ ಕೆ.ಎಂ ಜಗದೀಶ್‌ಗೆ (Advocate Jagadeesh) ಎರಡನೇ ಕೇಸ್‌ನಲ್ಲೂ ಜಾಮೀನು ಸಿಕ್ಕಿದೆ.
ಈ ಹಿಂದೆ ಬೆಂಗಳೂರಿನ ಹಲಸೂರು ಗೇಟ್ ಠಾಣೆಪೊಲೀಸರು ದಾಖಲಿಸಿದ್ದ ಕೊಲೆ ಯತ್ನ ಕೇಸ್‌ನಲ್ಲಿ ಮೊನ್ನೆಯಷ್ಟೇ ವಕೀಲ ಜಗದೀಶ್ ಅವರಿಗೆ ಬೆಂಗಳೂರು ಸೆಷನ್ ಸಿವಿಲ್ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು.
ವಕೀಲ್ ಸಾಬ್ ಜಗದೀಶ್‌ಗೆ ಜಾಮೀನು, ಆದ್ರೂ ಬಿಡುಗಡೆ ಭಾಗ್ಯ ಇಲ್ಲ!
ಇದೀಗ, ಕೊಡಿಗೇಹಳ್ಳಿ ಠಾಣೆ ಪೊಲೀಸರು ದಾಖಲಿಸಿದ್ದ ಜಾತಿ ನಿಂದನೆ ಪ್ರಕರಣದಲ್ಲೂ ಸಹ ಜಾಮೀನು ದೊರೆತಿದೆ. ಎರಡೂ ಪ್ರಕರಣಗಳಲ್ಲಿ ಅವರಿಗೆ ಜಾಮೀನು ದೊರೆತಿದ್ದು, ವಕೀಲ ಜಗದೀಶ್ ಜೈಲಿನಿಂದ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದಾರೆ
ಸದ್ಯಕ್ಕೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಜಗದೀಶ್ ಅವರು ಬಹುಶಃ ನಾಳೆ (ಮಂಗಳವಾರ) ಬಿಡುಗಡೆಯಾಗುವ ಸಾಧ್ಯತೆಗಳಿವೆ.
ಫೆಬ್ರವರಿ 11ರಂದು ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ದೊಡ್ಡ ಗಲಾಟೆಯಾಗಿತ್ತು. ವಕೀಲರಾದ ಕೆ.ಎನ್.ಜಗದೀಶ್ ಅವರು ವಕೀಲರನ್ನು ಅವ್ಯಾಚ್ಯ ಪದಗಳಿಂದ ನಿಂದಿಸಿ ವೃತ್ತಿಗೆ ಚ್ಯುತಿ ತಂದಿದ್ದಾರೆ. ನ್ಯಾಯಾಲಯ ಆವರಣದಲ್ಲಿ ಅಶಾಂತಿ ಉಂಟು ಮಾಡಿದ್ದಾರೆ, ಕೊಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿ ವಕೀಲರ ಸಂಘದ ಪ್ರತಿನಿಧಿಗಳು ನೀಡಿದ್ದ ದೂರಿನ ಮೇಲೆ ಜಗದೀಶ್ ಅವರನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದರು. ಆ ಬಳಿಕ ನ್ಯಾಯಾಲಯ ವಕೀಲ ಜಗದೀಶ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.
ಈ ಪ್ರಕರಣ ಸಂಬಂಧ ವಕೀಲ ಜಗದೀಶ್, ಅವರ ಪುತ್ರ ಆರ್ಯಗೌಡ ಮತ್ತು ಪ್ರಶಾಂತಿ ಸುಭಾಷ್, ಶರತ್ ಖದ್ರಿ ಅವರಿಗೆ 68 ನೇ ಸಿಟಿ ಸಿವಿಲ್ ನ್ಯಾಯಾಲಯ ಶನಿವಾರ ಜಾಮೀನು ಮಂಜೂರು ಮಾಡಿತ್ತು
ಇನ್ನು ವಕೀಲ ಜಗದೀಶ್ ಮಹದೇವ್ ವಿರುದ್ಧ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಾಗಿತ್ತು. ಜೊತೆಗೆ ಪೊಲೀಸ್ ಆಯುಕ್ತ ಕಮಲಪಂತ್ ಅವರ ಕಚೇರಿಯಲ್ಲಿ ಪೇದೆ ರಮೇಶ್ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಬೆದರಿಕೆ ಹಾಕಿದ ಆರೋಪದಡಿ ಪ್ರಕರಣ ದಾಖಲಾಗಿದ್ದು ಎರಡೂ ಪ್ರಕರಣದಲ್ಲಿ ವಕೀಲ ಜಗದೀಶ್‌ಗೆ ಜಾಮೀನು ದೊರೆತಿದೆ.
ವಕೀಲ ಜಗದೀಶ್ ಮತ್ತು ಪುತ್ರನ ಮೇಲೆ ನಡೆದಿತ್ತು ಹಲ್ಲೆ!
ನಗರದ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ವಕೀಲ ಜಗದೀಶ್ ಮತ್ತು ಅವರ ಆಪ್ತರ ಮೇಲೆ ಹಲ್ಲೆ ನಡೆಸಿರುವ ಆರೋಪವೂ ಕೇಳಿ ಬಂದಿತ್ತು. ಈ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಪ್ರಕರಣವೊಂದರ ಸಂಬಂಧ ಫೆಬ್ರವರಿ 11ರಂದು ಬೆಳಗ್ಗೆ ಸಿಟಿ ಸಿವಿಲ್ ಕೋರ್ಟ್‌ಗೆ ದಾಖಲೆ ಸಲ್ಲಿಸಲು ಹೋದಾಗ ‘ಕೆಲವು ಮುಸುಕುಧಾರಿಗಳು ನನ್ನ ಹಾಗೂ ನನ್ನ ಪುತ್ರ, ಆಪ್ತರ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದು ಜಗದೀಶ್ ಆರೋಪಿಸಿದ್ದರು. ಹಲ್ಲೆಗೊಳಗಾದ ಜಗದೀಶ್ ಪುತ್ರನಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು.
ಫೇಸ್ ಬುಕ್ ಲೈವ್ ನಲ್ಲಿ ಆಕ್ರೋಶ!
ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಮೇಲೆ ಭ್ರಷ್ಟಾಚಾರ ಆರೋಪ ಕೇಳಿಬಂದ ನಂತರ ಈ ಪ್ರಕರಣದ ಬೆನ್ನುಬಿದ್ದಿದ್ದ ಜಗದೀಶ್, ಈ ಆರೋಪವನ್ನು ದಾಖಲೆ ಸಮೇತ ಸಾಬೀತುಪಡಿಸೋದಾಗಿ ಹೇಳಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜಗದೀಶ್ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಅನೇಕರು ಮುಗಿಬಿದ್ದಿದ್ದರು.
ಘಟನೆ ಕುರಿತು ಅದೇ ದಿನ ಫೇಸ್‌ಬುಕ್ ಲೈವ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದ ವಕೀಲ ಜಗದೀಶ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್, ಡಿಜಿಪಿ ಪ್ರವೀಣ್ ಸೂದ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ನನ್ನ ಮಗನಿಗೆ ಏನಾದರೂ ಆದರೆ ನಿಮ್ಮ ಖಾಕಿ ಸಮವಸ್ತ್ರ ಬಿಡಿಸದೇ ಬಿಡಲ್ಲ. ಕೋರ್ಟ್ ಆವರಣದಲ್ಲಿ ಒಬ್ಬ ನ್ಯಾಯವಾದಿ ಮಗನ ಮೇಲೆ ಹಲ್ಲೆ ನಡೆದಿದೆ ಅಂದ್ರೆ ಇದೇನಿದು ಗೂಂಡಾ ರಾಜ್ಯನಾ? ಮೊದಲು ರಾಜೀನಾಮೆ ತೆಗೆದುಕೊಂಡು ಮನೆಗೆ ಹೋಗಿ. ಇಲ್ಲವೇ ನಾನೇ ನಿಮ್ಮ ಸಮವಸ್ತ್ರ ಬಿಚ್ಚಿಸುತ್ತೀನಿ ಎಂದು ವಾಗ್ದಾಳಿ ನಡೆಸಿದ್ದರು.
