ಬೆಳಗಾವಿಯಲ್ಲಿ ಮೂರು ವರ್ಷಗಳ ಅವಧಿಯಲ್ಲಿ ನಡೆದ ಮೂರು ಸುಪಾರಿ ಕೊಲೆಗಳನ್ನು ಪೊಲೀಸರು ಬೇಧಿಸಿದ್ದಾರೆ. ಎರಡು ಪ್ರಕರಣಗಳಲ್ಲಿ, ಮೃತರ ಪತ್ನಿಯರೇ ಸುಪಾರಿ ನೀಡಿದ್ದರು ಎಂಬುದು ಬೆಳಕಿಗೆ ಬಂದಿದೆ. ಒಂದು ಪ್ರಕರಣದಲ್ಲಿ ಸಹೋದರನೇ ಕೊಲೆ ಮಾಡಿದ್ದಾನೆ.

ಬೆಳಗಾವಿ (ಜ.18): ಮೂರು ವರ್ಷಗಳ ಅವಧಿಯಲ್ಲಿ ನಡೆದಿದ್ದು ಮೂರು ಕೊಲೆ. ಹಾಗಂತ ಈ ಕೊಲೆ ಕೇಸ್‌ ವಿಚಾರವಾಗಿ ಯಾವುದೇ ದೂರು ದಾಖಲಾಗಿರಲಿಲ್ಲ. ಯಾಕೆಂದರೆ ಇವುಗಳನ್ನು ಅಪಘಾತ, ಅತ್ಮಹತ್ಯೆ, ಹೃದಯಾಘಾತ ಎಂದು ಬಿಂಬಿಸಿ ಪ್ರಕರಣವನ್ನು ಮುಚ್ಚಿಹಾಕಲಾಗಿತ್ತು. ಇತ್ತೀಚೆಗೆ ಬಂದ ದೂರಿನದ ಆಧಾರದಲ್ಲಿ ಮೂರು ವರ್ಷಗಳ ಅವಧಿಯಲ್ಲಿ ಮೂರು ಸುಪಾರಿ ಕೊಲೆ ಮಾಡಿದ್ದ ಗ್ಯಾಂಗ್‌ಅನ್ನು ಬಂಧಿಸುವಲ್ಲಿ ಯಮಕನಮರಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಮೂರು ಸುಪಾರಿ ಕೊಲೆ ಕೇಸ್‌ಗಳಲ್ಲಿ ಎರಡು ಕೊಲೆ ಕೇಸ್‌ಗೆ ಸುಪಾರಿಯನ್ನು ಮೃತರ ಪತ್ನಿಯರೇ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ 6 ಅರೋಪಿಗಳನ್ನು ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದಾರೆ. ಸುಪಾರಿ ಹಂತಕರಾದ ಹುಕ್ಕೇರಿ ತಾಲೂಕಿನ ಹಟ್ಟಿಆಲೂರದ ಆಕಾಶ ಬಸಲಿಂಗಪ್ಪ ಗೋಕಾವಿ, ರಮೇಶ ಲಗಮಪ್ಪಾ ಮಾಳಗಿ ಹಾಗೂ ಪಾಶ್ಚಾಪುರದ ಅಪ್ಪಣ್ಣ ಮುಶಪ್ಪ ನಾಯಿಕ, ಸುಪಾರಿ ನೀಡಿದ ಮೃತರ ಪತ್ನಿ ಮಾಲಾ ಸುಟಕಣ್ಣವರ, ಇನ್ನೋರ್ವ ಮೃತನ ಪತ್ನಿ ಯಲ್ಲವ್ವ ವಿಠಲ ಮರೆಪ್ಪಗೋಳ ಹಾಗೂ ಈಕೆಯ ಪ್ರಿಯಕರ ನಾಗಪ್ಪ ಮಾಳಗಿ ಎನ್ನುವ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

70 ಸಾವಿರಕ್ಕೆ ಸುಪಾರಿ ನೀಡಿದ ಪತ್ನಿ, ಹೃದಯಾಘಾತ ಎಂದು ಕೇಸ್‌ ಕ್ಲೋಸ್‌: 2024ರ ಏಪ್ರಿಲ್‌ನಲ್ಲಿ 34 ವರ್ಷದ ಮಹಾಂತೇಶ ಭೀಮಪ್ಪ ಸುಟಕಣ್ಣವರ ಮಲಗಿದ್ದಲ್ಲಿಯೇ ಮೃತಪಟ್ಟಿದ್ದ.ಹುಕ್ಕೇರಿ ತಾಲೂಕಿನ ಹಳ್ಳದಕೇರಿಯ ಹಾಲಿ ಹಟ್ಟಿ ಆಲೂರ ಗ್ರಾಮದ ನಿವಾಸಿಯಾಗಿದ್ದ ಮಹಾಂತೇಶನ ಸಹೋದರ ಕಲ್ಲಪ್ಪ ಸುಟಕಣ್ಣವರ ಜ.10ರಂದು ಠಾಣೆಗೆ ಬಂದು ದೂರು ನೀಡಿ, ಮೃತನ ಹೆಂಡತಿ ಹಾಗೂ ಇತರರ ಮೇಲೆ ಸಂಶಯದ ಬಗ್ಗೆ ದೂರು ನೀಡಿದ್ದರು. ಆ ಬಳಿಕ ತನಿಖೆ ಆರಂಭಿಸಿದ ಪೊಲೀಸರಿಗೆ ಗೊತ್ತಾಗಿದ್ದೇನೆಂದರೆ, ಪತಿ ಸಾರಾಯಿ ಕುಡಿದು ಬಂದು ಪ್ರತಿನಿತ್ಯ ಕಿರುಕುಳ ಕೊಡುತ್ತಿದ್ದ ಇದರಿಂದ ಬೇಸತ್ತು ಆಕಾಶ್‌ ಗೋಕಾವಿ ಎನ್ನುವವನಿಗೆ ಗಂಡನ್ನು ಕೊಲೆ ಮಾಡಲು 70 ಸಾವಿರ ರೂಪಾಯಿಗೆ ಸುಪಾರಿ ನೀಡಿದ್ದಳು. ಇದನ್ನು ತನಿಖೆಯ ವೇಳೆ ಸ್ವತಃ ಆಕೆಯೇ ಬಾಯಿ ಬಿಟ್ಟಿದ್ದಾಳೆ.

ಕೊಲೆ ನಡೆದ ಬಳಿಕ ಹಂತಕರಿಗೆ ಈಕೆ 30 ಸಾವಿರ ಫೋನ್‌ ಪೇ ಮಾಡಿದ್ದಳು. ಆಕಾಶ್‌ ತನ್ನ ಸ್ನೇಹಿತರಾದ ರಮೇಶ್​ ಮಾಳಗಿ ಹಾಗೂ ಅಪ್ಪಣ್ಣ ನಾಯಕರನ್ನು ಸೇರಿಸಿಕೊಂಡು ಮಹಾಂತೇಶನಿಗೆ ಚೆನ್ನಾಗಿ ಸಾರಾಯಿ ಕುಡಿಸಿ ಹಗ್ಗದಿಂದ ಕುತ್ತಿಗೆ ಹಿಸುಕಿ ಕೊಲೆ ಮಾಡಿ ರಾತ್ರಿಯ ವೇಳೆ ಮೃತದೇಹವನ್ನು ಮನೆಗೆ ತಂದು ಇಟ್ಟಿದ್ದರು. ಮರು ದಿನ ಪತ್ನಿ ನನ್ನ ಗಂಡನಿಗೆ ಹಾರ್ಟ್‌ ಅಟ್ಯಾಕ್‌ ಆಗಿದೆ ಎಂದು ಡ್ರಾಮಾ ಮಾಡಿ ಆತನ ಶವವನ್ನು ಹೂತು ಹಾಕಿದ್ದಳು.

9 ತಿಂಗಳ ಹಿಂದೆ ಹುಕ್ಕೇರಿ ಪಟ್ಟಣದ ರುದ್ರಭೂಮಿಯಲ್ಲಿ ಹೂತಿದ್ದ ಶವವನ್ನು ಪೊಲೀಸರು ಶನಿವಾರ ಹೊರತೆಗೆದಿದ್ದಾರೆ. ಯಮಕನಮರಡಿ ಪೊಲೀಸರು ಹಾಗೂ ಬೆಳಗಾವಿ ಎಸಿ ನೇತೃತ್ವದಲ್ಲಿ ಶವ ಹೊರ ತೆಗೆಯುವ ಕಾರ್ಯ ನಡೆದಿದೆ.

ಅನೈತಿಕ ಸಂಬಂಧಕ್ಕೆ ಅಡ್ಡಿಪಡಿಸಿದ್ದ ಪತಿಯ ಕೊಲೆ: ಇನ್ನು ಇದೇ ಊರಿನ ಯಲ್ಲವ್ವ ನಾಗಪ್ಪ ಮರೆಪ್ಪಗೋಳ ಹಾಗೂ ನಾಗಪ್ಪ ಸಿದ್ದಪ್ಪ ಮಾಳಗಿ ನಡುವೆ ಅನೈತಿಕ ಸಂಬಂಧವಿತ್ತು. ಇದಕ್ಕೆ ಯಲ್ಲವ್ವನ ಪತಿ ನಾಗಪ್ಪ ವಿಠಲ ಮರೆಪ್ಪಗೋಳ ಅಡ್ಡಿಮಾಡಿದ್ದಾರೆ. ಈ ಹಂತದಲ್ಲಿ ಯಲ್ಲವ್ವ ಹಾಗೂ ಪ್ರಿಯಕರ ರಮೇಶ್‌ ಸೇರಿ ಅಪ್ಪಣ್ಣಗೆ 3 ಲಕ್ಷ ರೂಪಾಯಿಯ ಸುಪಾರಿ ನೀಡಿ, ಅಡ್ವಾನ್ಸ್‌ ಆಗಿ 65 ಸಾವಿರ ಸಂದಾಯ ಮಾಡಿದ್ದರು.ನಾಗಪ್ಪ ಮರೆಪ್ಪಗೋಳ ಅವರನ್ನು ಸಾವಳಗಿ ಜಾತ್ರೆಗೆ ಕರೆದುಕೊಂಡು ಹೋಗಿ ಸಾರಾಯಿ ಕುಡಿಸಿ ಹಗ್ಗದಿಂದ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದರು. ಮೃತದೇಹವನ್ನು ಪರಕನಟ್ಟಿ ಸಮೀಪ ರೈಲ್ವೆ ಹಳಿ ಮೇಲೆ ಮಲಗಿಸಿ ಆತ್ಮಹತ್ಯೆಯನ್ನಾಗಿ ಬಿಂಬಿಸಿದ್ದರು.‌

Belagavi: ಕುಂದಾನಗರಿಯ ಬೆಚ್ಚಿಬೀಳಿಸಿದ ಸಾಮೂಹಿಕ ಅತ್ಯಾಚಾರ, ರೇಪಿಸ್ಟ್‌ಗಳ ಪ್ಲ್ಯಾನ್‌ಗೆ ಪೊಲೀಸರೇ ಶಾಕ್‌!

ಅಣ್ಣನನ್ನು ಕೊಂದ ತಮ್ಮ: ಇದೇ ಊರಿನ ವಿಠಲ ಮಾಳಗಿ ಅತಿಯಾದ ಸಾರಾಯಿ ಚಟಕ್ಕೆ ಅಂಟಿಕೊಂಡಿದ್ದ. ಇದು ಆತನ ತಮ್ಮ ರಮೇಶ್​ ಲಗಮಪ್ಪ ಮಾಳಗಿ ಸಿಟ್ಟಿಗೆ ಕಾರಣವಾಗಿತ್ತು. 22 ಲಕ್ಷ ರೂಪಾಯಿ ಮೌಲ್ಯದ ಜಮೀನನ್ನು ಅಡವಿಟ್ಟಿದ್ದರಿಂದ ಸಿಟ್ಟಿಗೆದ್ದಿದ್ದ ರಮೇಶ್‌, 2022ರಲ್ಲಿ ತನ್ನ ಸ್ನೇಹಿತರಾದ ಆಕಾಶ್​ ಗೋಕಾವಿ, ಆಪಣ್ಣ ನಾಯಕನೊಂದಿಗೆ ಸೇರಿ ವಿಠಲನನ್ನು ಪಾಶ್ಚಾಪೂರ ಹತ್ತಿರದ ಕುಂದರಗಿ ಗುಡ್ಡಕ್ಕೆ ಕರೆದುಕೊಂಡು ಹೋಗಿ ಕಂಠಪೂರ್ತಿ ಸಾರಾಯಿ ಕುಡಿಸಿದ್ದಾರೆ. ಕುತ್ತಿಗೆಗೆ ಹಗ್ಗದಿಂದ ಬಿಗಿದು ಕೊಲೆ ಮಾಡಿ ಹೆಣವನ್ನು ಬೈಕ್ ಮೇಲೆ ತೆಗೆದುಕೊಂಡು ಬಂದು ಅವರ ಮನೆ ಹತ್ತಿರದ ರಸ್ತೆಯಲ್ಲಿ ಕೆಡವಿ ಅಪಘಾತದಿಂದ ಮೃತಪಟ್ಟಿರುವುದಾಗಿ ಕತೆ ಕಟ್ಟಿದ್ದರು. ಪೊಲೀಸರಿಗೂ ದೂರು ನೀಡದೇ ತರಾತುರಿಯಲ್ಲಿ ಮೃತದೇಹ ಸುಟ್ಟು ಅಂತ್ಯಕ್ರಿಯೆ ಮಾಡಿ ಸಾಕ್ಷಿ ಪುರಾವೆ ನಾಶಪಡಿಸಿದ್ದರು.

ಬೆಂಗಳೂರು ಮತ್ತೊಬ್ಬ ಟೆಕ್ಕಿ ಸಾವು; ಮಾವನ ಕಾಮದಾಟಕ್ಕೆ ಬಲಿಯಾದ ಮದುವೆಯಾಗದ ಸೊಸೆ!

ಜನವರಿ 10 ರಂದು ಮಹಾಂತೇಶನ ಸಹೋದರ ಕಲ್ಲಪ್ಪ ಸುಟಕಣ್ಣವರ ನೀಡಿದ ಒಂದೇ ಒಂದು ದೂರಿನಲ್ಲಿ ಯಮಕನಮರಡಿ ಠಾಣೆ ಸಿಪಿಐ ಜಾವೇದ್ ಮುಶಾಪುರಿ ನೇತೃತ್ವದಲ್ಲಿ ಪಿಎಸ್‌ಐ ಎಸ್.ಕೆ. ಮನ್ನಿಕೇರಿ, ಸಿಬ್ಬಂದಿ ಕೆ.ಬಿ.ಚಂಡೂರಿ, ಎಸ್.ಬಿ. ಪೂಜೇರಿ, ಪಿ.ಎಂ. ಅರಬಳ್ಳಿ, ಶಂಕರ ಚೌಗಲಾ, ಎಲ್.ಬಿ. ಹಮಾಣಿ, ಸುನೀಲ ಚಂದರಿ, ಪಿಡಿ, ಗವಾಣಿ, ರಾಜಶ್ರೀ ನಾಯಿಕ, ಮಾಲಾ ಸನದಿ ಮೂರು ಕೊಲೆ ಪ್ರಕರಣವನ್ನು ಬೇಧಿಸಿದ್ದಾರೆ.