ವೈಯಕ್ತಿಕ ಕಾರಣ| ಬೆಂಗಳೂರಿನ ವಿಜಯನಗರದ ನಿವಾಸದಲ್ಲಿ ಸಾವಿಗೆ ಶರಣು| ಬೆಳಗ್ಗೆ ಮೃತರ ಕೊಠಡಿಗೆ ಕುಟುಂಬದ ಸದಸ್ಯರು ತೆರಳಿದಾಗ ಕೃತ್ಯ ಬೆಳಕಿಗೆ ಬಂದ ಘಟನೆ| ಈ ಸಂಬಂಧ ವಿಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು| 

ಬೆಂಗಳೂರು(ಏ.01): ತನ್ನ ಮನೆಯಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಪೂರ್ವ ವಲಯ ಜಂಟಿ ಆಯುಕ್ತರ ಆಪ್ತ ಸಹಾಯಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ವಿಜಯನಗರದ ನಿವಾಸಿ ರಾಕೇಶ್‌ ಗೌಡ (33) ಮೃತ ದುರ್ದೈವಿ. ಮನೆಯಲ್ಲಿ ಮಂಗಳವಾರ ರಾತ್ರಿ ರಾಕೇಶ್‌ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಬೆಳಗ್ಗೆ ಮೃತರ ಕೊಠಡಿಗೆ ಕುಟುಂಬದ ಸದಸ್ಯರು ತೆರಳಿದಾಗ ಕೃತ್ಯ ಬೆಳಕಿಗೆ ಬಂದಿದೆ. ವೈಯಕ್ತಿಕ ಕಾರಣಗಳ ಹಿನ್ನಲೆಯಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪಶ್ಚಿಮ ವಿಭಾಗದ ಡಿಸಿಪಿ ಡಾ. ಸಂಜೀವ್‌ ಪಾಟೀಲ್‌ ಶಂಕೆ ವ್ಯಕ್ತಪಡಿಸಿದ್ದಾರೆ.

ತಲೆಗೆ ಕವರ್‌ ಕಟ್ಟಿ, ಗ್ಯಾಸ್‌ ಸೇವಿಸಿ ಆತ್ಮಹತ್ಯೆ..!

ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ರಾಕೇಶ್‌, ಬಿಬಿಎಂಪಿ ಪೂರ್ವ ವಲಯ ಜಂಟಿ ಆಯುಕ್ತೆ ಪಲ್ಲವಿ ಅವರ ಕಚೇರಿಯಲ್ಲಿ ಆಪ್ತ ಸಹಾಯಕರಾಗಿದ್ದರು. ವಿಜಯನಗರದಲ್ಲಿ ಪತ್ನಿ ಮತ್ತು ಮಕ್ಕಳ ಜತೆ ಅವರು ನೆಲೆಸಿದ್ದರು. ವಿದ್ಯಾಭ್ಯಾಸದ ಸಲುವಾಗಿ ರಾಕೇಶ್‌ ಕುಟುಂಬದ ಜತೆ ಅವರ ಅಕ್ಕನ ಮಗಳು ವಾಸವಾಗಿದ್ದರು. ಇತ್ತೀಚೆಗೆ ಪತ್ನಿ ಮತ್ತು ಮಕ್ಕಳು ಊರಿಗೆ ಹೋಗಿದ್ದರು. ಮನೆಯಲ್ಲಿ ರಾಕೇಶ್‌ ಮತ್ತು ಅವರ ಅಕ್ಕನ ಮಗಳು ಇದ್ದರು.

ತಮ್ಮ ಕೊಠಡಿಗೆ ಮಂಗಳವಾರ ರಾತ್ರಿ ಮಲಗಿದ್ದ ರಾಕೇಶ್‌ ಬೆಳಗ್ಗೆ ಎಷ್ಟು ಹೊತ್ತಾದರೂ ಎಚ್ಚರವಾಗಿಲ್ಲ. ಇದರಿಂದ ಆತಂಕಗೊಂಡ ಅವರ ಅಕ್ಕನ ಮಗಳು, ಕೊಠಡಿ ಬಾಗಿಲು ಬಡಿದಾಗ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕೊನೆಗೆ ರಾಕೇಶ್‌ ಸೋದರನಿಗೆ ಆ ವಿಷಯ ತಿಳಿಸಿದ್ದಾರೆ. ಮೃತರ ಸಂಬಂಧಿಕರು ಬಂದು ಕೊಠಡಿ ಬಾಗಿಲು ಮುರಿದು ಒಳ ಪ್ರವೇಶಿಸಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.