ಯೋಗ ಮಾಡುತ್ತಿದ್ದಾಗಲೇ ವಿದ್ಯಾರ್ಥಿನಿಯೊಬ್ಬಳು ಮೂರ್ಛೆ ಹೋಗಿದ್ದಾಳೆ. ನಂತರ, ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ ಎಂದು ವರದಿಯಾಗಿದೆ.  

ಯೋಗ ಮಾಡುವುದರಿಂದ ನಿಮ್ಮ ಆರೋಗ್ಯ ವೃದ್ಧಿಸುತ್ತದೆ ಎಂದು ಸಂಶೋಧನೆಗಳು ಹೇಳುತ್ತವೆ. ಆದರೆ, ಉತ್ತರ ಪ್ರದೇಶದ ವಾರಣಾಸಿ ಜಿಲ್ಲೆಯಲ್ಲಿ ಯೋಗ ಪ್ರದರ್ಶನದ ನಂತರ ಬನಾರಸ್ ಹಿಂದೂ ವಿಶ್ವವಿದ್ಯಾಲಯದ (ಬಿಎಚ್‌ಯು) ಪಿಎಚ್‌ಡಿ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ. ಮೃತಪಟ್ಟವಳನ್ನು ಮನೋವಿಜ್ಞಾನ ವಿಭಾಗದ ಸಂಶೋಧನಾ ವಿದ್ವಾಂಸರಾದ ಅನುಭಾ ಉಪಾಧ್ಯಾಯ ಎಂದು ಗುರುತಿಸಲಾಗಿದೆ. ಮಂಗಳವಾರ ಬೆಳಗ್ಗೆ ಯೋಗ ಮಾಡುತ್ತಿದ್ದಾಗ ಆಕೆಯ ಸ್ಥಿತಿ ಹದಗೆಟ್ಟಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೂ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ. 

ಅನುಭಾ ಮೂರ್ಛೆ ಹೋಗಿದ್ದನ್ನು ಗಮನಿಸಿದ ಸಹಪಾಠಿಗಳು ಈ ಬಗ್ಗೆ ಎಚ್‌ಒಡಿ, ಸೂಪರ್‌ವೈಸರ್‌ ಹಾಗೂ ಪೋಷಕರಿಗೂ ಮಾಹಿತಿ ನೀಡಿದ್ದಾರೆ. ಅಲ್ಲದೆ, ಆಕೆ ಮೂರ್ಛೆ ಹೋದ ಬಳಿಕ ಹಾಸ್ಟೆಲ್‌ನ ಸಹಪಾಠಿಗಳು ಆಂಬುಲೆನ್ಸ್‌ಗೆ ಕರೆ ಮಾಡಿದ್ದರು. 

ಇದನ್ನು ಓದಿ: ಸ್ನೇಹಿತನ ಬೈಕ್‌ನಲ್ಲಿ ಪಿಕ್‌ನಿಕ್‌ಗೆ ಹೋಗಿದ್ದ ​ಬೆಂಗಳೂರಿನ ಕಾಲೇಜು ವಿದ್ಯಾರ್ಥಿನಿ ಸಾವು

ಅನುಭಾ ಸೋಮವಾರ ಉಪವಾಸ ಮಾಡಿದ್ದಳು ಎಂದೂ ತಿಳಿದುಬಂದಿದೆ. ಆಕೆ ನಿಗೂಢವಾಗಿ ಸಾವನ್ನಪ್ಪಿದ್ದಾಳೆ ಎಂದು ಆರಂಭದಲ್ಲಿ ಹೇಳಲಾಗಿತ್ತು. ಆದರೆ ನಂತರ ಆಕೆ ಯೋಗ ಮಾಡುತ್ತಿದ್ದ ವೇಳೆ ಮೂರ್ಛೆ ಹೋದಳು ಎಂದು ತಿಳಿದುಬಂದಿದೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಪಿಎಚ್‌ಡಿ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದರು. ಆದರೆ, ಬೆಳಗ್ಗೆ 7 ಗಂಟೆಗೆ ಯೋಗ ಮಾಡುವಾಗ, ಆಕೆಯ ಮೂಗಿನ ಹೊಳ್ಳೆಗಳಿಂದ ರಕ್ತಸ್ರಾವವಾಗುತ್ತಿತ್ತು ಮತ್ತು ನಂತರ ಅವಳು ಮೂರ್ಛೆ ಹೋದಳು ಎಂದು ತಿಳಿದುಬಂದಿದೆ. 

ಅಪರೂಪದ ರೋಗದಿಂದ ಬಳಲುತ್ತಿದ್ದ ಅನುಭಾ..!
ಅನುಭಾ ವಾಸ್ಕುಲೈಟಿಸ್ (ಟಕಾಯಾಸು ಆರ್ಟೆರೈಟಿಸ್) (Takayasu Arteritis)​​​​​​​ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಳು ಎಂದು ವೈದ್ಯರು ತಿಳಿಸಿದ್ದಾರೆ. ರೋಗವು ರಕ್ತನಾಳಗಳ ಉರಿಯೂತವನ್ನು ಒಳಗೊಂಡಿರುತ್ತದೆ. ಇನ್ನು, ಅನುಭಾ ಮೃತದೇಹವನ್ನು ಬನಾರಸ್‌ ಹಿಂದೂ ವಿಶ್ವವಿದ್ಯಾಲಯದ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ವಿದ್ಯಾರ್ಥಿನಿಯ ಪೋಷಕರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಅವರು ಬನಾರಸ್‌ ಹಿಂದೂ ವಿಶ್ವವಿದ್ಯಾಲಯಕ್ಕೆ ಇನ್ನೂ ಆಗಮಿಸಬೇಕಿದೆ ಎಂದೂ ತಿಳಿದುಬಂದಿದೆ. 

ಇದನ್ನೂ ಓದಿ: Hassan: ಕಾಲೇಜಿಗೆ ಹೋಗುವಾಗ ರೈಲಿಗೆ ಸಿಲುಕಿ ವಿದ್ಯಾರ್ಥಿನಿ ಸಾವು

ಪಿಎಚ್‌ಡಿ ವಿದ್ಯಾರ್ಥಿನಿಯಾದ ಆಕೆ ಬನಾರಸ್‌ ಹಿಂದೂ ವಿಶ್ವವಿದ್ಯಾಲಯದ ಮಹಿಳಾ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದಳು. ಅಲ್ಲದೆ, ವಿಶ್ವವಿದ್ಯಾನಿಲಯದಲ್ಲಿ ಮನೋವಿಜ್ಞಾನ ವಿಭಾಗದಿಂದ ಡಿಪ್ಲೊಮಾ ಮಾಡಿದ್ದಾಳೆ, ಹಾಗೆ, ಗೋರಖ್‌ಪುರ ವಿಶ್ವವಿದ್ಯಾಲಯದಿಂದ ಅನುಭಾ ಬಿಎ ಮತ್ತು ಎಂಎ ಪದವಿ ಪಡೆದಿದ್ದಾಳೆ ಎಂದು ವರದಿಯಾಗಿದೆ.