ಉಡುಪಿ ಮಾಜಿ ಶಾಸಕ ರಘುಪತಿ ಭಟ್ ಪತ್ನಿ ಪದ್ಮಪ್ರಿಯ ಆತ್ಮಹತ್ಯೆ ಪ್ರಕರಣ, 15 ವರ್ಷಗಳ ಬಳಿಕ ಆರೋಪಿಗೆ ಶಿಕ್ಷೆ
ಬರೋಬ್ಬರಿ 15 ವರ್ಷಗಳ ಹಿಂದೆ ಇಡೀ ದೇಶದ ಗಮನ ಸೆಳೆದಿದ್ದ ಪದ್ಮಪ್ರಿಯ ನಾಪತ್ತೆ ಹಾಗೂ ಆತ್ಮಹತ್ಯೆ ಪ್ರಕರಣದ ಆರೋಪಿಗೆ ಉಡುಪಿ ನ್ಯಾಯಾಲಯ ಶಿಕ್ಷೆ ವಿಧಿಸಿ ಆದೇಶ ಮಾಡಿದೆ.
ಉಡುಪಿ (ನ.11): ಬರೋಬ್ಬರಿ 15 ವರ್ಷಗಳ ಹಿಂದೆ ಇಡೀ ದೇಶದ ಗಮನ ಸೆಳೆದಿದ್ದ ಪದ್ಮಪ್ರಿಯ ನಾಪತ್ತೆ ಹಾಗೂ ಆತ್ಮಹತ್ಯೆ ಪ್ರಕರಣದ ಆರೋಪಿಗೆ ಉಡುಪಿ ನ್ಯಾಯಾಲಯ ಶಿಕ್ಷೆ ವಿಧಿಸಿ ಆದೇಶ ಮಾಡಿದೆ. ಅಂದಿನ ಬಿಜೆಪಿ ಶಾಸಕ ರಘುಪತಿ ಭಟ್ ಪತ್ನಿ ದೆಹಲಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
Bengaluru ಟೀ ಕುಡಿಯಲು ಬಂದಿದ್ದ ರೌಡಿಶೀಟರ್ ಬರ್ಬರ ಹತ್ಯೆ, 8 ಮಂದಿ ಅರೆಸ್ಟ್
ಈ ಪ್ರಕರಣ ಸಂಬಂಧ ಶಾಸಕ ರಘುಪತಿ ಭಟ್ ಅವರ ನಿಕಟವರ್ತಿ ಅತುಲ್ ರಾವ್ ನ ಸುಧೀರ್ಘ ವಿಚಾರಣೆ ನಡೆದು ಇದೀಗ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ. ಮೋಸ, ವಂಚನೆ ಹಾಗೂ ನಕಲಿ ದಾಖಲೆ ಸೃಷ್ಠಿಸಿರುವ ಪ್ರಕರಣದಲ್ಲಿ ಆರೋಪಿ ಅತುಲ್ ರಾವ್‌ಗೆ ಒಂದು ವರ್ಷ ಜೈಲುಶಿಕ್ಷೆ ಹಾಗೂ ದಂಡ ವಿಧಿಸಿ ಉಡುಪಿ ನ್ಯಾಯಾಲಯ ಶುಕ್ರವಾರ ಆದೇಶ ನೀಡಿದೆ.
ಅಂದು ಉಡುಪಿ ಶಾಸಕರಾಗಿದ್ದ ರಘುಪತಿ ಭಟ್ ಪತ್ನಿ ಪದ್ಮಪ್ರಿಯ ಇದ್ದಕ್ಕಿದ್ದಂತೆ ಕಾಣೆಯಾಗಿದ್ದರು. ಕರಂಬಳ್ಳಿಯ ತನ್ನ ಮನೆಯಿಂದ 2008 ಜೂನ್ 10ರಂದು ನಾಪತ್ತೆಯಾಗಿದ್ದರು. ಅಂದು ರಘುಪತಿ ಭಟ್ ಅವರ ಬಾಲ್ಯ ಸ್ನೇಹಿತ, ಅದೇ ಊರಿನ ಅತುಲ್ ರಾವ್, ಮನೆಯಿಂದ ಪದ್ಮಪ್ರಿಯ ಅವರನ್ನು ಆಕೆಯ ಕಾರಿನಲ್ಲೇ ಕರೆದು ಕೊಂಡು ಹೋಗಿ ಕಾಪು ಸಮೀಪದ ಧಾರ್ಮಿಕ ಕ್ಷೇತ್ರ ಕುಂಜಾರುಗಿರಿಯ ಅರಣ್ಯ ಪ್ರದೇಶದಲ್ಲಿ ಕಾರು ಇರಿಸಿ ಪರಾರಿಯಾಗಿದ್ದರು. ಘಟನಾ ಸ್ಥಳದಲ್ಲಿ ಕಾರಿನೊಳಗೆ, ಬಳೆಯ ಚೂರು, ರಕ್ತದ ಕಲೆಗಳನ್ನು ಮಾಡಿ ಅಪಹರಣದ ನಾಟಕ ಮಾಡಿದ್ದರೆಂದು ಅತುಲ್ ರಾವ್ ವಿರುದ್ಧ ಆರೋಪಿಸಲಾಗಿತ್ತು.
ಕೆಇಎ ಪರೀಕ್ಷೆ ಹಗರಣ, ಕಿಂಗ್ ಪಿನ್ ಆರ್ ಡಿ ಪಾಟೀಲ್ ಮಹಾರಾಷ್ಟ್ರದಲ್ಲಿ ಬಂಧನ
ಕಾರನ್ನು ಅಲ್ಲೇ ಬಿಟ್ಟು ಅತುಲ್ ತನ್ನ ಕಾರಿನಲ್ಲಿ ಪದ್ಮಪ್ರಿಯ ಅವರ ಉತ್ತರಕನ್ನಡ ಜಿಲ್ಲೆಗೆ ಕರೆದು ಹೋಗಿದ್ದನು. ಚಾಲಕನೋರ್ವನನ್ನು ಕರೆಸಿ, ತನ್ನ ಕಾರನ್ನು ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದನು.
ಪದ್ಮಪ್ರಿಯ ಅವರನ್ನು ಅತುಲ್ ರಾವ್ ಬಾಡಿಗೆ ಕಾರಿನಲ್ಲಿ ಗೋವಾ ವಿಮಾನ ನಿಲ್ದಾಣಕ್ಕೆ ಕರೆದುಕೊಂಡು ಹೋಗಿದ್ದನು. ತನ್ನ ಪತ್ನಿ ಮೀರಾ ಅವರ ಡ್ರೈವಿಂಗ್ ಲೈಸನ್ಸ್‌ಗೆ ಪದ್ಮಪ್ರಿಯ ಅವರ ಫೋಟೋ ಅಂಟಿಸಿ, ಮೀರಾ ಹೆಸರಿನಲ್ಲಿ ಪದ್ಮಪ್ರಿಯ ಅವರನ್ನು ಗೋವಾ ವಿಮಾನ ನಿಲ್ದಾಣದ ಮೂಲಕ ದೆಹಲಿಗೆ ಕರೆದುಕೊಂಡು ಹೋಗಿದ್ದನು.
ಈ ಅಪಹರಣದ ನಾಟಕ ರೂಪಿಸುವ ಮೊದಲೇ ದೆಹಲಿಗೆ ತೆರಳಿ, ಮೊದಲಾಗಿ ಬಾಡಿಗೆ ಮನೆಯೊಂದನ್ನು ಅತುಲ್ ರಾವ್ ಗೊತ್ತು ಮಾಡಿದ್ದನು. ಬೆಂಗಳೂರಿನ ನಕಲಿ ವಿಳಾಸ ನೀಡಿ ಬಾಡಿಗೆ ಕರಾರು ಪತ್ರ ಮಾಡಿಕೊಂಡಿದ್ದನು. ಇದು ಅಲ್ಲಿನ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಾಣಿಯಾಗಿತ್ತು. ಆ ಬಾಡಿಗೆ ಕರಾರು ಪತ್ರದಿಂದಲೇ ಅತುಲ್ ರಾವ್ ಅಲ್ಲಿ ಬ್ಯಾಂಕ್ ಖಾತೆ ತೆರೆದಿದ್ದನು.
ಲೋಕೋಪಯೋಗಿ ಇಲಾಖೆಯಲ್ಲಿ ಕರ್ಕ್ ಆಗಿದ್ದರೂ ಅಲ್ಲಿ ತನ್ನ ವಿದ್ಯಾರ್ಹತೆಯನ್ನು ಬಿಇ ಮತ್ತು ಇಂಟಲ್ ಕಂಪೆನಿಯಲ್ಲಿ ಇಂಜಿನಿಯರ್ ಎಂಬುದಾಗಿ ಉಲ್ಲೇಖ ಮಾಡಿದ್ದನು ಎಂದು ದೂರಲಾಗಿದೆ. ದೆಹಲಿಯಲ್ಲಿ ಬಾಡಿಗೆ ರೂಮಿಗೆ ಓಡಾಟ ನಡೆಸುತ್ತಿದ್ದಾಗ ಲಾಡ್ಜ್‌ನಲ್ಲಿಯೂ ಬೆಂಗಳೂರಿನ ನಕಲಿ ವಿಳಾಸವನ್ನು ನೀಡುತ್ತಿದ್ದನು. ಜೂ.10ರಂದು ದೆಹಲಿ ಹೋಗಿದ್ದ ಅತುಲ್, ಮರುದಿನ ಬೆಂಗಳೂರಿಗೆ ಬಂದು ಲಾಡ್ಜ್ ಮಾಡಿದ್ದನು. ಅಲ್ಲಿಂದ ಜೂ.12ಕ್ಕೆ ಹೊರಟು ಮರುದಿನ ಉಡುಪಿಗೆ ತಲುಪಿ, ರಘುಪತಿ ಭಟ್ ಜೊತೆ ಪದ್ಮಪ್ರಿಯ ಅವರನ್ನು ಹುಡುಕುವ ನಾಟಕ ಮಾಡಿದ್ದನು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ರಘುಪತಿ ಭಟ್ 2008ರ ಜೂ.19ರಂದು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರಂಭದಲ್ಲಿ ಮಣಿಪಾಲ ಪೊಲೀಸರು ತನಿಖೆ ನಡೆಸಿ, ಬಳಿಕ ಸಿಓಡಿ ಅಧಿಕಾರಿಗಳು ತನಿಖೆ ನಡೆಸಿದ್ದರು. ಆರೋಪಿ ವಿರುದ್ಧ ಸಿಓಡಿ ಪೊಲೀಸರು 2008ರ ಆ.22ರಂದು ಪ್ರಾರಂಭಿಕ ಮತ್ತು 2009ರ ಜು.29ರಂದು ಅಂತಿಮ ಚಾರ್ಜ್ ಶೀಟ್ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಇದರಲ್ಲಿ ಮೋಸ, ವಂಚನೆ, ನಕಲಿ ದಾಖಲೆ ಸೃಷ್ಠಿ, ನಕಲಿ ದಾಖಲೆಯನ್ನು ನೈಜ ದಾಖಲೆ ಎಂಬುದಾಗಿ ಬಿಂಬಿಸಿ ಹಾಜರುಪಡಿಸಿ ದುರುಪಯೋಗ ಪಡಿಸಿರುವ ಬಗ್ಗೆ ಆರೋಪ ಮಾಡಲಾಗಿತ್ತು.
ಇದರಲ್ಲಿ ರಘುಪತಿ ಭಟ್ ನೀಡಿರುವ ದೂರಿನಲ್ಲಿ ತಿಳಿಸಿರುವ ಪದ್ಮಪ್ರಿಯಾಳ ಅಪಹರಣ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ಆರೋಪವನ್ನು ಸಾಕ್ಷ್ಯದ ಕೊರತೆ ಹಿನ್ನೆಲೆಯಲ್ಲಿ ಸಿಓಡಿ ಅಧಿಕಾರಿಗಳು ಕೈಬಿಟ್ಟಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಉಡುಪಿ ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶ ಯೋಗೇಶ್, ಆರೋಪಿ ಮೇಲಿನ ಆರೋಪಗಳು ಸಾಬೀತಾಗಿದೆ ಎಂದು ಅಭಿಪ್ರಾಯ ಪಟ್ಟು ಐಪಿಸಿ 468 ಕಾಯಿದೆಯಡಿ ಒಂದು ವರ್ಷ ಜೈಲುಶಿಕ್ಷೆ ಮತ್ತು 5000ರೂ. ದಂಡ, ಐಪಿಸಿ 417, 465, 471 ಕಾಯಿದೆಯಡಿ ತಲಾ ಆರು ತಿಂಗಳು ಸಜೆ ಹಾಗೂ 5000ರೂ. ದಂಡ ವಿಧಿಸಿ ಆದೇಶ ನೀಡಿದರು. ಸಿಓಡಿ ಪರ ಪ್ರಕರಣದ ವಿಶೇಷ ಪಬ್ಲಿಕ್ ಪ್ರಾಸಿಕ್ಯುಟರ್ ಶಿವಪ್ರಸಾದ್ ಆಳ್ವ ವಾದ ಮಂಡಿಸಿದ್ದರು.