ಮಾಡುವ ಕೆಲಸ ಕಳ್ಳತನವಾದರೂ ದೇವರಿಗೆ ಕೈ ಮುಗಿದು ಒಳ್ಳೆಯದು ಮಾಡು ಎಂದು ಬೇಡಿಕೊಂಡು ನಗರದ ಎಟಿಎಂವೊಂದರಲ್ಲಿ ಹಣ ಕಳವು ಯತ್ನಕ್ಕೆ‌ ಕೈಹಾಕಿದ್ದ ಚೋರನನ್ನ ಕಾಮಾಕ್ಷಿಪಾಳ್ಯ ಪೊಲೀಸರು ಸೆರೆಹಿಡಿದಿದ್ದಾರೆ‌.

ಕಿರಣ್.ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್ 

ಬೆಂಗಳೂರು (ಜ.19): ಕೆಲಸದಲ್ಲಿ ದೇವರು ಕಾಣು ಎಂಬ ಮಾತಿದೆ. ಇಲ್ಲೊಬ್ಬ ಖದೀಮ ಮಾಡಿದ್ದು ಅದೇ. ಮಾಡುವ ಕೆಲಸ ಕಳ್ಳತನವಾದರೂ ದೇವರಿಗೆ ಕೈ ಮುಗಿದು ಒಳ್ಳೆಯದು ಮಾಡು ಎಂದು ಬೇಡಿಕೊಂಡು ನಗರದ ಎಟಿಎಂವೊಂದರಲ್ಲಿ ಹಣ ಕಳವು ಯತ್ನಕ್ಕೆ‌ ಕೈಹಾಕಿದ್ದ ಚೋರನನ್ನ ಕಾಮಾಕ್ಷಿಪಾಳ್ಯ ಪೊಲೀಸರು ಸೆರೆಹಿಡಿದಿದ್ದಾರೆ‌.

ಮನುಷ್ಯರಾದವರು ತಮ್ಮ ಧರ್ಮಕ್ಕೆ ತಕ್ಕಂತೆ ತಾವು ಆಚರಣೆ ಮಾಡುವ ಹಾಗೂ ನಂಬಿಕೆ ಇರುವ ದೇವರಿಗೆ ಕೈ ಮುಗಿಯೋದು ಸಾಮಾನ್ಯವಾಗಿದೆ. ಆದರೆ ಈತ ಮಾಡುವ ಕೆಲಸ ಕಳ್ಳತನವಾದರೂ ಯಾವುದೇ ತೊಂದರೆಯಾಗದಂತೆ ಒಳ್ಳೆಯದನ್ನ ಮಾಡು ಎಂದು ಬೇಡಿಕೊಂಡ ನಂತರವಷ್ಟೇ ಅಪರಾಧ ಕೃತ್ಯಗಳಿಗೆ ಕೈ ಹಾಕುತ್ತಿದ್ಧನು. ಹೀಗೆ ಕಳ್ಳತನಕ್ಕೆ ಕರುಣಿಸು ಎಂದು ಬೇಡಿಕೊಂಡಿದ್ದ ಖದೀಮ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ನಿಮ್ಮ ಎಸ್ ಬಿಐ ಉಳಿತಾಯ ಖಾತೆಯಿಂದ 147.5ರೂ. ಕಡಿತವಾಗಿದೆಯಾ? ಇದೇ ಕಾರಣಕ್ಕೆ ನೋಡಿ

ಹಣ ಸಂಪಾದನೆ‌ ಮಾಡಲು ತಂತ್ರ : ತುಮಕೂರು ಮೂಲದ ಕರಿಚಿತ್ತಪ್ಪ ಬಂಧಿತ ಆರೋಪಿಯಾಗಿದ್ದಾನೆ‌.‌ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯ ರಂಗನಾಥಪುರದಲ್ಲಿ ನವರತ್ನ ಬಾರ್ ನಲ್ಲಿ ಸಪ್ಲೈಯರ್ ಆಗಿ ಕೆಲಸ‌‌ ಮಾಡುತ್ತಿದ್ದನು. ಸುಲಭವಾಗಿ ಹೆಚ್ಚಿನ ಹಣ ಸಂಪಾದನೆ‌ ಮಾಡಲು ತಂತ್ರ ರೂಪಿಸಿದ ಆರೋಪಿಯು ಕಳ್ಳತನ ಮಾಡುವುದಕ್ಕೆ ಯೋಜನೆ ರೂಪಿಸಿದ್ದನು. ಇದಕ್ಕಾಗಿ ಹಗಲು ಹೊತ್ತಿನಲ್ಲಿಯೇ ಸೆಕ್ಯೂರಿಟಿ ಗಾರ್ಡ್‌ ಇಲ್ಲದ ಎಟಿಎಂ ಕೇಂದ್ರಗಳಿಗೆ ಹೋಗಿ ಕಳ್ಳತನ ಮಾಡುವುದನ್ನು ಕಾಯಕ ಮಾಡಿಕೊಂಡಿದ್ದನು. 

ಕಾವೇರಿಪುರ ಆ್ಯಕ್ಸಿಸ್ ಬ್ಯಾಂಕ್ ಎಟಿಎಂ: ಇದೇ‌ ರೀತಿ ಕಾಮಾಕ್ಷಿಪಾಳ್ಯದ ಕಾವೇರಿಪುರ ಜಯಲಕ್ಷ್ಮೀ ಕಾಂಪ್ಲೆಕ್ಸ್ ನಲ್ಲಿರುವ ಆ್ಯಕ್ಸಿಸ್ ಬ್ಯಾಂಕ್ ಎಟಿಎಂ ಗೆ ಕಳೆದ ಜನವರಿ 14 ರಂದು ರಾತ್ರಿ ಕುಡಿದ ಮತ್ತಿನಲ್ಲಿ ಹಣ ಕಳ್ಳತನ ಮಾಡಲು ಹೋಗಿದ್ದಾನೆ. ಈ ವೇಳೆ ಕಳ್ಳತನ ಮಾಡುವ ಮುನ್ನ ಸಿಸಿಟಿವಿ ಕ್ಯಾಮರ ಕಂಡು ಕೈ ಮುಗಿದು ಒಳ್ಳೆಯದು ಮಾಡು ಎಂದು ಬೇಡಿಕೊಂಡಿದ್ದಾನೆ. ನಂತರ ಹಣ ಕಳ್ಳತನ ಮಾಡಲು ಯತ್ನಿಸಿ ವಿಫಲನಾಗಿ ಬಂದ ದಾರಿಗೆ ಸುಂಕವಿಲ್ಲದಂತೆ ಹೋಗಿದ್ದಾನೆ‌‌‌. ಈ ಸಂಬಂಧ ಮಾರನೇ ಬ್ಯಾಂಕ್ ಆಡಳಿತ ಮಂಡಳಿ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿದ್ದಾರೆ.