ಡ್ರಗ್ಸ್ ನಶೆಯಲ್ಲಿ ಯುವಕನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿ ಸಿಸಿಟಿವಿ ಕ್ಯಾಮೆರಾಕ್ಕೆ ಹಾನಿ: ಇಬ್ಬರ ಸೆರೆ
ಇತ್ತೀಚೆಗೆ ಡ್ರಗ್ಸ್ ನಶೆಯಲ್ಲಿ ಯುವಕನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿ ಸಿಸಿಟಿವಿ ಕ್ಯಾಮೆರಾಗಳನ್ನು ಹಾನಿಗೊಳಿಸಿ ಗೂಂಡಾವರ್ತನೆ ತೋರಿದ್ದ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಡಿ.ಜೆ.ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು (ಅ.04): ಇತ್ತೀಚೆಗೆ ಡ್ರಗ್ಸ್ ನಶೆಯಲ್ಲಿ ಯುವಕನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿ ಸಿಸಿಟಿವಿ ಕ್ಯಾಮೆರಾಗಳನ್ನು ಹಾನಿಗೊಳಿಸಿ ಗೂಂಡಾವರ್ತನೆ ತೋರಿದ್ದ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಡಿ.ಜೆ.ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶಾಂಪುರದ ಸೈಯದ್ ಸಲಾದ್ ಮತ್ತು ಸಲ್ಮಾನ್ ಬಂಧಿತರು. ಈ ಹಲ್ಲೆ ಘಟನೆಯಲ್ಲಿ ಪಾಲ್ಗೊಂಡಿರುವ ಉಸ್ಮಾನ್ ಖಾನ್ ಸೇರಿದಂತೆ ಇನ್ನೂ ಕೆಲವರು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ.
ಆರೋಪಿಗಳು ಸೆ.30ರಂದು ಶಾಂಪುರದ ಮುನಿವೀರಪ್ಪ ಲೇಔಟ್‌ನ ಪಟೇಲಪ್ಪ ಕಾಂಪೌಂಡ್‌ನಲ್ಲಿರುವ ಗೋದಾಮಿನ ಬಳಿ ಅರುಣ್ ಕುಮಾರ್ ಮತ್ತು ಆತನ ತಂದೆ ಕಲ್ಯಾಣಿ ದೇವರ್ ಮೇಲೆ ಹಲ್ಲೆ ಮಾಡಿದ್ದರು. ಅಂತೆಯೇ ಗೋದಾಮಿನ ಸಿಸಿಟಿವಿ ಕ್ಯಾಮೆರಾ ಹಾಗೂ ಬಿಬಿಎಂಪಿ ಅಳವಡಿಸಿರುವ ಕ್ಯಾಮೆರಾಗಳಿಗೆ ಒಡೆದು ಹಾನಿಗೊಳಿಸಿ ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಘಟನೆ?: ದೂರುದಾರ ಅರುಣ್ ಕುಮಾರ್ ಮತ್ತು ಆತನ ತಂದೆ ಕಲ್ಯಾಣಿ ದೇವರ್ ಸೆ.30ರಂದು ಮಧ್ಯಾಹ್ನ ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದರು. ಹೊರಗೆ ಜೋರಾದ ಶಬ್ಧ ಕೇಳಿದ ಹಿನ್ನೆಲೆಯಲ್ಲಿ ಅರುಣ್ ಹೊರಗೆ ಬಂದು ನೋಡಿದಾಗ, ಐದಾರು ಮಂದಿ ಯುವಕರು ಗೋದಾಮಿನ ಎದುರು ನಿಂತಿದ್ದು, ಈ ಪೈಕಿ ಓರ್ವ ಅರುಣ್‌ನ ದ್ವಿಚಕ್ರ ವಾಹನವನ್ನು ಬೇರೆ ಕೀನಿಂದ ಸ್ಟಾರ್ಟ್ ಮಾಡಿ ತೆಗೆದುಕೊಂಡಲು ಹೋಗಲು ಪ್ರಯತ್ನಿಸಿದ್ದಾನೆ. ಇದನ್ನು ನೋಡಿದ ಅರುಣ್, ಆತನನ್ನು ತಡೆದು, ಪ್ರಶ್ನೆ ಮಾಡಿದ್ದಕ್ಕೆ ಆರೋಪಿಗಳು ಏಕಾಏಕಿ ಅರುಣ್ ಮೇಲೆ ಹಲ್ಲೆ ಮಾಡಿದ್ದಾರೆ.
ಇನ್ನೊಂದು ವರ್ಷದವರೆಗೂ ಚಾಮುಂಡೇಶ್ವರಿ ಆಶೀರ್ವಾದ ಇರಲಿ: ಸಿದ್ದರಾಮಯ್ಯ ಅಚ್ಚರಿಯ ಹೇಳಿಕೆ!
ರಾತ್ರಿ ಮತ್ತೆ ಬಂದು ಗಲಾಟೆ ಮಾಡಿ ಸಿಸಿಟಿವಿಗೆ ಹಾನಿ: ಗೋದಾಮಿನಿಂದ ಹೊರಗೆ ಬಂದು ಮಗನ ಮೇಲಿನ ಹಲ್ಲೆ ಬಗ್ಗೆ ಪ್ರಶ್ನೆ ಮಾಡಿದ ಕಲ್ಯಾಣಿ ದೇವರ್ ಮೇಲೂ ಆರೋಪಿಗಳು ಹಲ್ಲೆ ಮಾಡಿ, ಗೋದಾಮಿನ ಹೊರಗೆ ಇದ್ದ ಸಿಸಿಟಿವಿ ಕ್ಯಾಮೆರಾಗಳನ್ನು ರಾಡ್‌ಗಳಿಂದ ಒಡೆದು ಹಾನಿಗೊಳಿಸಿ ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ. ರಾತ್ರಿ ಮತ್ತೆ 9.30ಕ್ಕೆ ಗೋದಾಮಿನ ಬಳಿ ಬಂದಿರುವ ಆರೋಪಿಗಳು, ನಮ್ಮ ವಿರುದ್ಧ ಪೊಲೀಸರಿಗೆ ದೂರು ನೀಡುತ್ತೀರಾ ಎಂದು ಗಲಾಟೆ ಮಾಡಿ ಗೋದಾಮಿನ ಬಳಿ ಬಿಬಿಎಂಪಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಹಾನಿಗೊಳಿಸಿ ಪ್ರಾಣ ಬೆದರಿಕೆ ಹಾಕಿ ಪರಾರಿಯಾಗಿದ್ದರು.