ಬೆಳಗಾವಿ: ಯುವತಿ ಕುಟುಂಬಸ್ಥರಿಂದ ಯುವಕನ ತಂದೆ ಮೇಲೆ ಹಲ್ಲೆ
ರಮೇಶ ಸಾವಳೆ ಹಲ್ಲೆಗೆ ಒಳಗಾಗಿರುವ ವ್ಯಕ್ತಿ. ಹುಡುಗಿ ತಂದೆ ಸಂಜಯ್, ವಿಜಯ್, ನಿಖಿಲ್, ಚಂದಾ, ದೀಪಕ್, ವಿಜಯ್, ವಿಶಾಲ್, ಸದ್ದಾಂ ಸೇರಿಕೊಂಡು ನಡುಬೀದಿಯಲ್ಲಿ ರಮೇಶ ಸಾವಳೆ ಮೇಲೆ ಹಲ್ಲೆ ನಡೆಸಿದ್ದು, ಇವರ ವಿರುದ್ಧವೇ ಪ್ರಕರಣ ದಾಖಲಾಗಿದೆ.
ಬೆಳಗಾವಿ(ಡಿ.21): ಪುತ್ರ ಮಾಡಿದ ಎಡವಟ್ಟಿನಿಂದ ತಾಯಿಯನ್ನು ವಿವಸ್ತ್ರಗೊಳಿಸಿ, ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿರುವ ಘಟನೆ ಇನ್ನೂ ಹಸಿರಿರುವಾಗಲೇ, ಮತ್ತೊಂದು ಅಮಾನವೀಯ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ. ಸದ್ಯ ಯುವತಿಯ ಮನೆಯವರು ಯುವಕನ ತಂದೆಯನ್ನು ನಡುಬೀದಿಯಲ್ಲಿ ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ 8 ಜನರ ವಿರುದ್ಧ ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ನಿವಾಸಿ ರಮೇಶ ಸಾವಳೆ ಹಲ್ಲೆಗೆ ಒಳಗಾಗಿರುವ ವ್ಯಕ್ತಿ. ಹುಡುಗಿ ತಂದೆ ಸಂಜಯ್, ವಿಜಯ್, ನಿಖಿಲ್, ಚಂದಾ, ದೀಪಕ್, ವಿಜಯ್, ವಿಶಾಲ್, ಸದ್ದಾಂ ಸೇರಿಕೊಂಡು ನಡುಬೀದಿಯಲ್ಲಿ ರಮೇಶ ಸಾವಳೆ ಮೇಲೆ ಹಲ್ಲೆ ನಡೆಸಿದ್ದು, ಇವರ ವಿರುದ್ಧವೇ ಪ್ರಕರಣ ದಾಖಲಾಗಿದೆ. ಬೆಳಗಾವಿ ಮೂಲದ ಪ್ರತೀಕ ಸಾವಳೆ ಎಂಬಾತ ಮಹಾರಾಷ್ಟ್ರದ ಪುಣೆಯ ಜಳಗಾಂವದ ಅಕ್ಷತಾ ಎಂಬ ಯುವತಿಯನ್ನು ಪ್ರೀತಿಸಿ ವಿವಾಹವಾಗಿದ್ದನು. ಈ ವಿಷಯವಾಗಿ ಎರಡು ಕುಟುಂಬಸ್ಥರು ಜಳಗಾಂವ ಪೊಲೀಸ್ ಠಾಣೆಯ ಮೆಟ್ಟಿಲೇರಿ ಸಂಧಾನದ ಮೂಲಕ ವಿವಾದ ಬಗೆಹರಿಸಿಕೊಂಡಿದ್ದರು ಎನ್ನಲಾಗಿದೆ.
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ: ಎನ್‌ಎಚ್‌ಆರ್‌ಸಿ ಸಲಹೆ ಮೇರೆಗೆ ಮುಂದಿನ ಕ್ರಮ, ಸಚಿವ ಜಾರಕಿಹೊಳಿ
ಬಳಿಕ ಯುವಕ ಪ್ರತೀಕ ಸಾವಳೆ, ಪ್ರೀತಿಸಿ ವಿವಾಹವಾಗಿದ್ದ ಅಕ್ಷತಾಳೊಂದಿಗೆ ಕೆಲವು ತಿಂಗಳ ಹಿಂದಷ್ಟೇ ಬೆಳಗಾವಿಗೆ ಬಂದು ತಮ್ಮ ಕುಟುಂಬಸ್ಥರೊಂದಿಗೆ ವಾಸವಾಗಿದ್ದನು. ಕಳೆದ ಎರಡು ದಿನಗಳ ಹಿಂದಷ್ಟೇ ಯುವಕ ಪ್ರತೀಕ ತಂದೆ ರಮೇಶ ಸಾವಳೆಗೆ ಫೋನ್ ಮಾಡಿದ ಯುವತಿ ತಂದೆ, ಮಗಳನ್ನು ಬಹಳ ದಿನದಿಂದ ನೋಡಿಲ್ಲ, ಆದ್ದರಿಂದ ಮಗಳನ್ನು ನೋಡಿ ವಿಚಾರಿಸಿಕೊಂಡು ಹೋಗುವುದಾಗಿ ಹೇಳಿ, ವಾಟ್ಸಾಪ್ ಮೂಲಕ ಮನೆಯ ವಿಳಾಸ ಮತ್ತು ಸ್ಥಳವನ್ನು ಪಡೆದುಕೊಂಡಿದ್ದನು.
ಯುವತಿ ಕುಟುಂಬಸ್ಥರಿಂದ ಗಲಾಟೆ, ಹಲ್ಲೆ:
ನಂತರ ಮಗಳ ಮನೆಗೆ ಯುವತಿಯ ಕುಟುಂಬಸ್ಥರು ಬರುತ್ತಿದ್ದಂತೆ ಯುವತಿ ಅಕ್ಷತಾ ಮನೆಯಿಂದ ಹೊರಗೆ ಹೋಗಿದ್ದಳು. ಇದರಿಂದಾಗಿ ಅಸಮಾಧಾನಗೊಂಡ ಯುವತಿ ಮನೆಯವರು ನಮ್ಮ ಮಗಳನ್ನು ನಮಗೆ ಭೇಟಿ ಮಾಡಿಸದೇ ಎಲ್ಲಿಯೂ ಬಚ್ಚಿಟ್ಟಿದ್ದಿರಿ ಎಂದು ಜಗಳ ಆರಂಭಿಸಿದ್ದಾರೆ.
ಈ ಎರಡು ಕುಟುಂಬಸ್ಥರ ನಡುವೆ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿದ್ದರಿಂದ ಯುವತಿ ಮನೆಯವರು ಯುವಕನ ತಂದೆ ರಮೇಶ ಸಾವಳೆ ಮೇಲೆ ಹಲ್ಲೆ ಮಾಡಿದ್ದಾರೆ. ಅಷ್ಟಕ್ಕೆ ಸುಮ್ಮನಾಗದೇ ನಡು ಬೀದಿಯಲ್ಲಿ ತಂದು ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ತಂದೆಯ ರಕ್ಷಣೆಗೆ ಹೋಗಿದ್ದ ಮತ್ತೋರ್ವ ಪುತ್ರನ ಮೇಲೂ ಹಲ್ಲೆ ಮಾಡಿದ್ದಾರೆ. ನಂತರ ಹಲ್ಲೆಗೊಳಗಾದ ತಂದೆ ಮತ್ತು ಮಗ ಉದ್ಯಮಬಾಗ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಈ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಯುವತಿ ಮನೆಯ 8 ಜನರ ವಿರುದ್ಧ ಪ್ರರಕಣ ದಾಖಲಿಸಿದ್ದಾರೆ.