ಬೆಂಗಳೂರು: ಜೂಮ್ ಕಾರನ್ನೇ ಅಡ ಇಟ್ಟು ಸಾಲ ಪಡೆದ ಭೂಪ..!
ನಕಲಿ ದಾಖಲೆ ಸೃಷ್ಟಿಸಿ ಕಾರು ಅಡ ಇಟ್ಟು ಸಾಲ ಪಡೆದಿದ್ದ, ಸಾರ್ವಜನಿಕರಿಗೂ ಬಾಡಿಗೆ ನೆಪದಲ್ಲಿ ಕಾರು ಪಡೆದು ವಂಚನೆ, ಓರ್ವನ ಬಂಧನ
ಬೆಂಗಳೂರು(ಜೂ.25): ಬಾಡಿಗೆ ನೆಪದಲ್ಲಿ ಕಾರುಗಳನ್ನು ಮಾಲಿಕರಿಂದ ಪಡೆದು ಬಳಿಕ ನಕಲಿ ದಾಖಲೆ ಸೃಷ್ಟಿಸಿ ಅವುಗಳನ್ನು ಅಡಮಾನವಿಟ್ಟು ವಂಚಿಸುತ್ತಿದ್ದ ಕ್ಯಾಬ್ ಚಾಲಕನೊಬ್ಬ ತಿಲಕನಗರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ರಾಜರಾಜೇಶ್ವರಿ ನಗರದ ಕೃಷ್ಣ ಗಾರ್ಡನ್ ನಿವಾಸಿ ವೇದಾಂತ್ ಬಂಧಿತನಾಗಿದ್ದು, ಆರೋಪಿಯಿಂದ .78.70 ಲಕ್ಷ ಮೌಲ್ಯದ 6 ಕಾರುಗಳು, ಬೈಕ್ ಹಾಗೂ ನಕಲಿ ದಾಖಲಾತಿಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಜಯನಗರದ 9ನೇ ಹಂತದ ನಿವಾಸಿ ದಿಲೀಪ್ ಅವರಿಗೆ ಕಾರನ್ನು ಅಡವಿಟ್ಟು ವೇದಾಂತ್ ಹಣ ಪಡೆದಿದ್ದ. ಆದರೆ ಆ ಕಾರನ್ನು ತಮಗೆ ಸೇರಿದ್ದು ಎಂದು ಜೂಮ್ ಕಂಪನಿ ಜಪ್ತಿ ಮಾಡಿ ತೆಗೆದುಕೊಂಡು ಹೋಗಿತ್ತು. ಆಗ ತನ್ನ ಬಳಿ ಅಡಮಾನವಿಡುವಾಗ ವೇದಾಂತ್ ನೀಡಿದ್ದ ದಾಖಲೆಗಳನ್ನು ದಿಲೀಪ್ ಪರಿಶೀಲಿಸಿದಾಗ ನಕಲಿ ಎಂಬುದು ಗೊತ್ತಾಗಿದೆ. ಈ ಬಗ್ಗೆ ದಿಲೀಪ್ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಇನ್‌ಸ್ಪೆಕ್ಟರ್ ಬಿ.ಶಂಕರಾಚಾರ್ ತಂಡ ಬಂಧಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Fraud: ಹಣ ಡಬ್ಲಿಂಗ್ ಕಂಪನಿಗೆ ಲಕ್ಷಾಂತರ ಹೂಡಿಕೆ: ಮೋಸಕ್ಕೊಳಗಾದ ಶಿಕ್ಷಕ ಆತ್ಮಹತ್ಯೆ
ಹಾಸನ ಜಿಲ್ಲೆಯ ವೇದಾಂತ್, ಆರ್.ಆರ್.ನಗರದಲ್ಲಿ ತನ್ನ ಪತ್ನಿ ಹಾಗೂ ಮಗು ಜತೆ ನೆಲೆಸಿದ್ದ. ಮೊದಲು ಕ್ಯಾಬ್ ಚಾಲಕನಾಗಿದ್ದ ಆತ, ಸುಲಭವಾಗಿ ಹಣ ಸಂಪಾದನೆಗೆ ಅಡ್ಡದಾರಿ ತುಳಿದಿದ್ದಾನೆ. ತಮ್ಮ ಪರಿಚಿತರು ಹಾಗೂ ಜೂಮ್ ಕಂಪನಿಯಿಂದ ಕಾರುಗಳನ್ನು ಬಾಡಿಗೆ ನೆಪದಲ್ಲಿ ಪಡೆಯುತ್ತಿದ್ದ ಆರೋಪಿ, ಇದೇ ರೀತಿ ಜೂಮ್ ಕಂಪನಿಯಿಂದ ಪೊಲೀಸರಿಗೆ ಸಂಚಾರ ನಿಯಮ ಉಲ್ಲಂಘನೆ ಸಂಬಂಧ ಕಾರಿನ ದಾಖಲೆ ನೀಡಬೇಕಿದೆ ಎಂದು ಹೇಳಿ ದಾಖಲೆ ಪಡೆದುಕೊಳ್ಳುತ್ತಿದ್ದ. ಬಳಿಕ ನಕಲಿ ದಾಖಲೆ ಸೃಷ್ಟಿಸುತ್ತಿದ್ದ. ಫೈನಾನ್ಸಿಯರ್‌ಗಳ ಬಳಿ ನಕಲಿ ದಾಖಲೆ ಸೃಷ್ಟಿಸಿ ಅಡಮಾನವಿಟ್ಟು ಹಣ ಪಡೆದು ವಂಚಿಸುತ್ತಿದ್ದ. ಇದೇ ರೀತಿ ಜೂಮ್ ಕಂಪನಿಯ ಕಾರನ್ನು ಜಯನಗರದ ದಿಲೀಪ್ ಅವರ ಅಡಮಾನವಿಟ್ಟು .25 ಸಾವಿರ ಪಡೆದಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.
ಮೊದಲು ಹಣ ಕೊಟ್ಟು ಟೋಪಿ
ಬಾಡಿಗೆ ಪಡೆದಾಗ ಆರಂಭದಲ್ಲಿ 5-10 ಸಾವಿರ ರು. ನೀಡಿ ಮಾಲಿಕರಿಗೆ ವೇದಾಂತ್ ವಿಶ್ವಾಸ ಮೂಡಿಸುತ್ತಿದ್ದ. ಬಳಿಕ ಕಾರಿನ ಆರ್‌ಸಿ ಹಾಗೂ ವಿಮೆ ದಾಖಲೆಗಳ ಜೆರಾಕ್ಸ್ ಪ್ರತಿ ಪಡೆದು ಬಳಿಕ ಅವುಗಳನ್ನು ಬಳಸಿಕೊಂಡು ವೇದಾಂತ್ ನಕಲಿ ದಾಖಲೆ ಸೃಷ್ಟಿಸುತ್ತಿದ್ದ. ಈ ದಾಖಲೆಗಳನ್ನು ಉಪಯೋಗಿಸಿ ಆ ಕಾರುಗಳನ್ನು .25 ಸಾವಿರದಿಂದ .50 ಸಾವಿರದವರೆಗೆ ಅಡಮಾನವಿಡುತ್ತಿದ್ದ. ಕಾರು ಮರಳಿಸುವಂತೆ ಮಾಲಿಕರು ಕೇಳಿದರೆ ಏನೇನೂ ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಿಧಿಗಾಗಿ 15 ಅಡಿ ಅಗಲ, 25 ಅಡಿ ಆಳ ಗುಂಡಿ ತೋಡಿದ ದುಷ್ಕರ್ಮಿಗಳು!
ಮೋಸವಾಗಿದ್ದರೆ ದೂರು ಕೊಡಿ
ಬಾಡಿಗೆ ನೆಪದಲ್ಲಿ ಕಾರು ಪಡೆದು ವೇದಾಂತ್‌ನಿಂದ ವಂಚನೆಗೆ ಒಳಗಾಗಿದ್ದರೆ ತಿಲಕನಗರ ಠಾಣೆ ಪೊಲೀಸರನ್ನು ಸಂಪರ್ಕಿಸುವಂತೆ ಸಾರ್ವಜನಿಕರಿಗೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ದೂ.080-22942571 ಅಥವಾ ಇನ್‌ಸ್ಪೆಕ್ಟರ್ ಮೊ.94808 01621
ವಂಚನೆ ಹೇಗೆ?
*ಬಾಡಿಗೆ ನೆಪದಲ್ಲಿ ಜೂಮ್ ಕಾರುಗಳನ್ನು ಪಡೆಯುತ್ತಿದ್ದ
*ಟ್ರಾಫಿಕ್ ನಿಯಮ ಉಲ್ಲಂಘನೆ ಆಗಿದೆ ಹೇಳುತ್ತಿದ್ದ ವಂಚಕ
*ಕಂಪನಿಯಿಂದ ಅಸಲಿ ದಾಖಲೆ ಪಡೆದು ನಕಲಿ ದಾಖಲೆ ಸೃಷ್ಟಿ
*ನಕಲಿ ದಾಖಲೆ ತೋರಿಸಿ ಕಾರನ್ನೇ ಅಡ ಇಡುತ್ತಿದ್ದ ಕಿರಾತಕ