ಆನೇಕಲ್ ತಾಲೂಕಿನಲ್ಲಿ ಮನೆಯೊಂದರಲ್ಲಿ 240 ಗ್ರಾಂ ಚಿನ್ನಾಭರಣ ಕಳ್ಳತನವಾಗಿದೆ. ಮಗಳ ಮದುವೆಗೆಂದು ಸಂಗ್ರಹಿಸಿದ್ದ ಚಿನ್ನ ಕಳೆದುಕೊಂಡ ಕುಟುಂಬದವರು ಕಂಗಾಲಾಗಿದ್ದಾರೆ. ಚಿನ್ನದ ಕೊರತೆಯಿಂದ ಮದುವೆಯನ್ನು ಮುಂದೂಡಲಾಗಿದೆ.
ಬೆಂಗಳೂರು ಹೊರ ವಲಯದ ಆನೇಕಲ್ ತಾಲೂಕಿನ ಸೂರ್ಯನಗರ ಠಾಣಾ ವ್ಯಾಪ್ತಿಯ ಆಡೆಸೊಣ್ಣಟ್ಟಿ ಗ್ರಾಮದಲ್ಲಿ ಕಳ್ಳತನದ ಪ್ರಕರಣ ಬೆಳಕಿಗೆ ಬಂದಿದೆ. ಮೇ ತಿಂಗಳ 2ನೇ ತಾರೀಖು ರಾತ್ರಿ, ಕುಟುಂಬವೊಂದು ಅಜ್ಜಿ ತಿಥಿ ಕಾರ್ಯದಲ್ಲಿ ಪಾಲ್ಗೊಳ್ಳಲು ಹಳೆ ಮನೆಗೆ ಹೋಗಿದ್ದಾಗ, ಅದೇ ಸಮಯದಲ್ಲಿ ಕಳ್ಳರು ಹೊಸ ಮನೆಯಲ್ಲಿ ಕೈಚಳಕ ತೋರಿದ್ದಾರೆ. ಕಳ್ಳರು ಮನೆಯ ಬಾಗಿಲು ಮುರಿದು ಒಳ ಪ್ರವೇಶಿಸಿ, ಮಗಳ ಮದುವೆಗೆ ಸಂಗ್ರಹಿಸಲಾಗಿದ್ದ 240 ಗ್ರಾಂ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ಪ್ರೇಮ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಸೂರ್ಯನಗರ ಪೊಲೀಸರು ತನಿಖೆ ಆರಂಭಿಸಿ, ಇದೀಗ ಒಂದು ತಿಂಗಳ ಬಳಿಕ ತಮಿಳುನಾಡು ಮೂಲದ ಮೂವರು ಆರೋಪಿಗಳಾದ ಸುಧಾಕರ್ (37), ಆಜಯ್ (36) ಹಾಗೂ ಅರವಿಂದ್‌ರನ್ನು ಬಂಧಿಸಿದ್ದಾರೆ. ಆರೋಪಿ ತಂಡ 9 ಮನೆಗಳಲ್ಲಿ ಕಳವು ನಡೆಸಿದ್ದು, ಒಟ್ಟು 1 ಕಿಲೋಗ್ರಾಮಕ್ಕಿಂತ ಹೆಚ್ಚಿನ ಚಿನ್ನ ಕದ್ದಿರುವುದಾಗಿ ಒಪ್ಪಿಕೊಂಡಿದ್ದಾರೆ. ಆದರೆ ಇದೀಗ ತನಿಖಾಧಿಕಾರಿಗಳಿಗೆ 290 ಗ್ರಾಂ ಚಿನ್ನವಷ್ಟೆ ಮರಳಿ ನೀಡಲು ಸಾಧ್ಯವಾಗಿದೆ.
ಈ ಪ್ರಕರಣದಲ್ಲಿ ತಮ್ಮ ಮಗಳ ಮದುವೆಗಾಗಿ ಸಂಗ್ರಹಿಸಿದ್ದ ಒಡವೆಗಳನ್ನು ಕಳೆದುಕೊಂಡ ಮಹಿಳೆ ಪ್ರೇಮ, ಕಣ್ಣೀರಿನಿಂದ ದುಃಖ ತೋಡಿಕೊಂಡಿದ್ದು, ಮದುವೆ ನಿಶ್ಚಯವಾದಾಗ ಸಂಭ್ರಮಗೊಂಡಿದ್ದೆವು, ಚಿನ್ನದ ಕೊರತೆಯಿಂದಾಗಿ ಮದುವೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಅದಷ್ಟು ಬೇಗ ಚಿನ್ನವನ್ನು ಮರಳಿ ನೀಡಿ ನನ್ನ ಮಗುವಿನ ಮದುವೆ ಮತ್ತೆ ನಡೆಯುವಂತೆ ದಯವಿಟ್ಟು ಸಹಾಯ ಮಾಡಿ ಎಂದು ಪ್ರೇಮ ಅವರು ಪೊಲೀಸರಿಗೆ ಕಣ್ಣೀರಿಟ್ಟು ಮನವಿ ಮಾಡಿದ್ದಾರೆ.
ಬೆಂಗಳೂರು ನಗರದಲ್ಲಿ ನೀರಿನ ಸಂಪ್ ಮುಚ್ಚಳ ಕಳ್ಳತನ!
ಬೆಂಗಳೂರು ನಗರದಲ್ಲಿ ಇತ್ತೀಚೆಗಾಗಿ ಸಣ್ಣಪುಟ್ಟ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವುದು ನಾಗರಿಕರಲ್ಲಿ ಆತಂಕ ಹುಟ್ಟಿಸಿದೆ. ಪ್ರತಿದಿನವೂ ಸೈಕಲ್, ಸಂಪ್ ಮುಚ್ಚಳಗಳು (ಕ್ಯಾಪ್), ವಾಹನದ ಭಾಗಗಳು ಕಳೆದು ಹೋಗುತ್ತಿರುವ ಹಗರಣಗಳು ದಾಖಲಾಗುತ್ತಿವೆ.
ಈ ರೀತಿಯ ಸಣ್ಣ ಕಳ್ಳತನದ ಬಗ್ಗೆ ಸಾರ್ವಜನಿಕರು ದೂರು ನೀಡುತ್ತಿದ್ದರೂ, ಅಧಿಕಾರಿಗಳಿಂದ ಯಾವುದೇ ಮಾಹಿತಿ ಲಭಿಸುತ್ತಿಲ್ಲ ಎಂಬುದು ದೂರುದಾರರ ಅಳಲು. ಮನೆಯ ಗೇಟು ಸಮೀಪದಲ್ಲಿರುವ ಸಂಪ್‌ನ ಲೋಹದ ಮುಚ್ಚಳಗಳು ಕಳ್ಳರು ಎತ್ತಿ ಕೊಂಡು ಹೋಗುತ್ತಿದ್ದಾರೆ. ಕೋರಮಂಗಲ 5ನೇ ಹಂತದಲ್ಲಿ ನಡೆದ ಇತ್ತೀಚಿನ ಘಟನೆಯು ಇದಕ್ಕೆ ಸಾಕ್ಷಿಯಾಗಿದೆ. ಅಲ್ಲಿನ ನಿವಾಸಿಯೊಬ್ಬಳ ಮನೆಯಲ್ಲಿ ಮಹಿಳೆ ಇಬ್ಬರೇ ಇದ್ದಾಗ, ಬೈಕ್‌ನಲ್ಲಿ ಬಂದ ಖದೀಮರು ಸಂಪ್‌ನ ಕಬ್ಬಿಣದ ಕ್ಯಾಪ್ ಅನ್ನು ಕದ್ದೊಯ್ದಿದ್ದಾರೆ.
ಇದೇ ರೀತಿಯ ಇನ್ನೊಂದು ಘಟನೆ, ಮುಖ್ಯಮಂತ್ರಿ ನಿವಾಸದಿಂದ ಕೆಲವೇ ಕೆಲವು ಮೀಟರ್ ದೂರದಲ್ಲಿ ನಡೆದಿರುವುದು, ಕಳ್ಳರು ಈಗ ಪೊಲೀಸ್ ನಿಗಾವನ್ನೂ ಲೆಕ್ಕಹಾಕದೆ ಕೃತ್ಯಗಳನ್ನು ನಡೆಸುತ್ತಿದ್ದಾರೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.
"ಸಂಪ್ ಮುಚ್ಚಳ ಕದ್ರು ಪೊಲೀಸರ ತಲೆಕೆಡಿಸಿಕೊಳ್ಳುವುದಿಲ್ಲ ಅನ್ನೋ ಧೈರ್ಯ ಕಳ್ಳರಿಗೆ ಬಂದಿದೆ" ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇಂಥ ಕಳ್ಳತನಗಳು ಸಣ್ಣದ್ದೆನಿಸಿದರೂ, ನಗರದಲ್ಲಿ ಸಾರ್ವಜನಿಕ ಆಸ್ತಿ ಮತ್ತು ಸ್ವಾಸ್ಥ್ಯದ ಮೇಲೆ ತೀವ್ರವಾದ ಪರಿಣಾಮ ಬೀರುತ್ತಿವೆ.
ನಿವಾಸಿಗಳು ಈಗ ಮುಚ್ಚಳಗಳ ರಕ್ಷಣೆಗಾಗಿ ಬೀಗ ಹಾಕುವುದು, ಸೆಕ್ಯುರಿಟಿ ಕ್ಯಾಮೆರಾ ಅಳವಡಿಸುವುದು, ಅಥವಾ ಮುಚ್ಚಳಗಳನ್ನು ಪ್ಲಾಸ್ಟಿಕ್ ಅಥವಾ ಕಬ್ಬಿಣ ಮಿಶ್ರಿತ ಲಘು ತೂಕದ ವಸ್ತುಗಳಿಂದ ಮಾಡುತ್ತಿದ್ದಾರೆ.
