ಬೆಂಗಳೂರು(ಫೆ.20): ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ರವಿ ಪೂಜಾರಿಯನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ವಿಚಾರಣೆ ನಡೆಸಲು ಕೇರಳದ ಪೊಲೀಸರಿಗೆ ನಗರದ ಸೆಷನ್ಸ್‌ ನ್ಯಾಯಾಲಯ ಅನುಮತಿ ನೀಡಿದೆ.

ಕೇರಳದ ಬ್ಯೂಟಿ ಪಾರ್ಲರ್‌ನಲ್ಲಿ ಮಹಿಳೆಯೊಬ್ಬರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈದ ಪ್ರಕರಣ ಸಂಬಂಧ ರವಿ ಪೂಜಾರಿಯನ್ನು ವಶಕ್ಕೆ ಪಡೆಯಲು ಕೋರಿ ಎರ್ನಾಕುಲಂ ಸಿಸಿಬಿ ವಿಭಾಗದ ಇನ್‌ಸ್ಪೆಕ್ಟರ್‌ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನಗರದ 65ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ, ಕೇರಳ ಸಿಸಿಬಿ ತನಿಖಾಧಿಕಾರಿಯು ರವಿ ಪೂಜಾರಿಯನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಚಾರಣೆ ನಡೆಸಬೇಕು. ನಂತರ ವರದಿ ಸಿದ್ಧಪಡಿಸಿ ಎರ್ನಾಕುಲಂನ ಮ್ಯಾಜಿಸ್ಪ್ರೇಟ್‌ ಕೊರ್ಟ್‌ಗೆ ಸಲ್ಲಿಸಬಹುದು ಎಂದು ನಿರ್ದೇಶಿಸಿದೆ.

ತರಕಾರಿ ಮಾರುತ್ತಿದ್ದ ಭೂಗತ ಪಾತಕಿ ರವಿ ಪೂಜಾರಿ ಸಹಚರನ ಬಂಧನ!

ಕೇರಳದ ಎರ್ನಾಕುಲಂ ಗ್ರಾಮದ ನೈಲ್‌ ಆರ್ಟಿಸ್ಟ್ರಿ ಬ್ಯೂಟಿ ಪಾರ್ಲರ್‌ಗೆ ನುಗ್ಗಿ ಮಹಿಳೆಯೊಬ್ಬರ ಮೇಲೆ ಗುಂಡಿ ದಾಳಿ ನಡೆಸಿ ಹತ್ಯೆಗೈದ ಆರೋಪ ಸಂಬಂಧ ಎರ್ನಾಕುಲಂ ದಕ್ಷಿಣ ಪೊಲೀಸ್‌ ಠಾಣೆಯಲ್ಲಿ 2018ರ ಡಿ.15ರಂದು ಪ್ರಕರಣ ದಾಖಲಾಗಿತ್ತು. ಎರ್ನಾಕುಲಂ ಸಿಸಿಬಿ ಪೊಲೀಸರು ತನಿಖೆ ನಡೆಸಿ ರವಿ ಪೂಜಾರಿ ವಿರುದ್ಧ ಸ್ಥಳೀಯ ಮ್ಯಾಜಿಸ್ಪ್ರೇಟ್‌ ಕೋರ್ಟ್‌ಗೆ 2019ರ ಮಾ.3ರಂದು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸದ್ಯ ರವಿ ಪೂಜಾರಿ ಪರಪ್ಪನ ಅಗ್ರಹಾರದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ಆತನನ್ನು ವಶಕ್ಕೆ ಪಡೆದು ಎರ್ನಾಕುಲಂ ಮ್ಯಾಜಿಸ್ಪ್ರೇಟ್‌ ಕೋರ್ಟ್‌ ಮುಂದೆ ಹಾಜರುಪಡಿಸಲು ಅನುಮತಿ ನೀಡುವಂತೆ ಕೋರಿ ಸೆಷನ್ಸ್‌ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು.