Asianet Suvarna News Asianet Suvarna News

ಬೆಂಗಳೂರು: ಆರ್ಕಿಡ್ಸ್‌ ವಿರುದ್ಧ ಸಿಬಿಎಸ್‌ಇ ವಂಚನೆ ಆರೋಪ..!

ಆರ್ಕಿಡ್‌ ಶಾಲೆಯ ವಿರುದ್ಧ ನಿಯಮ ಉಲ್ಲಂಘಟನೆಯ ಆರೋಪ ಇದೇ ಮೊದಲಲ್ಲ. ಈ ಹಿಂದೆ ಕೂಡ ಎರಡು ಬಾರಿ ಸಿಬಿಎಸ್‌ಇ ವಿಭಾಗಕ್ಕೆ ಕಾನೂನು ಬಾಹಿರವಾಗಿ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಂಡಿರುವ ಬಗ್ಗೆ ಆಡಳಿತ ಮಂಡಳಿಗೆ ಸಮನ್ಸ್‌ ನೀಡಲಾಗಿತ್ತು. 

Alleges CBSE Fraud Against Orchids International School in Bengaluru grg
Author
First Published Jan 25, 2023, 10:46 AM IST

ಬೆಂಗಳೂರು(ಜ.25):  ಸಿಬಿಎಸ್‌ಇ ಮಾನ್ಯತೆ ಇಲ್ಲದಿದ್ದರೂ ಸುಳ್ಳು ಮಾಹಿತಿ ನೀಡಿ 5 ರಿಂದ 8ನೇ ತರಗತಿಗೆ ತಮ್ಮ ಮಕ್ಕಳನ್ನು ದಾಖಲಾತಿ ಮಾಡಿಕೊಂಡಿರುವುದಾಗಿ ಆರೋಪಿಸಿ ನಾಗರಬಾವಿಯ ಆರ್ಕಿಡ್‌ ಇಂಟರ್‌ ನ್ಯಾಷನಲ್‌ ಶಾಲೆಯ ವಿರುದ್ಧ ಮಂಗಳವಾರ ನೂರಾರು ಪೋಷಕರು ಶಾಲೆಯ ಬಳಿ ಜಮಾಯಿಸಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಸುಳ್ಳು ಮಾಹಿತಿ ನೀಡಿ ವಂಚಿಸಿರುವ ಆರ್ಕಿಡ್‌ ಶಾಲೆಯ ಆಡಳಿತ ಮಂಡಳಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು, ಶಾಲೆಯವರು ನಮ್ಮಿಂದ ಪಡೆದಿರುವ ಶುಲ್ಕವನ್ನು ಮರುಪಾವತಿ ಮಾಡಿಸಿ ನ್ಯಾಯ ಕೊಡಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿ ಪೋಷಕರು ಪ್ರತಿಭಟನೆ ನಡೆಸಿದರು.

5 ರಿಂದ 8ನೇ ತರಗತಿಗೆ ಸಿಬಿಎಸ್‌ಇ ಮಾನ್ಯತೆ ಇಲ್ಲದಿದ್ದರೂ ಮಕ್ಕಳನ್ನು ದಾಖಲಿಸಿಕೊಂಡಿರುವ ಬಗ್ಗೆ ಪ್ರಶ್ನಿಸಿ ಆರ್ಕಿಡ್ಸ್‌ ಇಂಟರ್‌ ನ್ಯಾಷನಲ್‌ ಶಾಲೆಗೆ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಶಿಕ್ಷಣ ಇಲಾಖೆ ಕೆಲ ದಿನಗಳ ಹಿಂದೆಯೇ ನೋಟಿಸ್‌ ಜಾರಿ ಮಾಡಿದೆ. ಬೆಂಗಳೂರು ದಕ್ಷಿಣ (1) ನ ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಶೇಖರ್‌ ನೋಟಿಸ್‌ ನೀಡಿದ್ದಾರೆ. ಇದರಿಂದ ಎಚ್ಚೆತ್ತ ಶಾಲಾ ಆಡಳಿತ ಮಂಡಳಿ ಸಿಬಿಎಸ್‌ಇ ಪಠ್ಯಕ್ರಮದಡಿ ದಾಖಲಿಸಿ ಕೊಂಡಿದ್ದ ಮಕ್ಕಳಿಗೆ ರಾಜ್ಯ ಪಠ್ಯಕ್ರಮದಡಿ ಪರೀಕ್ಷೆಗಳನ್ನು ನಡೆಸುವುದಾಗಿ ಎರಡು ದಿನಗಳ ಹಿಂದೆ ಸುತ್ತೋಲೆ ಹೊರಡಿಸಿದೆ. ಇದರಿಂದ ಆಶ್ಚರ್ಯಗೊಂಡ ಪೋಷಕರು ಶಾಲೆಗೆ ಬಂದು ಪ್ರಶ್ನಿಸಲಾರಂಭಿಸಿದ್ದಾರೆ. ಆಗ ಶಾಲೆಯವರು ಸಿಬಿಎಸ್‌ಇ ಮಾನ್ಯತೆಯನ್ನೇ ಪಡೆಯದಿರುವುದು ಅರಿವಿಗೆ ಬಂದಿದ್ದು ಆಕ್ರೋಶಗೊಂಡ ಪೋಷಕರು ಶಾಲೆಯ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು.

ಅನುಮತಿ ಪಡೆಯದೆ ನಡೆಸುತ್ತಿದ್ದ ಮತ್ತೊಂದು Orchids International School ಗೂ ಬೀಗ!

ನಮ್ಮ ಮಕ್ಕಳನ್ನು ಶಾಲೆಗೆ ದಾಖಲಾತಿ ಮಾಡಿಕೊಳ್ಳುವಾಗ ಸಿಬಿಎಸ್‌ಇ ಮಾನ್ಯತೆ ಪಡೆದಿರುವುದಾಗಿ ಹೇಳಲಾಗಿತ್ತು. ಆದರೆ ಏಕಾಏಕಿ ಈಗ ಆಡಳಿತ ಮಂಡಳಿ ರಾಜ್ಯ ಪಠ್ಯಕ್ರಮದಡಿ ಪರೀಕ್ಷೆ ನಡೆಸುವುದಾಗಿ ಸುತ್ತೋಲೆ ಹೊರಡಿಸಿರುವುದು ಆಘಾತ ತಂದಿದೆ. ಸುಳ್ಳು ಮಾಹಿತಿ ನೀಡಿ ಪೋಷಕರನ್ನು ವಂಚಿಸಿರುವ ಶಾಲೆಯವರ ವಿರುದ್ಧ ಸರ್ಕಾರ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಸಿಬಿಎಸ್‌ಇ ಮಾನ್ಯತೆ ಹೆಸರಲ್ಲಿ ಪಡೆದಿರುವ ಲಕ್ಷಾಂತರ ರು. ಶುಲ್ಕವನ್ನು ವಾಪಸ್‌ ಕೊಡಿಸಬೇಕು ಎಂದು ಪ್ರತಿಭಟನಾ ನಿರತ ಪೋಷಕರು ಆಗ್ರಹಿಸಿದ್ದಾರೆ.

ಇಂದು ಡಿಡಿಪಿಐ ಶಾಲೆಗೆ ಭೇಟಿ

ಶಾಲಾ ಆಡಳಿತ ಮಂಡಳಿಯುವ ರಾಜ್ಯ ಪಠ್ಯಕ್ರಮದವನ್ನು ಬೋಧಿಸುತ್ತಿರುವುದಾಗಿ ಲಿಖಿತ ಮಾಹಿತಿ ನೀಡಿದೆ. ಆದರೆ, ಸಿಬಿಎಸ್‌ಇ ಮಾನ್ಯತೆ ಪಡೆದಿರುವುದಾಗಿ ಹೇಳಿ ಮಕ್ಕಳನ್ನು ದಾಖಲಿಸಿಕೊಂಡಿದೆ. ಪೋಷಕರ ದೂರಿನ ಮೇರೆಗೆ ನೋಟಿಸ್‌ ನೀಡಲಾಗಿದೆ. ಈ ಮಧ್ಯೆ, ಬುಧವಾರ ಬೆಂಗಳೂರು ದಕ್ಷಿಣ ವಿಭಾಗದ ಉಪ ನಿರ್ದೇಶಕ (ಡಿಡಿಪಿಐ) ಬೈಲಾಂಜನಪ್ಪ ಶಾಲೆಗೆ ಭೇಟಿ ನೀಡಲಿದ್ದಾರೆ. ಅವರು ನೀಡುವ ಉತ್ತರದ ಆಧಾರದ ಮೇಲೆ ಕಾನೂನೂ ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.

ನಿಯಮ ಉಲ್ಲಂಘನೆ ಇದೇ ಮೊದಲಲ್ಲ

ಆರ್ಕಿಡ್‌ ಶಾಲೆಯ ವಿರುದ್ಧ ನಿಯಮ ಉಲ್ಲಂಘಟನೆಯ ಆರೋಪ ಇದೇ ಮೊದಲಲ್ಲ. ಈ ಹಿಂದೆ ಕೂಡ ಎರಡು ಬಾರಿ ಸಿಬಿಎಸ್‌ಇ ವಿಭಾಗಕ್ಕೆ ಕಾನೂನು ಬಾಹಿರವಾಗಿ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಂಡಿರುವ ಬಗ್ಗೆ ಆಡಳಿತ ಮಂಡಳಿಗೆ ಸಮನ್ಸ್‌ ನೀಡಲಾಗಿತ್ತು. ಶಾಲೆಯ ಬಿಟಿಎಂ ಲೇಔಟ್‌ ಶಾಖೆಯಲ್ಲಿ ಪೋಷಕರ ಒಪ್ಪಿಗೆ ಇಲ್ಲದೆ ಪೂರ್ವ ಪ್ರಾಥಮಿಕ ಶಾಲಾ ಮಕ್ಕಳನ್ನು ಬೇರೆ ಕಟ್ಟಡಕ್ಕೆ ವರ್ಗಾವಣೆ ಮಾಡಿದ್ದರ ವಿರುದ್ಧ ಪೋಷಕರು ಪ್ರತಿಭಟನೆ ನಡೆಸಿದ್ದರಿಂದ ಇಲಾಖೆ ಮಧ್ಯ ಪ್ರವೇಶಿಸಿತ್ತು.

Follow Us:
Download App:
  • android
  • ios