ಕೆಐಎ ವಿಮಾನ ನಿಲ್ದಾಣದ ಕೇಂದ್ರದ ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು 38 ವರ್ಷದ ಲಿಬೇರಿಯನ್‌ ಮಹಿಳೆಯನ್ನು ಬಂಧಿಸಿ, 30 ಕೋಟಿ ರು. ಮೌಲ್ಯದ 2 ಕೆ.ಜಿ. ಕೊಕೇನ್‌ ಜಪ್ತಿ ಮಾಡಿದ್ದಾರೆ.

ಬೆಂಗಳೂರು(ಮೇ.30): ಆಫ್ರಿಕಾ ಖಂಡದ ಅಡಿಸ್‌ ಅಬಾಬಾದಿಂದ ವಿಮಾನದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎ)ಕ್ಕೆ ಬಂದಿಳಿದ ಲಿಬೇರಿಯನ್‌ ಮಹಿಳೆಯ ಬಳಿ ಬರೋಬ್ಬರಿ 30 ಕೋಟಿ ರು. ಮೌಲ್ಯದ ಮಾದಕವಸ್ತು ಕೊಕೇನ್‌ ಪತ್ತೆಯಾಗಿದೆ.

ಕೆಐಎ ವಿಮಾನ ನಿಲ್ದಾಣದ ಕೇಂದ್ರದ ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು 38 ವರ್ಷದ ಲಿಬೇರಿಯನ್‌ ಮಹಿಳೆಯನ್ನು ಬಂಧಿಸಿ, 30 ಕೋಟಿ ರು. ಮೌಲ್ಯದ 2 ಕೆ.ಜಿ. ಕೊಕೇನ್‌ ಜಪ್ತಿ ಮಾಡಿದ್ದಾರೆ.
ಲಿಬೇರಿಯನ್‌ ಮಹಿಳೆ ಭಾರತದ ಪ್ರವಾಸಿ ವೀಸಾದಲಿ ಇಥಿಯೋಪಿಯನ್‌ ಏರ್‌ಲೈನ್ಸ್‌ನ ವಿಮಾನದಲ್ಲಿ ಅಡಿಸ್‌ ಅಬಾಬಾದಿಂದ ಕೆಐಎ ವಿಮಾನ ನಿಲ್ದಾಣಕ್ಕೆ ಮೇ 26 ರಂದು ಬಂದಿಳಿದ್ದಾಳೆ. ಈ ವೇಳೆ ಹೊರಗೆ ನಡೆದು ಹೋಗುವಾಗ ಆಕೆಯ ನಡವಳಿಕೆ ಅನುಮಾನಾಸ್ಪದವಾಗಿದ್ದ ಹಿನ್ನೆಲೆಯಲ್ಲಿ ಡಿಆರ್‌ಐ ಅಧಿಕಾರಿಗಳು ಆಕೆಯನ್ನು ತಡೆದು ತಪಾಸಣೆ ಮಾಡಿದ್ದಾರೆ. ಬಟ್ಟೆಗಳು ತುಂಬಿದ್ದ ಕಪ್ಪು ಬಣ್ಣದ ಸೂಟ್‌ಕೇಸ್‌ನ ಕೆಳಭಾಗದಲ್ಲಿ ಅಕ್ರಮವಾಗಿ ಮಾದಕವಸ್ತು ಕೊಕೇನ್‌ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ಕೂಡಲೇ ಮಾಲು ಸಹಿತ ಆಕೆಯನ್ನು ಬಂಧಿಸಿದ್ದಾರೆ.

Bengaluru crime: ಮಾತ್ರೆ ರೂಪದಲ್ಲಿ ವ್ಯಕ್ತಿಯ ಹೊಟ್ಟೆಯಲ್ಲಿತ್ತು ಕೊಕೇನ್‌!

ಪ್ರವಾಸಿಗರ ಸೋಗಿನಲ್ಲಿ ಕೊಕೇನ್‌ ಕಳ್ಳಸಾಗಣೆ ಮಾಡಲು ಆಕೆಯ ದುಬಾರಿ ಹಣ ನೀಡಲಾಗಿತ್ತು. ಕೆಐಎ ವಿಮಾನ ನಿಲ್ದಾಣದ ಹೊರಗೆ ಇರುವ ವ್ಯಕ್ತಿಗೆ ಈ ಮಾದಕವಸ್ತು ತಲುಪಿಸಲು ಈಕೆಗೆ ಸೂಚಿಸಲಾಗಿತ್ತು. ಬೆಂಗ ಳೂರಿನಲ್ಲಿ ಕೆಲವು ದಿನ ಉಳಿದುಕೊಳ್ಳಲು ಸ್ಟಾರ್‌ ಹೋಟೆಲ್‌ನಲ್ಲಿ ವ್ಯವಸ್ಥೆ ಮಾಡಲಾಗಿತ್ತು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಆಕೆಯಿಂದ ಮಾದಕವಸ್ತು ಪಡೆಯಲು ವಿಮಾನ ನಿಲ್ದಾಣಕ್ಕೆ ಬಂದಿದ್ದ ವ್ಯಕ್ತಿಯ ಪರಾರಿಯಾಗಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ. ಸದ್ಯ ಲಿಬೇರಿಯನ್‌ ಮಹಿಳೆ ವಿರುದ್ಧ ಎನ್‌ಡಿಪಿಎಸ್‌ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.