ಬೆಂಗಳೂರು(ಅ.23): ಮಾದಕ ವಸ್ತು ಮಾರಾಟ ಪ್ರಕರಣದ ಆರೋಪಿ, ‘ಬಿಗ್‌ ಬಾಸ್‌’ ಸ್ಪರ್ಧಿ ಆ್ಯಡಂ ಪಾಷಾ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಲೈಂಗಿಕ ಅಲ್ಪಸಂಖ್ಯಾತ ವಿಭಾಗದ ಸೆಲ್‌ಗೆ ತೆರಳಲು ತಕರಾರು ತೆಗೆದು ಹೈಡ್ರಾಮಾ ಮಾಡಿರುವ ಘಟನೆ ನಡೆದಿದೆ.

"

ಡ್ರಗ್ಸ್‌ ಪ್ರಕರಣದಲ್ಲಿ ಆ್ಯಡಂನನ್ನು ಬಂಧಿಸಿದ ಎನ್‌ಸಿಬಿ ಅಧಿಕಾರಿಗಳು, ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಬಿಟ್ಟಿದ್ದರು. ಈ ವೇಳೆ ನೋಂದಣಿ ಮುಗಿದ ಬಳಿಕ ಸೆಲ್‌ಗೆ ನಿಯೋಜಿಸುವ ವಿಚಾರದಲ್ಲಿ ಆತ ತಕರಾರು ತೆಗೆದು ರಗಳೆ ಮಾಡಿದ್ದಾನೆ. ತನಗೆ ಪುರುಷರ ಸೆಲ್‌ ಬೇಡ. ಮಹಿಳೆಯರ ಸೆಲ್‌ ಬೇಕು ಎಂದು ಹಠ ಮಾಡಿದ್ದಾನೆ. ಕೊನೆಗೆ ಅಧಿಕಾರಿಗಳು, ಜೈಲಿನ ಕ್ವಾರಂಟೈನ್‌ ಕೇಂದ್ರಕ್ಕೆ ಆ್ಯಡಂ ಪಾಷಾನನ್ನು ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಕಾರಾಗೃಹದಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ ಪ್ರತ್ಯೇಕ ವ್ಯವಸ್ಥೆ ಇದೆ. ಆದರೆ ಆ ವಿಭಾಗಕ್ಕೆ ಹೋಗಲೂ ಆ್ಯಡಂ ನಿರಾಕರಿಸಿದ್ದಾನೆ ಎನ್ನಲಾಗಿದೆ. ‘ನಾನು ಲಿಂಗ ಪರಿವರ್ತನೆಯಾಗಿಲ್ಲ. ನಾನು ಸ್ತ್ರೀಯರ ಉಡುಪು ಧರಿಸುತ್ತೇನೆ ಅಷ್ಟೇ. ನಾನು ಡ್ರಗ್ಸ್‌ ಕ್ವೀನ್‌ ಎಂದೆಲ್ಲ ಪೇಚಾಡಿ ಡ್ರಾಮಾ ಮಾಡಿದ್ದಾನೆ’ ಎಂದು ಹೇಳಲಾಗಿದೆ.

ಪೊಲೀಸರಿಗೆ ತಲೆನೋವು ತಂದ ಆಡಂ ಪಾಷಾ; ಪುರುಷರ ಸೆಲ್ಲಾ? ಮಹಿಳೆಯರ ಸೆಲ್ಲಾ?

ಈ ಹುಚ್ಚಾಟ ಅತಿರೇಕಕ್ಕೆ ಹೋದಾಗ ತಾಳ್ಮೆ ಕಳೆದುಕೊಂಡ ಕಾರಾಗೃಹದ ಅಧಿಕಾರಿಗಳು, ‘ನೀನು ಮನಬಂದಂತೆ ವರ್ತಿಸಿದರೆ ಸಹಿಸುವುದಿಲ್ಲ. ಪೊಲೀಸ್‌ ಠಾಣೆಯಲ್ಲಿ ಕರ್ತವ್ಯಕ್ಕೆ ಅಡ್ಡಪಡಿಸಿದ ಆರೋಪದ ಮೇರೆಗೆ ಪ್ರಕರಣ ದಾಖಲಿಸಬೇಕಾಗುತ್ತದೆ. ಜೈಲಿಗೆ ಹೊಸದಾಗಿ ಬಂದವರನ್ನು ಕಡ್ಡಾಯವಾಗಿ 21 ದಿನಗಳು ಕ್ವಾರಂಟೈನ್‌ನಲ್ಲಿಡಲಾಗುತ್ತದೆ. ನೀನು ಆ ವಿಭಾಗದಲ್ಲಿರಬೇಕು. ಬಳಿಕ ನಿನ್ನ ಅಹವಾಲು ಆಲಿಸಿ ಕ್ರಮ ತೆಗೆದುಕೊಳ್ಳಲಾಗುತ್ತದೆ’ ಎಂದು ಏರಿದ ದನಿಯಲ್ಲಿ ಎಚ್ಚರಿಕೆ ನೀಡಿದ್ದಾರೆ. ಈ ಮಾತಿಗೆ ಬಗ್ಗಿದ ಆ್ಯಡಂ, ಈಗ ಕ್ವಾರಂಟೈನಲ್ಲಿದ್ದಾನೆ ಎಂದು ಮೂಲಗಳು ತಿಳಿಸಿವೆ.