Chikkamagaluru: ದತ್ತಪೀಠದ ಮಾರ್ಗದಲ್ಲಿ ಮೊಳೆ ಸುರಿದಿದ್ದವ ಕೋರ್ಟ್‍ಗೆ ಸರೆಂಡರ್
ಚಿಕ್ಕಮಗಳೂರು ತಾಲೂಕಿನ ದತ್ತಪೀಠದಲ್ಲಿ ನಡೆದ ದತ್ತಜಯಂತಿಯ ಕಾರ್ಯಕ್ರಮದ ಮುನ್ನ ದತ್ತಪೀಠದ ಮಾರ್ಗದಲ್ಲಿ ರಸ್ತೆಯುದ್ಧಕ್ಕೂ ಮೊಳೆಗಳನ್ನ ಚೆಲ್ಲಿದ್ದ ಆರೋಪಿಗಳ ಪೈಕಿ ಮತ್ತೊಬ್ಬ ಆರೋಪಿ ಕೋರ್ಟ್ ಮುಂದೆ ಶರಣಾಗಿದ್ದಾನೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಡಿ.18): ತಾಲೂಕಿನ ದತ್ತಪೀಠದಲ್ಲಿ ನಡೆದ ದತ್ತಜಯಂತಿಯ ಕಾರ್ಯಕ್ರಮದ ಮುನ್ನ ದತ್ತಪೀಠದ ಮಾರ್ಗದಲ್ಲಿ ರಸ್ತೆಯುದ್ಧಕ್ಕೂ ಮೊಳೆಗಳನ್ನ ಚೆಲ್ಲಿದ್ದ ಆರೋಪಿಗಳ ಪೈಕಿ ಮತ್ತೊಬ್ಬ ಆರೋಪಿ ಕೋರ್ಟ್ ಮುಂದೆ ಶರಣಾಗಿದ್ದಾನೆ. ಕಳೆದ ಎರಡು ದಿನಗಳ ಹಿಂದಷ್ಟೆ ಗ್ರಾಮಾಂತರ ಪೊಲೀಸರು ಇಬ್ಬರನ್ನ ಬಂಧಿಸಿದ್ದರು. ಇದೀಗ ಮತ್ತೋರ್ವ ಕೋರ್ಟ್ ಮುಂದೆ ಸರೆಂಡರ್ ಆಗಿದ್ದಾನೆ. ದತ್ತಜಯಂತಿಯ ಅಂಗವಾಗಿ ಜಿಲ್ಲಾಡಳಿತ ಚಿಪ್ಸ್ ಕೆಫೆ ಮೂಲಕ ದತ್ತಪೀಠದಲ್ಲಿ ಸಿಸಿಟಿವಿಗೆ ಕ್ಲ್ಯಾಂಪ್ ಹಾಕಲು ಹೋಗಿದ್ದ ಮಹಮದ್ ಶಹಬಾಸ್ ಹಾಗೂ ವಾಹೀದ್ ಹುಸೇನ್ ಎಂಬ ಇಬ್ಬರನ್ನ ಗ್ರಾಮಾಂತರ ಪೊಲೀಸರು ಬಂಧಿಸಿದ್ದರು.
ಅವರು ಎಲ್ಲಿ ಮೊಳೆ ಖರೀದಿಸಿದರು. ಎಂತಹಾ ಮೊಳೆ. ಎಲ್ಲಾ ಮಾಹಿತಿ ಕಲೆ ಹಾಕಿ ಇಬ್ಬರನ್ನ ಬಂಧಿಸಿದ್ದರು. ಆದರೆ, ಉಳಿದಿ ನಾಲ್ಕೈದು ಜನ ತಲೆಮರೆಸಿಕೊಂಡಿದ್ದರು. ಡಿಸೆಂಬರ್ 6-7-8ರಂದು ದತ್ತಪೀಠದಲ್ಲಿ ದತ್ತಜಯಂತಿ ಕಾರ್ಯಕ್ರಮ ನಡೆದಿತ್ತು. ಡಿಸೆಂಬರ್ 5ನೇ ತಾರೀಖು ಜಿಲ್ಲಾಡಳಿತವೇ ಇವರಿಗೆ ಸಿಸಿಟಿವಿಗೆ ಕ್ಲ್ಯಾಂಪ್ ಹಾಕಲು ಕಳುಹಿಸಿತ್ತು. ಆಗ ಇಬ್ಬರು ದತ್ತಪೀಠದ ಮಾರ್ಗದ ಸುಮಾರು ಮೂರು ಕಿ.ಮೀ.ನಷ್ಟು ದೂರ ಸಣ್ಣ-ಸಣ್ಣ ಮೊಳೆಯನ್ನ ಸುರಿದು ಬಂದಿದ್ದರು. ಇದರಿಂದ ಪೊಲೀಸರ ವಾಹನ ಸೇರಿ ಐದಾರು ಗಾಡಿಗಳು ಪಂಚರ್ ಆಗಿದ್ದವು.
Chikkamagaluru: ದತ್ತಜಯಂತಿ ವೇಳೆ ದತ್ತಪೀಠದ ರಸ್ತೆಯಲ್ಲಿ ಮೊಳೆ ಹಾಕಿದ್ದವರ ಬಂಧನ
ದತ್ತಜಯಂತಿ ಕಾರ್ಯಕ್ರಮಕ್ಕೆ ವಿಘ್ನ ಉಂಟುಮಾಡುವ ಉದ್ದೇಶ: ನಗರವನ್ನ ಕೇಸರಿಮಯವಾಗಿಸಿದ್ದಾರೆ, ನಮ್ಮ ಬಗ್ಗೆ ಅವಹೇಳನಕಾರಿಯಾಗಿ ಕೂಗುತ್ತಾರೆ. ಸಹಿಸಲಾಗದೆ, ಕಾರ್ಯಕ್ರಮವನ್ನ ಹಾಳುಮಾಡಬೇಕೆಂದು ನಾವೇ ಹೀಗೆ ಮಾಡಿದ್ದೇವೆ ಎಂದು ಆರೋಪಿಗಳು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದರು. ಇಬ್ಬರನ್ನ ಅರೆಸ್ಟ್ ಮಾಡಿದ್ದ ಪೊಲೀಸರು ಉಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದರು. ಶುಕ್ರವಾರ ಇಬ್ಬರು ಅರೆಸ್ಟ್ ಆಗುತ್ತಿದ್ದಂತೆ ಶನಿವಾರ ಸಂಜೆ ಓರ್ವ ನೇರವಾಗಿ ಕೋರ್ಟ್ ಹಾಜರಾಗಿದ್ದಾನೆ. ಪ್ರಕರಣ ಸಂಬಂಧ ಒಟ್ಟು ಮೂವರು ಆರೋಪಿಗಳು ಬಂಧನವಾಗಿದ್ದು, ಉಳಿದ ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.