Asianet Suvarna News Asianet Suvarna News

ದರ್ಶನ್ ಕೈಗೆ ಕೋಳ ಹಾಕಿದ್ರೂ ಕಣ್ಣಿಗೆ ಮಾತ್ರ ಕೂಲಿಂಗ್ ಗ್ಲಾಸು; ಬೆಂಗಾವಲು ಪಡೆಗೆ ಕೊಟ್ರು ನೋಟೀಸು!

ನಟ ದರ್ಶನ್‌ ಬಳ್ಳಾರಿ ಜೈಲಿಗೆ ವರ್ಗಾವಣೆ ವೇಳೆ ಕೂಲಿಂಗ್ ಗ್ಲಾಸ್ ಧರಿಸಿದ್ದಕ್ಕೆ  ಬೆಂಗಾವಲು ಪಡೆ ಸಿಬ್ಬಂದಿಗೆ ಸಂಕಷ್ಟ ಎದುರಾಗಿದೆ.  ವಿವರಗಳಿಗಾಗಿ ಓದಿ.

Accused Darshan wearing branded cooling glass puma T Shirt in Ballari Jail sat
Author
First Published Aug 29, 2024, 1:38 PM IST | Last Updated Aug 29, 2024, 1:39 PM IST

ಬೆಂಗಳೂರು/ ಬೆಳಗಾವಿ (ಆ.29): ಕೊಲೆ ಆರೋಪಿ ನಟ ದರ್ಶನ್‌ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಮಾಹಿತಿ ಆಧಾರದಲ್ಲಿ ಬಳ್ಳಾರಿ ಸೆಂಟ್ರಲ್ ಜೈಲಿಗೆ ಶಿಫ್ಟ್ ಮಾಡಲಾಗುತ್ತಿದೆ. ಆದರೆ, ಜೈಲಿಗೆ ವರ್ಗಾವಣೆ ಮಾಡುವ ವೇಳೆ ಆರೋಪಿ ಕೈಗೆ ಕೋಳ ಹಾಕಿದ್ದರೂ, ಆತ ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಪೋಸ್ ಕೊಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಹೋಗುವುದಕ್ಕೆ ಅವಕಾಶ ಮಾಡಿಕೊಟ್ಟ ಬೆಂಗಾವಲು ಪಡೆ ಸಿಬ್ಬಂದಿಗೆ ಈಗ ಸಂಕಷ್ಟ ಶುರುವಾಗಿದೆ.

ರಾಜ್ಯದಲ್ಲಿ ತೀವ್ರ ಚರ್ಚೆಯಲ್ಲಿರುವ ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್‌ಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾದ ಬೆನ್ನಲ್ಲಿಯೇ ಆತನನ್ನು ಬಳ್ಳಾರಿ ಜೈಲಿಗೆ ವರ್ಗಾವಣೆ ಮಾಡುವಂತೆ ನ್ಯಾಯಾಲಯ ಆದೇಶ ಹೊರಡಿಸಿದೆ. ಆದರೆ, ಬೆಂಗಳೂರು ಜೈಲಿನಿಂದ ಬಳ್ಳಾರಿ ಜೈಲಿಗೆ ಆತನನ್ನು ವರ್ಗಾವಣೆ ಮಾಡುವ ವೇಳೆ ಕೈಗೆ ಬೇಡಿಯನ್ನು ಹಾಕಿದ್ದರೂ, ಆತ ಜೈಲಿನೊಳಗೆ ಹೋಗುವಾಗ ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಶೋಕಿ ಮಾಡಿದ್ದಾನೆ. ಆದರೆ, ಹೀಗೆ ಒಬ್ಬ ಕೊಲೆ ಆರೋಪಿಯಾಗಿ ಜೈಲಿಗೆ ಕಳಿಸಿದರೂ ತಾನು ಈಗಲೂ ಹೀರೋ ಎಂಬಂತೆ ಕೂಲಿಂಗ್ ಗ್ಲಾಸ್ ಹಾಕಿಕೊಳ್ಳಲು ಅವಕಾಶ ಮಾಡಿಕೊಟ್ಟ ಬೆಂಗಾವಲು ಪಡೆ ವಿರುದ್ಧ ಕ್ರಮ ಕೈಳ್ಳುವಂತೆ ಬೆಳಗಾವಿ ವಿಭಾಗದ ಹಿರಿಯ ಅಧಿಕಾರಿಗಳು ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಮಹಾನಿರ್ದೇಶರಿಗೆ ಪತ್ರ ಬರೆದಿದ್ದಾರೆ.

ಕೈಗೆ ಕೋಳ, ಕೂಲಿಂಗ್ ಗ್ಲಾಸ್ ಸಮೇತ ಬಳ್ಳಾರಿ ಜೈಲಿಗೆ ಬಂದ ದರ್ಶನ್‌ಗೆ ಮತ್ತೊಂದು ಸಂಕಷ್ಟ!

ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ರಾಜಾತಿಥ್ಯ ಹೊಂದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಸ್ತುಕ್ರಮದ ಮೇರೆಗೆ ಕೇಂದ್ರ ಕಾರಾಗೃಹ, ಬಳ್ಳಾರಿಗೆ ದಿನಾಂಕ ಆ.29ರಂದು ವಿಚಾರಣಾಧೀನ ಬಂದಿ ದರ್ಶನ್ ದಾಖಲಾಗುತ್ತಿರುವ ಸಮಯದಲ್ಲಿ ಕೂಲಿಂಗ್ ಗ್ಲಾಸ್ ಧರಿಸಿರುವ ಬಗ್ಗೆ ಸುದ್ದಿ ವಾಹಿನಿಗಳಲ್ಲಿ ವರದಿ ಪ್ರಸಾರವಾಗುತ್ತಿರುತ್ತದೆ. ಸದರಿ ಬಂದಿಯ ಬೆಂಗಾವಲಿಗಾಗಿ ನಿಯೋಜಿಸಿದ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳು ವಿಚಾರಣಾಧೀನ ಬಂದಿ ದರ್ಶನ್ ಎಂಬಾತನಿಗೆ ಕೂಲಿಂಗ್ ಗ್ಲಾಸ್ ಧರಿಸಲು ಹಾಗೂ ಬಳಕೆ ಮಾಡಲು ಅನುಮತಿಸಿದ್ದು, ಸದರಿ ವಿಷಯವು ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವುದರಿಂದ ಸಾರ್ವಜನಿಕರು ಹಾಗೂ ರಾಜ್ಯದ ಜನತೆಗೆ ಕಾರಾಗೃಹ ಇಲಾಖೆಯೇ ಸದರಿ ಬಂದಿಗೆ ರಾಜಾತಿಥ್ಯ ನೀಡುತ್ತಿರುವುದಾಗಿ ತಪ್ಪು ಕಲ್ಪನೆಗಳು ಬಿಂಬಿತವಾಗುತ್ತಿದ್ದು, ಇದರಿಂದ ಇಲಾಖೆಯ ಘನತೆಗೆ ಧಕ್ಕೆ ಉಂಟಾಗುತ್ತಿರುತ್ತದೆ.

ಪ್ರೀತಿಸಿ ಮದುವೆಯಾದ ಸುಂದರಾಂಗಿ ಹೆಂಡ್ತಿಯ ಶೀಲ ಶಂಕಿಸಿ, ಕೊಂದೇಬಿಟ್ಟ ಗಂಡ!

ದರ್ಶನ್ ಎಂಬ ಬಂದಿಯ ಬೆಂಗಾವಲಿಗಾಗಿ ನಿಯೋಜಿಸಿದ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳು ಸದರಿ ಬಂದಿಯ ಸ್ವಂತ ವಸ್ತುಗಳನ್ನು ನಿಯಮಾನುಸಾರ ಕಾರಾಗೃಹದ ಮುಖ್ಯದ್ವಾರದಲ್ಲಿ ಸದರಿ ಒಪ್ಪಿಸಬೇಕಾಗಿರುತ್ತದೆ. ರಾಜ್ಯವ್ಯಾಪಿಯಾಗಿ ದರ್ಶನ್ ಬಂದಿಯ ರಾಜಾತಿಥ್ಯದ ಬಗ್ಗೆ ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದು, ಬಂದಿಯ ಪ್ರತಿಯೊಂದು ಚಿಕ್ಕ ಚಟುವಟಿಕೆಗಳ ಮೇಲೆ ಸುದ್ದಿ ವಾಹಿನಿಗಳು ನಿಗಾ ವಹಿಸುತ್ತಿರುವ ಬಗ್ಗೆ ಗೊತ್ತಿದ್ದರೂ ಕೂಡ ಬೆಂಗಾವಲು ಸಿಬ್ಬಂದಿಗಳು ಸದರಿ ಬಂದಿಗೆ ನಿಯಮಬಾಹಿರವಾಗಿ ಕೂಲಿಂಗ್ ಗ್ಲಾಸ್ ಧರಿಸಲು ಅನುಮತಿಸಿದ್ದಾರೆ. ಸದರಿ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳ ಕರ್ತವ್ಯಲೋಪದ ಹಿನ್ನಲೆಯಲ್ಲಿ ಸೂಕ್ತ ಶಿಸ್ತು ಕ್ರಮ ಜರುಗಿಸಲು ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಕ್ಕೆ ವರದಿ ಸಲ್ಲಿಸುವಂತೆ ಮಾನ್ಯರಲ್ಲಿ ಕೋರಿ ಒಪ್ಪಿಸಿದೆ.

Latest Videos
Follow Us:
Download App:
  • android
  • ios