Asianet Suvarna News Asianet Suvarna News

ಬೆಳಗಾವಿ: ಹುಲಿ ಬೇಟೆಯಾಡಿ ವಿದೇಶಕ್ಕೆ ಮಾರಾಟ ಮಾಡ್ತಿದ್ದ ಆರೋಪಿ ಸೆರೆ

ಬಂಧಿತ ಕೃಷ್ಣಾನ ವರ್ತನೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ ವಲಯ ಅರಣ್ಯ ಅಧಿಕಾರಿ ನಾಗರಾಜ ಅವರಿಗೆ ಆತನ ಬಗ್ಗೆ ಅನುಮಾನಗೊಂಡು ತೀವ್ರ ವಿಚಾರಣೆ ನಡೆಸಿದಾಗ ಆತ ಇದುವರೆಗೂ ದೇಶದ ವಿವಿಧ ಭಾಗಗಳಲ್ಲಿ ಹುಲಿಗಳನ್ನು ಬೇಟೆಯಾಡಿದ ಬಗ್ಗೆ ಮಾಹಿತಿ ಲಭ್ಯವಾಗಿದೆ. 

Accused Arrested Who Hunting Tigers and Selling them Abroad at Khanapur in Belagavi grg
Author
First Published Oct 15, 2023, 11:07 AM IST

ಖಾನಾಪುರ(ಅ.15):  ಮಹಾರಾಷ್ಟ್ರ, ಮಧ್ಯಪ್ರದೇಶ ಸೇರಿದಂತೆ ದೇಶದ ವಿವಿಧ ಅಭಯಾರಣ್ಯಗಳಲ್ಲಿ ಹುಲಿಗಳನ್ನು ಬೇಟೆಯಾಡಿ ಅದರ‌ ದೇಹದ ಭಾಗಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದ ಬೇಟೆಗಾರನನ್ನು ಖಾನಾಪುರ ವಲಯ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಶುಕ್ರವಾರ ಬಂಧಿಸಿದ್ದಾರೆ.

ಮಧ್ಯಪ್ರದೇಶ ರಾಜ್ಯದ ದಾಮೋ‌ ಜಿಲ್ಲೆಯ ಅಂತಾರಾಜ್ಯ ಹುಲಿ ಬೇಟೆಗಾರ ಚಿಕಾ ಅಲಿಯಾಸ್ ಕೃಷ್ಣಾ ಪಟ್ಟೆ ಪವಾ‌ರ್ ಬಂಧಿತ ಆರೋಪಿ. ಈತ ಕಳೆದ ಜುಲೈನಲ್ಲಿ ತಾಲೂಕಿನ ಜಳಗಾ ಗ್ರಾಮದ ಬಳಿಯ ಶ್ರೀಗಂಧ ನೆಡುತೋಪಿನಲ್ಲಿ ಇಲಾಖೆಯಿಂದ ನೆಟ್ಟಿದ್ದ ಶ್ರೀಗಂಧದ ಮರಗಳ ಕಳ್ಳತನ ಮಾಡಿದ್ದ‌ ಎಂದು ಇಲಾಖೆಯಲ್ಲಿ ಪ್ರಕರಣ ದಾಖಲಾಗಿತ್ತು. ಶ್ರೀಗಂಧ ಮರಗಳ‌ ಕಳ್ಳತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಅರಣ್ಯಾಧಿಕಾರಿಗಳು ಖಾನಾಪುರ ವಲಯ ಅರಣ್ಯ ಅಧಿಕಾರಿ ನಾಗರಾಜ ಬಾಳೆಹೊಸೂರ ನೇತೃತ್ವದ ಮಹತ್ವದ ಕಾರ್ಯಾಚರಣೆಯಲ್ಲಿ ಕಳ್ಳರ ಪತ್ತೆಗೆ ಬಲೆ ಬೀಸಿದ್ದರು. ಕಳೆದ ಕೆಲ ದಿನಗಳ ಹಿಂದೆ ಶ್ರೀಗಂಧ ಕಳ್ಳತನದ ಆರೋಪಿಗಳು ಬೆಳಗಾವಿ ತಾಲೂಕಿನ ಕಲಖಾಂಬ ಗ್ರಾಮದ ಬಳಿ ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಇಲಾಖೆಗೆ ಲಭ್ಯವಾಗಿತ್ತು. ಶುಕ್ರವಾರ ಕಲಖಾಂಬ ಬಳಿ ಸಿಬ್ಬಂದಿ ಸಮೇತ ದಾಳಿ ನಡೆಸಿದ ವಲಯ ಅರಣ್ಯ ಅಧಿಕಾರಿ ನಾಗರಾಜ್, ಟೆಂಟ್ ಒಂದರಲ್ಲಿ ಇಟ್ಟಿದ್ದ ಶ್ರೀಗಂಧ ತುಂಡುಗಳು ಹಾಗೂ ಹರಿತವಾದ ಆಯುಧಗಳನ್ನು ವಶಪಡಿಸಿಕೊಂಡು ಸ್ಥಳದಲ್ಲಿ ಇದ್ದ ಆರೋಪಿ ಕೃಷ್ಣಾನನ್ನು ವಶಕ್ಕೆ ಪಡೆದಿದ್ದರು.

ಮಹಾರಾಷ್ಟ್ರಕ್ಕೆ ಗಾಂಜಾ ಸಾಗಿಸುತ್ತಿದ್ದವರ ಬಂಧನ: 47 ಲಕ್ಷ ಮೌಲ್ಯದ ಮಾದಕ ವಸ್ತು ವಶ

ಬಂಧಿತ ಕೃಷ್ಣಾನ ವರ್ತನೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ ವಲಯ ಅರಣ್ಯ ಅಧಿಕಾರಿ ನಾಗರಾಜ ಅವರಿಗೆ ಆತನ ಬಗ್ಗೆ ಅನುಮಾನಗೊಂಡು ತೀವ್ರ ವಿಚಾರಣೆ ನಡೆಸಿದಾಗ ಆತ ಇದುವರೆಗೂ ದೇಶದ ವಿವಿಧ ಭಾಗಗಳಲ್ಲಿ ಹುಲಿಗಳನ್ನು ಬೇಟೆಯಾಡಿದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಬಳಿಕ ಆತನ‌ ಕುರಿತು ಇಲಾಖೆಯಲ್ಲಿ ಮಾಹಿತಿ ಸಂಗ್ರಹಿಸಿದಾಗ ಆತ ನಡೆಸಿದ ಹುಲಿ ಬೇಟೆ ಹಾಗೂ ಇತರೆ ಅಪರಾಧ ಕೃತ್ಯಗಳ ಬಗ್ಗೆ ಮಾಹಿತಿ ಲಭ್ಯವಾಗಿದೆ. ಜೊತೆಗೆ ಈತನ ಮೇಲೆ ಈಗಾಗಲೇ ಮಹಾರಾಷ್ಟ್ರ ರಾಜ್ಯದ ಅಮರಾವತಿ ಜಿಲ್ಲೆಯ ಮೇಲಘಾಟ್ ಅರಣ್ಯದಲ್ಲಿ ಹುಲಿ, ಕರಡಿಗಳನ್ನು ಬೇಟೆಯಾಡಿರುವ ಪ್ರಕರಣಗಳಿವೆ ಹಾಗೂ ಕೆಲ ವರ್ಷಗಳ ಹಿಂದೆ ಮೃತಪಟ್ಟ ಕುಖ್ಯಾತ ಹುಲಿ ಬೇಟೆಗಾರ ಸಂಸಾ‌ ಚಂದ್‌ ತಂಡದ ಸದಸ್ಯನಾಗಿ ಹಲವು ಕೃತ್ಯಗಳಲ್ಲಿ ಭಾಗಿಯಾಗಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ಬೆಳಗಾವಿ ಉಪಅರಣ್ಯ ಸಂರಕ್ಷಣಾಧಿಕಾರಿ ಶಂಕರ್ ಕಲ್ಲೋಳಿಕ‌ರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಖಾನಾಪುರ ವಲಯ ಅರಣ್ಯ ಅಧಿಕಾರಿ ಮತ್ತು ಸಿಬ್ಬಂದಿಯ ತಂಡ ಆರೋಪಿ ಕೃಷ್ಣಾನನ್ನು ಬಂಧಿಸಿದ್ದು, ಬಂಧಿತನನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ. 

ಪ್ರಕರಣದ ಕುರಿತು ಮಹಾರಾಷ್ಟ್ರ ರಾಜ್ಯದ ಅರಣ್ಯ ಇಲಾಖೆ ಹಾಗೂ ವನ್ಯಜೀವಿ ಅವರಾಧ ನಿಯಂತ್ರಣ ಬ್ಯೂರೋ ಜೊತೆಗೆ ಸಂವಹನ ಸಾಧಿಸಿ ವಿವರವಾದ ತನಿಖೆ ನಡೆಸುವಂತೆ ಹಾಗೂ ಶೀಘ್ರ ವರದಿ ಸಲ್ಲಿಸುವಂತೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಉಪ ಅರಣ್ಯ ಮಹಾ ನಿರೀಕ್ಷಕರು ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಸೂಚಿಸಿದ್ದು, ಹಿರಿಯ ಅಧಿಕಾರಿಗಳ ಸೂಚನೆ ಹಾಗೂ ಮಾರ್ಗದರ್ಶನದ ಮೇರೆಗೆ ವಿಚಾರಣೆ ಪ್ರಗತಿಯಲ್ಲಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ. ಖಾನಾಪುರ ವಲಯ ಅರಣ್ಯ ಅಧಿಕಾರಿಗಳ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios